‘ತಾಯವ್ವ’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ; ಹಾಡು ಬಿಡುಗಡೆ ಮಾಡಿದ ಸುದೀಪ್

|

Updated on: Jan 23, 2025 | 6:58 PM

ಗೀತಪ್ರಿಯಾ ಅವರು ‘ತಾಯವ್ವʼ ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರದ ಬಹುತೇಕ ಕೆಲಸ ಕಾರ್ಯಗಳು ಪೂರ್ಣಗೊಂಡಿವೆ. ನಟ ಕಿಚ್ಚ ಸುದೀಪ್ ಅವರು ಈ ಸಿನಿಮಾದ ಸಾಂಗ್ಸ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಬಂದ ಸುದೀಪ್ ಅವರು ನೆನಪಿನ ಪುಟ ತೆರೆದರು.

‘ತಾಯವ್ವ’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ; ಹಾಡು ಬಿಡುಗಡೆ ಮಾಡಿದ ಸುದೀಪ್
Thayavva Movie Team
Follow us on

ಕಿಚ್ಚ ಸುದೀಪ್ ಅವರು ಮೊದಲ ಬಾರಿಗೆ ಹೀರೋ ಆಗಿ ನಟಿಸಿದ ಸಿನಿಮಾ ‘ತಾಯವ್ವ’. 1997ರಲ್ಲಿ ಆ ಸಿನಿಮಾ ಬಿಡುಗಡೆ ಆಗಿತ್ತು. ವಿಶೇಷ ಏನೆಂದರೆ, ಈಗ ಮತ್ತೆ ಅದೇ ಶೀರ್ಷಿಕೆಯಲ್ಲಿ ಹೊಸ ಸಿನಿಮಾ ಮೂಡಿಬರುತ್ತಿದೆ. ಈ ಸಿನಿಮಾಗೆ ಕಿಚ್ಚ ಸುದೀಪ್ ಅವರ ಬೆಂಬಲ ಸಿಕ್ಕಿದೆ. ಈ ಬಾರಿ ‘ತಾಯವ್ವ’ ಸಿನಿಮಾದಲ್ಲಿ ಗೀತಪ್ರಿಯಾ ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಹಾಡುಗಳ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಸುದೀಪ್ ಅವರು ಅತಿಥಿಯಾಗಿ ಬಂದು ಹಾಡುಗಳನ್ನು ಅನಾವರಣ ಮಾಡಿದರು.

ಕಾರ್ಯಕ್ರಮದಲ್ಲಿ ಸುದೀಪ್ ಅವರು ಮಾತನಾಡಿದರು. ‘ನಾನು ಆಗಷ್ಟೇ ಕಾಲೇಜು ಮುಗಿಸುತ್ತಿರುವ ಸಂದರ್ಭದಲ್ಲಿ ತಾಯವ್ವ ಚಿತ್ರದಲ್ಲಿ ನಟಿಸುವ ಚಾನ್ಸ್ ಸಿಕ್ಕಿತ್ತು. ಮೊದಲ ಬಾರಿಗೆ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಈ ಸಿನಿಮಾ ನನಗೆ ಸಾಕಷ್ಟು ವಿಷಯಗಳನ್ನು ಕಲಿಸಿತು. ನನ್ನ ವೃತ್ತಿಜೀವನದಲ್ಲಿ ತಾಯವ್ವ ಚಿತ್ರ ಇಂದಿಗೂ ಒಂದು ಸುಮಧುರ ನೆನಪಾಗಿ ಉಳಿದುಕೊಂಡಿದೆ. ಈಗ ಅದೇ ತಾಯವ್ವ ಹೆಸರಿನಲ್ಲಿ ಇನ್ನೊಂದು ಸಿನಿಮಾ ಬರುತ್ತಿರುವುದು ಖುಷಿಯ ವಿಷಯ. ತಾಯವ್ವ ಎಂಬ ಶೀರ್ಷಿಕೆಯಲ್ಲಿ ಒಂದು ಎಮೋಷನಲ್ ಸೆಳೆತ ಇದೆ. ಈ ಚಿತ್ರದಲ್ಲೂ ಅದೇ ಅಂಶಗಳು ಇರಬಹುದು ಎನ್ನುವ ನಿರೀಕ್ಷೆಯಿದೆ. ಸಿನಿಮಾಗೆ ಒಳ್ಳೆಯದಾಗಲಿʼ ಎಂದು ಸುದೀಪ್ ವಿಶ್ ಮಾಡಿದರು.

‘ತಾಯವ್ವʼ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿವೆ. ಅನಂತ ಆರ್ಯನ್‌ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಮುಖ್ಯ ಪಾತ್ರದಲ್ಲಿ ನಟಿಸಿರುವ ಗೀತಪ್ರಿಯಾ ಅವರೇ ಈ ಸಿನಿಮಾದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಗ್ರಾಮೀಣ ಸೊಗಡಿನ ಜನಪದ ಹಾಡುಗಳ ಈ ಸಿನಿಮಾದಲ್ಲಿ ಇದೆ. ಹಿರಿಯ ನಿರ್ಮಾಪಕ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ.ಮ. ಹರೀಶ್‌ ಅವರು ‘ಭಾ.ಮ. ಹರೀಶ್‌ ಆಡಿಯೋʼ ಕಂಪನಿ ಆರಂಭಿಸಿದ್ದಾರೆ. ಈ ಕಂಪನಿ ಮೂಲಕ ‘ತಾಯವ್ವʼ ಸಿನಿಮಾ ಹಾಡುಗಳು ರಿಲೀಸ್ ಆಗಿವೆ.

ಇದನ್ನೂ ಓದಿ: ‘ಅತ್ಯುತ್ತಮ ನಟ’ ರಾಜ್ಯ ಪ್ರಶಸ್ತಿ ನಿರಾಕರಿಸಿದ ಸುದೀಪ್; ಕಾರಣ ತಿಳಿಸಿ ಪತ್ರ ಬರೆದ ಕಿಚ್ಚ

ಆಡಿಯೋ ಬಿಡುಗಡೆ ಕಾರ್ಯಕ್ರಮದ ವೇಳೆ ಭಾ.ಮ. ಹರೀಶ್‌, ನಿರ್ಮಾಪಕಿ ಪದ್ಮಾವತಿ ಚಂದ್ರಶೇಖರ್‌, ಕರ್ನಾಟಕ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಕೃಷ್ಣಪ್ಪ, ಶಿಕ್ಷಣ ತಜ್ಞ ನಾಗಪಾಲ್‌, ಐಪ್ಲೆಕ್ಸ್‌ ಮುಖ್ಯಸ್ಥ ಗಿರೀಶ್‌ ಮುಂತಾದವರು ಭಾಗಿ ಆಗಿದ್ದರು. ಈ ವೇಳೆ ಗೀತಪ್ರಿಯಾ ಮಾತನಾಡಿದರು. ‘ಹೆಣ್ಣುಮಕ್ಕಳನ್ನು ಉಳಿಸಿ, ಬೆಳೆಸಿ ಎಂಬ ಸಂದೇಶ ಸಿನಿಮಾದಲ್ಲಿದೆ. ಈ ಚಿತ್ರದಲ್ಲಿ ನಾನು ತಾಯವ್ವ ಎಂಬ ಪಾತ್ರ ಮಾಡಿದ್ದೇನೆ. ಕಿಚ್ಚ ಸುದೀಪ್‌ ಅವರ ಮೊದಲ ಚಿತ್ರದ ಹೆಸರನ್ನೇ ನಮ್ಮ ಸಿನಿಮಾಗೆ ಇಟ್ಟುಕೊಂಡಿದ್ದೇವೆ. ಈಗ ಸುದೀಪ್‌ ಅವರೇ ಬೆಂಬಲಕ್ಕೆ ನಿಂತಿದ್ದಾರೆ. ಆದಷ್ಟು ಬೇಗ ಸಿನಿಮಾ ಬಿಡುಗಡೆ ಮಾಡುತ್ತೇವೆ’ ಎಂದು ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.