ಕನ್ನಡ ಚಿತ್ರರಂಗದಲ್ಲಿ ಯೋಗರಾಜ್ ಭಟ್ (Yogaraj Bhat) ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ನಿರ್ದೇಶಕನಾಗಿ ಮಾತ್ರವಲ್ಲದೇ ಅವರು ಗೀತರಚನಕಾರನಾಗಿಯೂ ಸಿಕ್ಕಾಪಟ್ಟೆ ಫೇಮಸ್. ಅವರು ಬರೆಯುವ ಹಾಡಿನಲ್ಲಿ ಹೊಸತನ ಇರುತ್ತದೆ. ಸಿನಿಮಾ ಗೀತೆಗಳಲ್ಲಿ ಬೇರೆಯದೇ ಫ್ಲೇವರ್ ಪರಿಚಯಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಈಗ ಅವರು ‘ಲವ್ 360’ (Love 360 Movie) ಸಿನಿಮಾಗೆ ಒಂದು ಪ್ರಮೋಷನಲ್ ಸಾಂಗ್ ಬರೆದುಕೊಟ್ಟಿದ್ದಾರೆ. ‘ಜಜಾಂಗ್ ಜಾಂಗ್..’ ಎಂದು ಶುರುವಾಗುವ ಈ ಗೀತೆಯನ್ನು ಆನಂದ್ ಆಡಿಯೋ ಮೂಲಕ ಬಿಡುಗಡೆ ಮಾಡಲಾಗಿದೆ. ನಿರ್ದೇಶಕ ಶಶಾಂಕ್ (Director Shashank), ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಈ ಹಾಡನ್ನು ಪರಿಚಯಿಸಿದ್ದಾರೆ. ಹಾಡು ಶುರುವಾಗುವುದಕ್ಕೂ ಮುನ್ನ ಶಶಾಂಕ್ ಮತ್ತು ಅರ್ಜುನ್ ಜನ್ಯ ನಡುವೆ ನಡೆಯುವ ಸಂಭಾಷಣೆ ಸಖತ್ ಫನ್ನಿ ಆಗಿದೆ.
ಅರ್ಜುನ್ ಜನ್ಯ: ಯಾವ ಥರ ಸಾಂಗ್ ಸರ್?
ಶಶಾಂಕ್: ಒಂದು ಪ್ರಮೋಷನಲ್ ಸಾಂಗ್ ಮಾಡೋಣ.
ಅರ್ಜುನ್ ಜನ್ಯ: ಏನಾದರೂ ಬರೆದಿದ್ದೀರಾ ಸರ್?
ಶಶಾಂಕ್: ಇಂಥ ಸಾಂಗ್ಗಳಿಗೆ ವರ್ಲ್ಡ್ ಫೇಮಸ್ ಆಗಿರುವ ನಮ್ ಯೋಗರಾಜ್ ಭಟ್ ಬರೆದುಕೊಟ್ಟಿದ್ದಾರೆ ತಗೊಳಿ..
ಅರ್ಜುನ್ ಜನ್ಯ: (ಲಿರಿಕ್ಸ್ ನೋಡಿದ ಬಳಿಕ) ಜಜಾಂಗ್ ಜಾಂಗ್. ಹಂಗಂದ್ರೆ ಏನ್ ಸರ್?
ಶಶಾಂಕ್: ಯೇ.. ಯಾವನಿಗ್ ಗೊತ್ರಿ? ಆ ಭಟ್ರು ಬರೆಯೋದೆಲ್ಲ ಅಂಥವೇ.. ಸಾಂಗ್ ಹಿಟ್ ಆಗತ್ತೆ. ಹಾಕಿ..
‘ಲವ್ 360’ ಸಿನಿಮಾ ಆಗಸ್ಟ್ 19ರಂದು ಬಿಡುಗಡೆ ಆಗಲಿದೆ. ರಿಲೀಸ್ಗೂ ಮುನ್ನವೇ ಹಾಡುಗಳ ಮೂಲಕ ಈ ಚಿತ್ರ ಸಖತ್ ಸದ್ದು ಮಾಡುತ್ತಿದೆ. ಸಿದ್ ಶ್ರೀರಾಮ್ ಹಾಡಿರುವ ‘ಜಗವೇ ನೀನು ಗೆಳತಿಯೇ..’ ಗೀತೆ ಈಗಾಗಲೇ 1.2 ಕೋಟಿ ಬಾರಿ ವೀಕ್ಷಣೆ ಕಂಡಿದೆ. ‘ಭೋರ್ಗರೆದು..’ ಸಾಂಗ್ ಕೂಡ ಲಕ್ಷಾಂತರ ವೀವ್ಸ್ ಪಡೆದಿದೆ. ಈಗ ‘ಜಜಾಂಗ್ ಜಾಂಗ್..’ ಎಂಬ ಪ್ರಮೋಷನಲ್ ಹಾಡನ್ನು ರಿಲೀಸ್ ಮಾಡಲಾಗಿದೆ.
ಈ ಸಿನಿಮಾದಲ್ಲಿ ಹೊಸ ನಟ ಪ್ರವೀಣ್ ಅವರು ಹೀರೋ ಆಗಿ ನಟಿಸಿದ್ದಾರೆ. ‘ಲವ್ ಮಾಕ್ಟೇಲ್’ ಖ್ಯಾತಿಯ ನಟಿ ರಚನಾ ಇಂದರ್ ಅವರು ಹೀರೋಯಿನ್ ಆಗಿ ಅಭಿನಯಿಸಿದ್ದಾರೆ. ಚಾಲೆಂಜಿಂಗ್ ಆದಂತಹ ಪಾತ್ರವನ್ನು ಅವರು ನಿಭಾಯಿಸಿದ್ದಾರೆ. ಎಲ್ಲರ ಗಮನ ಸೆಳೆಯುತ್ತಿರುವ ಟ್ರೇಲರ್ ನೋಡಿ ಶಿವರಾಜ್ಕುಮಾರ್ ಮೆಚ್ಚಿಕೊಂಡಿದ್ದಾರೆ. ಹಾಡುಗಳನ್ನೂ ಕೇಳಿ ಅವರು ಖುಷಿಪಟ್ಟಿದ್ದಾರೆ. ಈ ಎಲ್ಲ ಕಾರಣಗಳಿಂದ ‘ಲವ್ 360’ ಚಿತ್ರತಂಡದ ಆತ್ಮವಿಶ್ವಾಸ ಹೆಚ್ಚಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ