ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ವಿಕ್ರಾಂತ್ ರೋಣ’ (Vikrant Rona) ಚಿತ್ರ ಮುಂಚೂಣಿಯಲ್ಲಿದೆ. ಈ ಸಿನಿಮಾ ನೋಡಲು ಫ್ಯಾನ್ಸ್ ತುದಿಗಾಲಿನಲ್ಲಿ ನಿಂತು ಕಾದಿದ್ದಾರೆ. ಮೊದಲ ದಿನ ಮೊದಲ ಶೋ ನೋಡಬೇಕು ಎಂಬ ಆಸೆ ಎಲ್ಲರಿಗೂ ಇದೆ. ಆದಷ್ಟು ಬೇಗ ಟಿಕೆಟ್ ಬುಕ್ ಮಾಡಬೇಕು ಎಂದುಕೊಂಡು ಕಾಯುತ್ತಿದ್ದ ಸಿನಿಪ್ರಿಯರಿಗೆ ಕಿಚ್ಚ ಸುದೀಪ್ (Kichcha Sudeep) ಕಡೆಯಿಂದ ಈಗ ಗುಡ್ ನ್ಯೂಸ್ ಸಿಕ್ಕಿದೆ. ಭಾನುವಾರ (ಜುಲೈ 24) ಮಧ್ಯಾಹ್ನ 12 ಗಂಟೆಯಿಂದ ಮುಂಗಡ ಟಿಕೆಟ್ ಬುಕಿಂಗ್ (Vikrant Rona Ticket Booking) ಶುರುವಾಗಿದೆ. ಕನ್ನಡ ವರ್ಷನ್ ಬುಕಿಂಗ್ಗೆ ಮೊದಲು ಅವಕಾಶ ನೀಡಲಾಗಿದೆ. ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಕಾಯ್ದಿರಿಸಲು ಅಭಿಮಾನಿಗಳು ಮುಗಿ ಬೀಳುತ್ತಿದ್ದಾರೆ. ಜುಲೈ 28ರಂದು ‘ವಿಕ್ರಾಂತ್ ರೋಣ’ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಲಿದೆ.
‘ರಂಗಿತರಂಗ’ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ಅವರು ‘ವಿಕ್ರಾಂತ್ ರೋಣ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಜಾಕ್ ಮಂಜು ಅವರು ಅದ್ದೂರಿ ಬಜೆಟ್ನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಬೃಹತ್ ಸೆಟ್ಗಳಲ್ಲಿ ಚಿತ್ರೀಕರಣ ನಡೆದಿದೆ. ಈ ಸಿನಿಮಾ 3ಡಿ ಅವತರಣಿಕೆಯಲ್ಲಿ ಮೂಡಿಬರುತ್ತಿರುವುದು ವಿಶೇಷ. ಆ ಕಾರಣದಿಂದಲೂ ಅಭಿಮಾನಿಗಳ ವಲಯದಲ್ಲಿ ಸಖತ್ ಹೈಪ್ ಸೃಷ್ಟಿ ಆಗಿದೆ.
ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ‘ರಾ ರಾ ರಕ್ಕಮ್ಮ..’ ಹಾಡಿಗೆ ಹೆಜ್ಜೆ ಹಾಕಿರುವುದು ಮಾತ್ರವಲ್ಲದೇ, ಒಂದು ಪ್ರಮುಖ ದೃಶ್ಯದಲ್ಲೂ ನಟಿಸಿದ್ದಾರೆ. ‘ರಾ ರಾ ರಕ್ಕಮ್ಮ..’ ಸಾಂಗ್ ಈಗಾಗಲೇ ಸೂಪರ್ ಹಿಟ್ ಆಗಿದೆ. ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಲು ಈ ಹಾಡಿನ ಕೊಡುಗೆ ದೊಡ್ಡದಿದೆ. ನಿರೂಪ್ ಭಂಡಾರಿ, ನೀತಾ ಅಶೋಕ್ ಅವರು ಕೂಡ ಈ ಸಿನಿಮಾದಲ್ಲಿ ಪ್ರಮುಖ ಮಾತ್ರ ಮಾಡಿದ್ದಾರೆ.
ADVANCE BOOKING for #VikrantRona (Kannada) ,OPENS TODAY 12noon ?❤️#VRonJuly28 @anupsbhandari @JackManjunath @Asli_Jacqueline #VRin3D #VikrantRona pic.twitter.com/EuGS2TuBIc
— Kichcha Sudeepa (@KicchaSudeep) July 24, 2022
ಕನ್ನಡ ಮಾತ್ರವಲ್ಲದೇ ತಮಿಳು, ಹಿಂದಿ, ಮಲಯಾಳಂ, ತೆಲುಗು ಮುಂತಾದ ಭಾಷೆಗಳಿಗೆ ‘ವಿಕ್ರಾಂತ್ ರೋಣ’ ಡಬ್ ಆಗಿದೆ. ವಿಶ್ವಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ. ಚಿತ್ರವನ್ನು ಭರ್ಜರಿಯಾಗಿ ಬರಮಾಡಿಕೊಳ್ಳಲು ಅಭಿಮಾನಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಎಲ್ಲ ಥಿಯೇಟರ್ಗಳ ಮುಂಭಾಗದಲ್ಲೂ ಸುದೀಪ್ ಅವರ ಕಟೌಟ್ಗಳು ರಾರಾಜಿಸುತ್ತಿವೆ. ಕೆಲವು ಕಡೆಗಳಲ್ಲಿ ಸುದೀಪ್ ಮತ್ತು ಪುನೀತ್ ಅವರ ಜೋಡಿ ಕಟೌಟ್ ನಿಲ್ಲಿಸಲಾಗುತ್ತಿರುವುದು ವಿಶೇಷ.