‘ಡಿಯರ್ ಹಸ್ಬೆಂಡ್’ ಸಿನಿಮಾಗೆ ಸಿಕ್ತು ಕಿಚ್ಚ ಸುದೀಪ್ ಬೆಂಬಲ; ಟೈಟಲ್ ಟೀಸರ್ ನೋಡಿ..

ನಟ ಕಿಚ್ಚ ಸುದೀಪ್ ಅವರು ‘ಡಿಯರ್ ಹಸ್ಬೆಂಡ್’ ಸಿನಿಮಾ ತಂಡದ ಬೆನ್ನು ತಟ್ಟಿದ್ದಾರೆ. ಟೀಸರ್ ಬಿಡುಗಡೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಸೂರಜ್ ಗೌಡ, ಶರಣ್ಯಾ ಶೆಟ್ಟಿ ಮತ್ತು ಪ್ರವೀಣ್ ಅವರು ಪ್ರಮುಖ ಪಾತ್ರಗಳನ್ನು ಮಾಡುತ್ತಿದ್ದಾರೆ. ಗುರುರಾಜ ಕುಲಕರ್ಣಿ ನಿರ್ದೇಶನ ಮಾಡುತ್ತಿರುವ ‘ಡಿಯರ್ ಹಸ್ಬೆಂಡ್’ ಸಿನಿಮಾಗೆ ಶೀಘ್ರದಲ್ಲೇ ಶೂಟಿಂಗ್ ಶುರು ಆಗಲಿದೆ.

‘ಡಿಯರ್ ಹಸ್ಬೆಂಡ್’ ಸಿನಿಮಾಗೆ ಸಿಕ್ತು ಕಿಚ್ಚ ಸುದೀಪ್ ಬೆಂಬಲ; ಟೈಟಲ್ ಟೀಸರ್ ನೋಡಿ..
Dear Husband Movie Team

Updated on: Jan 14, 2026 | 4:16 PM

ಟೈಟಲ್ ಟೀಸರ್ ಮೂಲಕ ‘ಡಿಯರ್ ಹಸ್ಬೆಂಡ್’ ಸಿನಿಮಾ ಗಮನ ಸೆಳೆದಿದೆ. ಕಿಚ್ಚ ಸುದೀಪ್ (Kichcha Sudeep) ಅವರು ಇತ್ತೀಚೆಗೆ ಬೆಂಗಳೂರಿನ ‘ಫಿನಿಕ್ಸ್ ಮಾಲ್ ಆಫ್ ಏಷ್ಯಾ’ದಲ್ಲಿ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿದರು. ‘ಜಿ9 ಕಮ್ಯುನಿಕೇಶನ್ ಆ್ಯಂಡ್ ಮೀಡಿಯಾ’ ಹಾಗೂ ‘ನಿರಂತರ ಪ್ರೊಡಕ್ಷನ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಗುರುರಾಜ ಕುಲಕರ್ಣಿ (ನಾಡಗೌಡ) ಅವರು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ‘ಡಿಯರ್ ಹಸ್ಬೆಂಡ್’ (Dear Husband) ಚಿತ್ರದಲ್ಲಿ ಸೂರಜ್ ಗೌಡ, ಶರಣ್ಯಾ ಶೆಟ್ಟಿ, ಪ್ರವೀಣ್ ಅವರು ನಟಿಸುತ್ತಿದ್ದಾರೆ.

ಈ ವೇಳೆ ಕಿಚ್ಚ ಸುದೀಪ್ ಮಾತನಾಡಿದರು. ‘ನಾವು ಚಿತ್ರರಂಗಕ್ಕೆ ಹೊಸಬರಾಗಿ ಬಂದಾಗ ಅನೇಕ ಹಿರಿಯರು ನಮಗೆ ಪ್ರೋತ್ಸಾಹಿಸಿ ಬೆನ್ನು ತಟ್ಟಿದ್ದರು. ಅದೇ ಕೆಲಸವನ್ನು ನಾವು ಈಗ ಹೊಸಬರಿಗೆ ಮಾಡುತ್ತಿದ್ದೇವೆ. ಅಂತಿಮವಾಗಿ ಕನ್ನಡ ಚಿತ್ರರಂಗ ಬೆಳೆಯಬೇಕು. ಇಡೀ ಚಿತ್ರತಂಡಕ್ಕೆ ಶುಭವಾಗಲಿ. ಹೊಸಬರ ತಂಡದ ಮೂಲಕ ಖಂಡಿತವಾಗಿಯೂ ಹೊಸ ರೀತಿಯ ಸಿನಿಮಾ ಬರಲಿದೆ’ ಎಂದು ಹೇಳಿದರು.

ಟೈಟಲ್ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಕಿಚ್ಚ ಸುದೀಪ್ ಅವರ ಜೊತೆ ಕುಮಾರ್ ಬಂಗಾರಪ್ಪ, ಪ್ರವೀಣ್ ತೇಜ್, ವಿ. ಹರಿಕೃಷ್ಣ, ಶಶಾಂಕ್, ಎ.ಪಿ. ಅರ್ಜುನ್, ವೈಶಾಕ್ ವಿಜಯಕುಮಾರ್, ರಿತೇಶ್ ಮುಂತಾದವರು ಆಗಮಿಸಿದ್ದರು. ಈ ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿವೆ. ಇದೇ ತಿಂಗಳ ಅಂತ್ಯದಿಂದ ಶೂಟಿಂಗ್ ಆರಂಭವಾಗಲಿದೆ. ಬೆಂಗಳೂರು, ಗೋವಾ ಮತ್ತಿತರ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗುವುದು.

‘ಡಿಯರ್ ಹಸ್ಬೆಂಡ್’ ಟೈಟಲ್ ಟೀಸರ್:

ಸಚಿನ್ ಬಸ್ರೂರು ಅವರು ಟೈಟಲ್ ಟೀಸರ್​ಗೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ಸಂಯೋಜಿಸುತ್ತಿದ್ದಾರೆ. ಪ್ರಮೋದ್ ಮರವಂತೆ ಅವರ ಗೀತರಚನೆ ಹಾಗೂ ರಘು ನಿಡುವಳ್ಳಿ ಅವರ ಸಂಭಾಷಣೆ ಈ ಚಿತ್ರಕ್ಕೆ ಇರಲಿದೆ. ಹರ್ಷ ಕುಮಾರ್ ಗೌಡ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಬಿ.ಎಸ್. ಕೆಂಪರಾಜ್ ಅವರು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.

ಇದನ್ನೂ ಓದಿ: ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದುಗಳು ನೋಡಿ..

ನಿರ್ಮಾಪಕ ಡಾ. ನಿರಂತರ ಗಣೇಶ್ ಅವರು ‘ಐರಾವನ್’ ಬಳಿಕ ನಿರ್ಮಾಣ ಮಾಡುತ್ತಿರುವ 2ನೇ ಸಿನಿಮಾ ಇದು. ಇಂದಿನ ಪ್ರೇಕ್ಷಕರಿಗೆ ಇಷ್ಟವಾಗುವಂತೆ ಸಿನಿಮಾ ಮೂಡಿಬರುತ್ತಿದೆ ಎಂದು ಅವರು ಹೇಳಿದರು. ‘ನೋಡುಗರಿಗೆ ಈ ಸಿನಿಮಾ ಖಂಡಿತವಾಗಿಯೂ ಹೊಸಥರದ ಅನುಭವ ನೀಡಲಿದೆ’ ಎಂದು ನಿರ್ದೇಶಕ ಗುರುರಾಜ ಕುಲಕರ್ಣಿ ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.