
ಈಗಾಗಲೇ ‘ಕೊರಗಜ್ಜ’ ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲ ಸೃಷ್ಟಿ ಆಗಿದೆ. ಸುಧೀರ್ ಅತ್ತಾವರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಿಂದ 2ನೇ ಹಾಡಿನ ಬಿಡುಗಡೆಗೆ ತಯಾರಿ ನಡೆದಿದೆ. ಈ ಹಾಡನ್ನು ಭಾರತೀಯ ಚಿತ್ರರಂಗದ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ (Shreya Ghoshal) ಅವರು ಹಾಡಿದ್ದಾರೆ. ಇತ್ತೀಚೆಗೆ ಹಾಡಿನ ಸಾಹಿತ್ಯವನ್ನು ರಿಲೀಸ್ ಮಾಡಿದ್ದ ಚಿತ್ರತಂಡ ಈಗ ಈ ಹಾಡಿನಲ್ಲಿ ಬರುವ ಮುಗ್ಧ ಪ್ರೇಮಿಗಳ ಪೋಸ್ಟರ್ಗಳನ್ನು ಬಿಡುಗಡೆಗೊಳಿಸಿದೆ. ಆ ಮೂಲಕ ‘ಕೊರಗಜ್ಜ’ (Koragajja) ಚಿತ್ರಕ್ಕೆ ಹೊಸ ಆಯಾಮ ಇರುವುದನ್ನು ತೋರಿಸಿದೆ.
‘ಕೊರಗಜ್ಜ’ ಸಿನಿಮಾದಲ್ಲಿ ಪ್ರಣಯದ ಸನ್ನಿವೇಶವೇ ಎಂದು ಕೆಲವರು ಮೂಗು ಮುರಿಯಬಹುದು. ಸಿನಿಮಾ ಬಿಡುಗಡೆಗೊಂಡ ನಂತರ ಎಲ್ಲದಕ್ಕೂ ಉತ್ತರ ದೊರಕಲಿದೆ ಎಂದು ಚಿತ್ರತಂಡ ಹೇಳಿದೆ. ತ್ರಿವಿಕ್ರಮ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ವಿದ್ಯಾಧರ್ ಅವರು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ‘ತ್ರಿವಿಕ್ರಮ ಸಿನಿಮಾಸ್’ ಮತ್ತು ‘ಸಕ್ಸಸ್ ಫಿಲ್ಮ್ಸ್’ ಬ್ಯಾನರ್ ಮೂಲಕ ‘ಕೊರಗಜ್ಜ’ ಸಿನಿಮಾ ಮೂಡಿಬರುತ್ತಿದೆ.
ಅತೀ ವಿನೂತನ ಸ್ಟ್ರಿಂಗ್ಸ್ ಮತ್ತು ವಾದ್ಯಗಳಿಂದ ಟ್ಯೂನ್ ಮಾಡಿರುವ ಎರಡನೆಯ ಹಾಡು ಹೊಸ ಹವಾ ಎಬ್ಬಿಸಲಿದೆ ಎಂಬ ನಂಬಿಕೆ ಚಿತ್ರತಂಡಕ್ಕೆ ಇದೆ. ಈ ಹಾಡು ಇನ್ನೇನು ಬಿಡುಗಡೆ ಆಗುತ್ತಿದೆ ಎನ್ನುವಾಗ ಚಿತ್ರತಂಡ ಮತ್ತೊಂದು ವಿಷಯ ಹಂಚಿಕೊಂಡಿದೆ. ಅಂತಾರಾಷ್ಟ್ರೀಯ ಫುಟ್ ಬಾಲ್ ತಾರೆ ಅರ್ಜಂಟೈನಾದ ಲಿಯೊನಲ್ ಮೆಸ್ಸಿ ಅವರ ಇತ್ತೀಚಿನ ಭಾರತ ಭೇಟಿಯ ಪ್ರಯಕ್ತ ವಿನ್ಯಾಸಗೊಳಿಸಿದ್ದ ಎಐ ಹಾಡಿನ ತಂಡವೇ ಕೊರಗಜ್ಜ ಚಿತ್ರದ 2ನೇ ಹಾಡಿನ ಹಿಂದೆ ಕೆಲಸ ಮಾಡಿದೆ.
ಶ್ರೇಯ ಘೋಷಾಲ್ ಮತ್ತು ಅರ್ಮಾನ್ ಮಲಿಕ್ ಅವರ ಕಂಠದಲ್ಲಿ ಈ ಹಾಡು ಮೂಡಿಬಂದಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ತಂತ್ರಜ್ಞಾನದಿಂದ ವಿನೂತನವಾಗಿ ವಿನ್ಯಾಸಗೊಳಿಸಲಾಗಿದೆ. ಸುಧೀರ್ ಅತ್ತಾವರ್ ಅವರು ‘ಗಾಳಿ ಗಂಧ…ತೀಡಿ ತಂದ..’ ಎಂಬ ಸಾಹಿತ್ಯ ಬರೆದಿದ್ದಾರೆ. ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಅವರು ಸುಮಧುರವಾಗಿ ಕಂಪೋಸ್ ಮಾಡಿದ್ದಾರೆ.
ಇದನ್ನೂ ಓದಿ: ‘ಕೊರಗಜ್ಜ’ ಸಿನಿಮಾದಿಂದ ಬಿಡುಗಡೆ ಆಯ್ತು ‘ಗುಳಿಗ ಗುಳಿಗ ಘೋರ ಗುಳಿಗ’ ಹಾಡು
ಈ ಹಾಡಿನ ಟ್ರ್ಯಾಕ್ ಕೇಳಿದ ಕೂಡಲೇ ಶ್ರೇಯಾ ಘೋಷಾಲ್ ಅವರು ಹಾಡಲು ಒಪ್ಪಿಕೊಂಡರು ಎಂದು ಚಿತ್ರತಂಡ ಹೇಳಿದೆ. ‘ಕೊರಗಜ್ಜ’ ಸಿನಿಮಾದ ಶೂಟಿಂಗ್ ವೇಳೆ ಚಿತ್ರತಂಡಕ್ಕೆ ಸಾಕಷ್ಟು ಸಮಸ್ಯೆಗಳು ಉಂಟಾಗಿದ್ದವು. ಅವುಗಳನ್ನೆಲ್ಲ ನಿವಾರಿಸಿಕೊಂಡು ಚಿತ್ರತಂಡ ಇಲ್ಲಿಯತನಕ ಬಂದಿದೆ. ಭವ್ಯ, ಕಬೀರ್ ಬೇಡಿ, ಶ್ರುತಿ ಮುಂತಾದವರು ‘ಕೊರಗಜ್ಜ’ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.