ಬಾಹುಬಲಿಯೂ ಮಾಡಿರದ ದಾಖಲೆಯನ್ನು ಮಾಡಿದ ‘ಕೆಜಿಎಫ್ 2’; ಇಲ್ಲಿದೆ ಪಕ್ಕಾ ಲೆಕ್ಕ
KGF 2 Songs: ‘7.20 ಕೋಟಿ ರೂ. ಕೊಟ್ಟು ‘ಕೆಜಿಎಫ್ 2’ ಆಡಿಯೋ ಹಕ್ಕುಗಳನ್ನು ಖರೀದಿಸಿದ್ದೇವೆ. ನಮ್ಮ 45 ವರ್ಷಗಳ ಅನುಭವದಲ್ಲಿ ಈ ರೀತಿ ಆಗಿದ್ದು ಇದೇ ಮೊದಲು’ ಎಂದು ಲಹರಿ ಮ್ಯೂಸಿಕ್ ಸಂಸ್ಥೆಯ ವೇಲು ಹೇಳಿದ್ದಾರೆ.
ಯಶ್ ನಟನೆಯ ‘ಕೆಜಿಎಫ್: ಚಾಪ್ಟರ್ 2’ ಚಿತ್ರದ ಆಡಿಯೋಗೆ ಸಂಬಂಧಪಟ್ಟಂತೆ ದೊಡ್ಡ ಸುದ್ದಿ ಹೊರಬಿದ್ದಿದೆ. ಹಾಡುಗಳ ಮಾರುಕಟ್ಟೆಯಲ್ಲಿ ಈವರೆಗೂ ಯಾವ ಚಿತ್ರವೂ ಮಾಡಿರದ ದಾಖಲೆಯನ್ನು ‘ಕೆಜಿಎಫ್ 2’ ಮಾಡಿದೆ. ಬರೋಬ್ಬರಿ 7.2 ಕೋಟಿ ರೂ.ಗಳಿಗೆ ಈ ಸಿನಿಮಾದ ಹಾಡುಗಳ ಪ್ರಸಾರ ಹಕ್ಕುಗಳು ಮಾರಾಟ ಆಗಿರುವುದು ವಿಶೇಷ. ಹಾಗಂತ ಇದು ಅಂತೆ-ಕಂತೆಯ ಲೆಕ್ಕ ಅಲ್ಲ. ಹಾಡುಗಳ ಹಕ್ಕನ್ನು ಖರೀದಿಸಿರುವ ‘ಲಹರಿ ಮ್ಯೂಸಿಕ್’ ಸಂಸ್ಥೆಯ ವೇಲು ಅವರೇ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
ಈ ಮೊದಲು ‘ಕೆಜಿಎಫ್: ಚಾಪ್ಟರ್ 1’ ಹಾಡುಗಳನ್ನು ಖರೀದಿಸಿದ್ದು ಕೂಡ ಇದೇ ಲಹರಿ ಸಂಸ್ಥೆ. ಆಗ 3.60 ಕೋಟಿ ರೂ. ನೀಡಿತ್ತು. ಬಾಹುಬಲಿ ಚಿತ್ರದ ಹಾಡುಗಳನ್ನು ಕೂಡ ದೊಡ್ಡ ಮೊತ್ತ ನೀಡಿ ಖರೀದಿಸಲಾಗಿತ್ತು. ಆದರೆ ಆ ಎಲ್ಲ ಸಂಖ್ಯೆಗಳನ್ನು ಮೀರಿಸಿ, ‘ಕೆಜಿಎಫ್: ಚಾಪ್ಟರ್ 2’ ಹಾಡುಗಳು ದಾಖಲೆ ಬರೆದಿವೆ. ಆ ಮೂಲಕ ಆಡಿಯೋ ಮಾರುಕಟ್ಟೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಈ ಬಹುನಿರೀಕ್ಷಿತ ಸಿನಿಮಾದ ಆಡಿಯೋ ಪ್ರಸಾರ ಹಕ್ಕುಗಳು ತಮ್ಮ ಸಂಸ್ಥೆಯ ಪಾಲಾಗಿರುವುದಕ್ಕೆ ಲಹರಿ ವೇಲು ಸಂತಸ ವ್ಯಕ್ತಪಡಿಸುತ್ತಾರೆ.
‘ಯಶ್ ಅವರ ಬಗ್ಗೆ ನನಗೆ ಅಪಾರವಾದ ಪ್ರೀತಿ. ಯಾಕೆಂದರೆ ಅವರು ಕೂಡ ನಮ್ಮಂತೆ ಸೊನ್ನೆಯಿಂದ ಬಂದವರು. ಅವರ ಇಡೀ ಟೀಮ್ ಅದ್ಭುತವಾಗಿದೆ. ಅವರ ಜೊತೆ ವ್ಯವಹಾರ ಮಾಡಲು ಬಹಳ ಖುಷಿ ಆಗುತ್ತದೆ. ಈ ಹಿಂದೆ ನಾವು ‘ಬಾಹುಬಲಿ 1’ ಚಿತ್ರಕ್ಕೆ 3.6 ಕೋಟಿ ಮತ್ತು ‘ಬಾಹುಬಲಿ 2’ ಚಿತ್ರಕ್ಕೆ 5.4 ಕೋಟಿ ರೂ. ನೀಡಿ ಆಡಿಯೋ ಹಕ್ಕು ಪಡೆಯುವ ಮೂಲಕ ಕನ್ನಡದ ಭಾವುಟವನ್ನು ಆಂಧ್ರದಲ್ಲಿ ಹಾರಿಸಿದ್ದೆವು. ಈಗ ಆ ದಾಖಲೆಯನ್ನೂ ‘ಕೆಜಿಎಫ್ 2’ ಮೀರಿಸಿದೆ’ ಎಂದು ವೇಲು ಹೇಳಿದ್ದಾರೆ.
‘ಇಡೀ ದಕ್ಷಿಣ ಭಾರತದಲ್ಲಿಯೇ ಅತಿ ದೊಡ್ಡ ಮೊತ್ತಕ್ಕೆ ಆಡಿಯೋ ಮಾರಾಟವಾದ ಸಿನಿಮಾ ‘ಕೆಜಿಎಫ್ 2’ ಎಂಬುದು ಎಲ್ಲರಿಗೂ ಹೆಮ್ಮೆ ತರುವಂತಹ ವಿಚಾರ. 7.20 ಕೋಟಿ ಕೊಟ್ಟು ಹಕ್ಕುಗಳನ್ನು ಕೊಂಡುಕೊಳ್ಳುತ್ತೇವೆ ಎಂಬ ನಿರೀಕ್ಷೆಯೇ ಇರಲಿಲ್ಲ. ನಮ್ಮ 45 ವರ್ಷಗಳ ಅನುಭವದಲ್ಲಿ ಈ ರೀತಿ ಆಗಿದ್ದು ಇದೇ ಮೊದಲು. ನಮ್ಮ ಕನ್ನಡದ ಮಾರುಕಟ್ಟೆ ಈ ಮಟ್ಟಕ್ಕೆ ಬೆಳೆದಿರುವುದು ಸಂತೋಷ ತರುವಂತಹ ವಿಷಯ. ರವಿ ಬಸ್ರೂರು ಸಂಗೀತ ನಿರ್ದೇಶನದ ಹಾಡುಗಳು ಅದ್ಭುತವಾಗಿ ಮೂಡಿಬಂದಿವೆ. ನಿರ್ದೇಶಕ ಪ್ರಶಾಂತ್ ನೀಲ್ ಅಷ್ಟೇ ಚೆನ್ನಾಗಿ ಚಿತ್ರಿಸಿದ್ದಾರೆ’ ಎಂದು ವೇಲು ಹೇಳಿದ್ದಾರೆ.
ಇದನ್ನೂ ಓದಿ:
ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಪುಷ್ಪ, ಕೆಜಿಎಫ್ 2; ಯಶ್-ಅಲ್ಲು ಅರ್ಜುನ್ ನಡುವೆ ಭಾರಿ ಪೈಪೋಟಿ
‘ಪುಷ್ಪ ಸಿನಿಮಾ 10 ಕೆಜಿಎಫ್ಗೆ ಸಮ’; ಅಲ್ಲು ಅರ್ಜುನ್ ಚಿತ್ರಕ್ಕೆ ಸಿಕ್ತು ಹೊಸ ಮೆಚ್ಚುಗೆ