AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳಿನ ‘ಟೂರಿಸ್ಟ್ ಫ್ಯಾಮಿಲಿ’ಯ ಕೊಂಡಾಡಿದ ಕಿಚ್ಚ, ಸುದೀಪ್​ಗೆ ಇಷ್ಟವಾಗಿದ್ದೇನು?

Kichcha Sudeep: ಕಿಚ್ಚ ಸುದೀಪ್ ಅಪ್ಪಟ ಸಿನಿಮಾ ಪ್ರೇಮಿ. ಒಳ್ಳೆಯ ಸಿನಿಮಾಗಳನ್ನು ನೋಡುವುದು ಸಿನಿಮಾ ಇಷ್ಟವಾದಾಗ ಅದಕ್ಕೆ ಮೆಚ್ಚುಗೆ ವ್ಯಕ್ತಪಡಿಸುವುದನ್ನು ಅವರು ಮರೆಯುವುದಿಲ್ಲ. ಇದೀಗ ಸುದೀಪ್ ಅವರಿಗೆ ತಮಿಳಿನ ಸಣ್ಣ ಬಜೆಟ್​ನ ಸಿನಿಮಾ ಒಂದು ಇಷ್ಟವಾಗಿದ್ದು, ಸಿನಿಮಾದ ಬಗ್ಗೆ ಟ್ವೀಟ್ ಮಾಡಿದ್ದಾರೆ.

ತಮಿಳಿನ ‘ಟೂರಿಸ್ಟ್ ಫ್ಯಾಮಿಲಿ’ಯ ಕೊಂಡಾಡಿದ ಕಿಚ್ಚ, ಸುದೀಪ್​ಗೆ ಇಷ್ಟವಾಗಿದ್ದೇನು?
Tourist Family
ಮಂಜುನಾಥ ಸಿ.
|

Updated on:Jun 07, 2025 | 4:02 PM

Share

ನಟ ಕಿಚ್ಚ ಸುದೀಪ್ (Kichcha Sudeep), ಸಿನಿಮಾ ಪ್ರೇಮಿ. ಒಳ್ಳೆಯ ಸಿನಿಮಾಗಳನ್ನು ನೀಡಬೇಕೆಂಬ ಹಂಬಲದ ಜೊತೆಗೆ ಒಳ್ಳೆಯ ಸಿನಿಮಾಗಳನ್ನು ನೋಡುತ್ತಾರೆ, ಮೆಚ್ಚಿಕೊಳ್ಳುತ್ತಾರೆ. ಒಳ್ಳೆಯ ಸಿನಿಮಾ ಮಾಡಿದ ಪ್ರತಿಭಾವಂತರನ್ನು ಬೆಂಬಲಿಸುತ್ತಾ ಬರುತ್ತಾರೆ. ಒಳ್ಳೆಯ ಸಿನಿಮಾ ವಿಷಯಕ್ಕೆ ಬಂದಾಗ ಸುದೀಪ್​ಗೆ ಭಾಷೆಯ ಹಂಗಿಲ್ಲ. ಯಾವುದೇ ಭಾಷೆಯದ್ದಾದರೂ ಸಿನಿಮಾ ಚೆನ್ನಾಗಿದೆಯೆಂದರೆ ಮೆಚ್ಚುಗೆ ಸೂಚಿಸದೇ ಇರುವುದಿಲ್ಲ. ಇತ್ತೀಚೆಗೆ ಬಿಡುಗಡೆ ಆದ ತಮಿಳಿನ ಒಂದು ಸದಭಿರುಚಿಯ ಸಿನಿಮಾ ಸುದೀಪ್ ಗಮನ ಸೆಳೆದಿದ್ದು, ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.

ತಮಿಳಿನಲ್ಲಿ ‘ಟೂರಿಸ್ಟ್ ಫ್ಯಾಮಿಲಿ’ ಹೆಸರಿನ ಸಣ್ಣ ಬಜೆಟ್ ಸಿನಿಮಾ ಒಂದು ಇತ್ತೀಚೆಗೆ ಬಿಡುಗಡೆ ಆಗಿದೆ. ಸಿನಿಮಾ ಈಗ ಒಟಿಟಿಯಲ್ಲಿಯೂ ಲಭ್ಯವಿದೆ. ಸಿಮ್ರನ್, ಸಸಿಕುಮಾರ್, ಯೋಗಿಬಾಬು ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ತಮಿಳು ಮಾತ್ರವಲ್ಲದೆ ತೆಲುಗು ಪ್ರೇಕ್ಷಕರ ಮನಸ್ಸು ಗೆದ್ದಿದೆ. ಕೇವಲ ಎಂಟು ಕೋಟಿ ಬಜೆಟ್​ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಮೇ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾದಲ್ಲಿನ ಹಾಸ್ಯ, ಮಾನವೀಯ ಅಂಶಗಳ ಕಾರಣದಿಂದಾಗಿ ಸಾಮಾನ್ಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ:ಕಿಚ್ಚ ಸುದೀಪ್-ರಾಜೇಶ್ ಕೃಷ್ಣನ್ ಹಾಡಿನ್ ಜುಗಲ್​ಬಂದಿ; ಅಪರೂಪದ ವಿಡಿಯೋ

ಸಿನಿಮಾ ಇತ್ತೀಚೆಗಷ್ಟೆ ಜಿಯೋ ಹಾಟ್​ಸ್ಟಾರ್​​ನಲ್ಲಿ ಬಿಡುಗಡೆ ಆಗಿದ್ದು, ಸಿನಿಮಾ ಒಟಿಟಿಗೆ ಬಂದ ಬಳಿಕ ವೀಕ್ಷಿಸಿದಂತಿರುವ ಸುದೀಪ್ ಟ್ವೀಟ್ ಮಾಡಿದ್ದು, ‘ಇತ್ತೀಚೆಗೆ ಬಂದ ಸಿನಿಮಾಗಳಲ್ಲಿಯೇ ಅದ್ಭುತ ಬರವಣಿಗೆ ಮತ್ತು ಎಕ್ಸಿಕ್ಯೂಷನ್ ‘ಟೂರಿಸ್ಟ್ ಫ್ಯಾಮಿಲಿ’ ಸಿನಿಮಾದ್ದು. ಈ ಸಿನಿಮಾದ ಕತೆ ಹೇಳಿದ ವಿಧಾನ ಅದ್ಭುತವಾಗಿದ್ದು, ನನ್ನನ್ನು ಕದಲದೆ ಸೀಟಿನಲ್ಲಿ ಕುಳಿತಿರುವಂತೆ ಮಾಡಿತು. ಸಿನಿಮಾದಲ್ಲಿನ ಪ್ರತಿ ಪಾತ್ರಕ್ಕೂ ಅದರದ್ದೇ ಆದ ಮಹತ್ವ ಮತ್ತು ಪ್ರಧಾನತೆ ಇದೆ. ಎಲ್ಲ ಪಾತ್ರಗಳನ್ನು ನಟರು ಅದ್ಭುತವಾಗಿ ನಿರ್ವಹಿಸಿದ್ದಾರೆ. ಸಂಗೀತವಂತೂ ಸಿನಿಮಾದ ಆಸ್ತಿಯೇ ಆಗಿದೆ. ನನ್ನ ಗೆಳೆಯ ನಿರ್ದೇಶಕ ಅಭಿಷಾನ್ ಜೀವಿಂತ್ ಹಾಗೂ ಅವರ ತಂಡಕ್ಕೆ ಅಭಿನಂದನೆಗಳು’ ಎಂದಿದ್ದಾರೆ ಕಿಚ್ಚ ಸುದೀಪ್. ತಮ್ಮ ಟ್ವೀಟ್​​ನಲ್ಲಿ ನಟ ಸಸಿಕುಮಾರ್, ಸಿಮ್ರನ್, ಯೋಗಿಬಾಬು ಇನ್ನೂ ಹಲವರನ್ನು ಟ್ಯಾಗ್ ಮಾಡಿದ್ದಾರೆ.

ಈ ಸಿನಿಮಾವನ್ನು ಮೆಚ್ಚಿ ಖ್ಯಾತ ನಿರ್ದೇಶಕ ಎಸ್​ಎಸ್ ರಾಜಮೌಳಿ ಸಹ ಟ್ವೀಟ್ ಮಾಡಿದ್ದರು. ಅವರಿಗೂ ಸಹ ಈ ಸಿನಿಮಾ ಬಹುವಾಗಿ ಮೆಚ್ಚುಗೆಯಾಗಿತ್ತು. ಸಿನಿಮಾ ಅನ್ನು ತಮಿಳಿನ ಸ್ಟಾರ್ ನಟ ಸೂರ್ಯ ಸಹ ಮೆಚ್ಚಿಕೊಂಡಿದ್ದರು. ಅವರು ನಿರ್ದೇಶಕನ ಮನೆಗೆ ಕರೆಸಿ ಅಭಿನಂದನೆ ಸಲ್ಲಿಸಿದ್ದರು.

ಅಂದಹಾಗೆ ನಟ ಕಿಚ್ಚ ಸುದೀಪ್, ತಾವು ಮೆಚ್ಚಿದ ಸಿನಿಮಾ ಬಗ್ಗೆ ಬರೆಯುತ್ತಿರುವುದು ಇದು ಮೊದಲೇನಲ್ಲ. ಕನ್ನಡದ ಕೆಲ ಸಿನಿಮಾಗಳ ಬಗ್ಗೆಯೂ ಈ ಹಿಂದೆ ಹೀಗೆಯೇ ಟ್ವೀಟ್ ಮಾಡಿದ್ದಾರೆ. ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಅನ್ನು ಮೆಚ್ಚಿ ಪುಟಗಟ್ಟಲೆ ವಿಮರ್ಶೆಯನ್ನು ಕಿಚ್ಚ ಸುದೀಪ್ ಬರೆದಿದ್ದರು. ಸಿನಿಮಾಗಳ ಟ್ರೈಲರ್ ಮೆಚ್ಚುಗೆ ಆದರೂ ಸಹ ಸುದೀಪ್ ಹೀಗೆಯೇ ಟ್ವೀಟ್ ಮಾಡಿದ್ದುಂಟು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:00 pm, Sat, 7 June 25