Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಡಿನ ಮೂಲಕ ‘ಭೋರ್ಗರೆದು’ ಸದ್ದು ಮಾಡ್ತಿದೆ ‘ಲವ್​ 360’ ಸಿನಿಮಾ; ಸಾಂಗ್ಸ್​ ಸೂಪರ್​ ಹಿಟ್​

Love 360 | Bhorgaredu song: ‘ಜಗವೇ ನೀನು ಗೆಳತಿಯೇ..’ ಹಾಡು ಸೂಪರ್​ ಹಿಟ್​ ಆದ ಬೆನ್ನಲ್ಲೇ ‘ಲವ್​ 360’ ಚಿತ್ರದಿಂದ ಇನ್ನೊಂದು ಗೀತೆ ರಿಲೀಸ್​ ಆಗಿದೆ. ಈ ಸಾಂಗ್ ಕೂಡ ಮೆಚ್ಚುಗೆ ಪಡೆದುಕೊಂಡಿದೆ.

ಹಾಡಿನ ಮೂಲಕ ‘ಭೋರ್ಗರೆದು’ ಸದ್ದು ಮಾಡ್ತಿದೆ ‘ಲವ್​ 360’ ಸಿನಿಮಾ; ಸಾಂಗ್ಸ್​ ಸೂಪರ್​ ಹಿಟ್​
ಪ್ರವೀಣ್, ರಚನಾ ಇಂದರ್, ನಿರ್ದೇಶಕ ಶಶಾಂಕ್
Follow us
TV9 Web
| Updated By: ಮದನ್​ ಕುಮಾರ್​

Updated on:Jul 21, 2022 | 7:28 PM

ಖ್ಯಾತ ನಿರ್ದೇಶಕ ಶಶಾಂಕ್​ (Shashank) ಅವರ ಸಿನಿಮಾಗಳಲ್ಲಿ ಹಾಡುಗಳಿಗೆ ಹೆಚ್ಚು ಮಹತ್ವ ನೀಡಲಾಗಿರುತ್ತದೆ. ‘ಮೊಗ್ಗಿನ ಮನಸು’ ಕಾಲದಿಂದಲೂ ಇದು ನಡೆದುಕೊಂಡ ಬಂದಿದೆ. ಈಗ ಅವರು ‘ಲವ್​ 360’ (Love 360 Movie) ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ರಿಲೀಸ್​ ಆಗಿರುವ ‘ಜಗವೇ ನೀನು ಗೆಳತಿಯೇ..’ ಹಾಡು ಸೂಪರ್​ ಹಿಟ್​ ಆಗಿದೆ. ಈಗ ಈ ಸಿನಿಮಾದಿಂದ ಇನ್ನೊಂದು ಹಾಡು ರಿಲೀಸ್​ ಮಾಡಲಾಗಿದೆ. ‘ಭೋರ್ಗರೆದು..’ ಎಂಬ ಈ ಗೀತೆಗೂ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಮೂರೇ ದಿನಕ್ಕೆ 5 ಲಕ್ಷಕ್ಕೂ ಅಧಿಕ ಬಾರಿ ಈ ಹಾಡು ವೀಕ್ಷಣೆ ಕಂಡಿದೆ. ಹಾಡಿನ ಬಿಡುಗಡೆಗಾಗಿ ‘ಲವ್​ 360’ ಚಿತ್ರತಂಡ ಇತ್ತೀಚೆಗೆ ಸುದ್ದಿಗೋಷ್ಠಿ ಆಯೋಜಿಸಿತ್ತು. ಈ ವೇಳೆ ನಿರ್ದೇಶಕ ಶಶಾಂಕ್, ಹೀರೋ ಪ್ರವೀಣ್​ ಮತ್ತು ನಾಯಕಿ ರಚನಾ ಇಂದರ್ (Rachana Inder)​ ಅವರು ಹಾಡಿನ ಬಗ್ಗೆ ತಮ್ಮ ಮಾತುಗಳನ್ನು ಹಂಚಿಕೊಂಡರು.

14 ವರ್ಷಗಳ ಹಿಂದೆ ಜುಲೈ 18ರಂದು ‘ಮೊಗ್ಗಿನ ಮನಸು’ ಚಿತ್ರ ಬಿಡುಗಡೆ ಆಗಿತ್ತು. ಅದೇ ದಿನಾಂಕದಲ್ಲೇ ಈಗ ‘ಭೋರ್ಗರೆದು..’ ಹಾಡನ್ನು ಬಿಡುಗಡೆ ಮಾಡಿರುವುದು ವಿಶೇಷ. ಈ ಹಾಡಿಗೆ ಅರ್ಜುನ್​ ಜನ್ಯ ಸಂಗೀತ ನೀಡಿದ್ದು, ಶಶಾಂಕ್​ ಅವರೇ ಸಾಹಿತ್ಯ ಬರೆದಿದ್ದಾರೆ. ಕೀರ್ತನ್​ ಹೊಳ್ಳ ಧ್ವನಿ ನೀಡಿದ್ದಾರೆ. ಸಿನಿಪ್ರಿಯರಿಗೆ ಈ ಗೀತೆ ಇಷ್ಟವಾಗಿದೆ. ಆನಂದ್​ ಆಡಿಯೋ ಮೂಲಕ ‘ಭೋರ್ಗರೆದು..’ ಸಾಂಗ್​ ರಿಲೀಸ್​ ಆಗಿದೆ.

‘ಚಿತ್ರದಲ್ಲಿ ಇನ್ನೊಂದು ಹಾಡಿದೆ. ಅದನ್ನು ಸದ್ಯದಲ್ಲೇ ಬಿಡುಗಡೆ ಮಾಡುತ್ತೇವೆ. ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇವೆ. ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಎರಡು ಹಾಡುಗಳು ಜನರಿಗೆ ಇಷ್ಟ ಆಗಿವೆ. ಸಿದ್ ಶ್ರೀರಾಮ್ ಹಾಡಿರುವ ‘ಜಗವೇ ನೀನು ಗೆಳತಿಯೇ..’ ಹಾಡಂತೂ ನಾವು ಅಂದುಕೊಂಡಿದ್ದಕ್ಕಿಂತಲೂ ದೊಡ್ಡ ಯಶಸ್ಸು ಕಂಡಿದೆ. ರೀಲ್ಸ್​ನಲ್ಲೂ ಈ ಹಾಡಿಗೆ ಡ್ಯಾನ್ಸ್​ ಮಾಡುವವರ ಸಂಖ್ಯೆ ಹೆಚ್ಚಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ ನಿರ್ದೇಶಕ ಶಶಾಂಕ್​​.

‘ಲವ್​ 360’ ಸಿನಿಮಾದ ಹಾಡುಗಳು ಎಲ್ಲ ವರ್ಗದ ಪ್ರೇಕ್ಷಕರಿಗೆ ಇಷ್ಟ ಆಗುತ್ತಿರುವುದು ನಟಿ ರಚನಾ ಇಂದರ್​ ಅವರಿಗೆ ಖುಷಿ ನೀಡಿದೆ. ನಟ ಪ್ರವೀಣ್​ ಅವರು ಈ ಚಿತ್ರದ ಮೇಲೆ ಸಖತ್​ ಭರವಸೆ ಇಟ್ಟುಕೊಂಡಿದ್ದಾರೆ. ‘ಹಾಡಿನಿಂದ ಈಗಾಗಲೇ ಜನರು ನನ್ನನ್ನು ಹೋದ ಕಡೆಯೆಲ್ಲ ಗುರುತಿಸುತ್ತಿದ್ದಾರೆ. ಸಾಂಗ್ಸ್​ ಹಿಟ್​ ಆಗಿರುವುದರಿಂದ ಚಿತ್ರ ಗೆದ್ದಷ್ಟೇ ಖುಷಿ ಆಗಿದೆ. ಇಂತಹ ಅದ್ಭುತ ಹಾಡುಗಳನ್ನು ಕೊಟ್ಟಿರುವ ನಿರ್ದೇಶಕರಿಗೆ ಹಾಗೂ ಇಷ್ಟಪಟ್ಟಿರುವ ಕಲಾರಸಿಕರಿಗೆ ಧನ್ಯವಾದ’ ಎಂದಿದ್ದಾರೆ ಪ್ರವೀಣ್​.

Published On - 7:28 pm, Thu, 21 July 22