ಚಾಮರಾಜನಗರದಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರ ಅಭಿಮಾನಿಗಳು ಪ್ರತಿಭಟನೆ ಮಾಡಿದ್ದಾರೆ. ಸುದೀಪ್ ಮೇಲೆ ಆರೋಪಗಳನ್ನು ಹೊರಿಸಿದ ನಿರ್ಮಾಪಕರ ವಿರುದ್ಧ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರ್ಮಾಪಕರಾದ ಎ. ಗಣೇಶ್ , ಪ್ರವೀಣ್ ಹಾಗು ಎನ್.ಎಂ. ಸುರೇಶ್ ಅವರ ಪೋಟೋಗೆ ಸುದೀಪ್ ಅಭಿಮಾನಿಗಳು (Kichcha Sudeep Fans) ಚಪ್ಪಲಿಯಲ್ಲಿ ಹೊಡೆದಿದ್ದಾರೆ. ಕಳೆದ ಕೆಲವು ದಿನಗಳಿಂದ ಸುದೀಪ್ ಮತ್ತು ಎಂ.ಎನ್. ಕುಮಾರ್ ನಡುವಿನ ಜಟಾಪಟಿ ಜೋರಾಗಿದೆ. ಸುದೀಪ್ ಅವರು ಅಡ್ವಾನ್ಸ್ ಹಣ ಪಡೆದು ಸಿನಿಮಾ ಮಾಡಿಲ್ಲ ಅಂತ ಎಂ.ಎನ್. ಕುಮಾರ್ (MN Kumar) ಮತ್ತು ರೆಹಮಾನ್ ಆರೋಪ ಮಾಡಿದ್ದಾರೆ. ಅವರ ವಿರುದ್ಧ ಸುದೀಪ್ ಫ್ಯಾನ್ಸ್ ಗರಂ ಆಗಿದ್ದಾರೆ.
ಚಾಮರಾಜನಗರದಲ್ಲಿ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ. ಇನ್ನೂ ಕೆಲವು ಅಭಿಮಾನಿಗಳು ಬೆಂಗಳೂರಿನಲ್ಲಿ ಫಿಲ್ಮ್ ಚೇಂಬರ್ಗೆ ಮನವಿ ಸಲ್ಲಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್ಗೆ ಮನವಿ ಪತ್ರ ನೀಡಲಾಗಿದೆ. ‘ಎಂಟು-ಹತ್ತು ದಿನಗಳಿಂದ ಸುದೀಪ್ ಅವರ ಮೇಲೆ ಆರೋಪ ಮಾಡಿದ್ದಾರೆ. ಅದು ಶುದ್ಧ ಸುಳ್ಳು. ಸುದೀಪಣ್ಣ ನಿರ್ಮಾಪಕರಿಗೆ ಎಷ್ಟು ಸಹಾಯ ಮಾಡಿದ್ದಾರೆ ಅಂತ ಎಲ್ಲರಿಗೂ ಗೊತ್ತು’ ಎಂದು ಅಭಿಮಾನಿಗಳು ಹೇಳಿದ್ದಾರೆ.
‘ನಿರ್ಮಾಪಕರು ಆಧಾರಗಳಿಲ್ಲದೆ ಆರೋಪವನ್ನ ಮಾಡುತ್ತಿದ್ದಾರೆ. ನಾವು ಇದನ್ನ ಖಂಡಿಸುತ್ತೇವೆ. ಈ ಕೂಡಲೇ ಸುದೀಪ್ ಅವರಿಗೆ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ನಿರ್ಮಾಪಕರ ಮನೆ ಮುಂದೆ ಕೂತು ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ಆಧಾರ ಇಲ್ಲದೆ ಮಾತನಾಡುವವರನ್ನು ಫಿಲ್ಮ್ ಚೇಂಬರ್ಗೆ ಸೇರಿಸಲೇಬಾರದು. ರೆಹಮಾನ್ 20 ವರ್ಷದ ಹಿಂದಿನ ಕೇಸ್ ಇಟ್ಟುಕೊಂಡು ಬಂದಿದ್ದಾರೆ. ಬೇರೆ ಸಂದರ್ಶನದಲ್ಲಿ ಚೆನ್ನಾಗಿ ಮಾತನಾಡಿ ಈಗ ಆರೋಪ ಮಾಡುತ್ತಿದ್ದಾರೆ. ಇದರ ಹಿಂದೆ ದೊಡ್ಡ ಪಿತೂರಿ ನಡೆಯುತ್ತಿದೆ. ಇನ್ನೆರಡು-ಮೂರು ದಿನಗಳಲ್ಲಿ ಕ್ಷಮೆ ಕೇಳದಿದ್ದರೆ ನಾವು ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ’ ಎಂದು ಫ್ಯಾನ್ಸ್ ಹೇಳಿದ್ದಾರೆ.
ಇದನ್ನೂ ಓದಿ: Kichcha Sudeep: ಸುದೀಪ್ ವರ್ಸಸ್ ಎಂ.ಎನ್. ಕುಮಾರ್ ವಿವಾದ ಹುಟ್ಟಿಕೊಂಡಿದ್ದು ಹೇಗೆ? ಪೂರ್ತಿ ಮಾಹಿತಿ ಇಲ್ಲಿದೆ..
ಕಿಚ್ಚ ಸುದೀಪ್ ಮೇಲೆ ನಿರ್ಮಾಪಕರು ಮಾಡಿದ ಆರೋಪಗಳಿಗೆ ಫ್ಯಾನ್ಸ್ ಕೋಪಗೊಂಡಿದ್ದಾರೆ. ಹಾಗಾಗಿ ಫಿಲ್ಮ್ ಚೇಂಬರ್ಗೆ ಮನವಿ ಪತ್ರ ನೀಡಿದ್ದಾರೆ. ಆ ಬಗ್ಗೆ ಚೇಂಬರ್ ಅಧ್ಯಕ್ಷ ಭಾ.ಮ. ಹರೀಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಸುದೀಪ್ ಅವರ ಅಭಿಮಾನಿಗಳಿಂದ ಮನವಿ ಪತ್ರ ಬಂದಿದೆ. ಸುದೀಪ್ ವಿರುದ್ಧ ಅಪಪ್ರಚಾರ ಮಾಡುತ್ತಿರುವವರು ಕ್ಷಮೆ ಕೇಳಬೇಕು ಅಂತ ಪತ್ರದಲ್ಲಿ ಒತ್ತಾಯಿಸಿದ್ದಾರೆ. ನಿನ್ನೆ ಸುದೀಪ್ ಅವರ ಪತ್ರ ಬಂದಿದೆ. ಅವರು ಕಾನೂನಾತ್ಮಕವಾಗಿ ಹೋರಾಟ ಮಾಡುವುದಾಗಿ ಹೇಳಿದ್ದಾರೆ. ನಿರ್ಮಾಪಕರಿಗೆ ನಾವು ಹೇಳುತ್ತೇವೆ. ಕ್ಷಮೆ ಕೇಳೋದು ಬಿಡೋದು ಅವರಿಗೆ ಬಿಟ್ಟಿದ್ದು’ ಎಂದು ಭಾ.ಮ. ಹರೀಶ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.