ಪುನೀತ್ ರಾಜ್ಕುಮಾರ್ (Puneeth Rajkumar) ಹೀಗೆ ಏಕಾಏಕಿ ನಿಧನ ಹೊಂದುತ್ತಾರೆ ಎಂದು ಯಾರೆಂದರೆ ಯಾರೂ ಅಂದುಕೊಂಡಿರಲಿಲ್ಲ. ಅವರು ಮೃತಪಟ್ಟ ವಿಚಾರ ಕೋಟ್ಯಂತರ ಅಭಿಮಾನಿಗಳಿಗೆ ನೋವು ತಂದಿದೆ. ಅವರು ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ ‘ಜೇಮ್ಸ್’ (James Movie) ತೆರೆಗೆ ಬಂದು ಧೂಳೆಬ್ಬಿಸುತ್ತಿದೆ. ಈ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ದೊಡ್ಡ ಪರದೆ ಮೇಲೆ ಪುನೀತ್ ಅವರನ್ನು ಮತ್ತೆ ಹೀರೋ ಆಗಿ ನೋಡೋಕೆ ಸಾಧ್ಯವಿಲ್ಲ ಎಂಬುದನ್ನು ನೆನಪಿಸಿಕೊಂಡು ಅಭಿಮಾನಿಗಳು ಬೇಸರ ಹೊರಹಾಕುತ್ತಿದ್ದಾರೆ. ನಿಧನ ಹೊಂದುವುದಕ್ಕೂ ಮೊದಲು ಪುನೀತ್ ಹಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಆದರೆ, ಅವರು ನಿಧನ ಹೊಂದಿದ್ದರಿಂದ ಈ ಸಿನಿಮಾ ಕೆಲಸಗಳು ನಿಂತಿವೆ. ಅವರು ಅತಿಥಿ ಪಾತ್ರ ಮಾಡಿರುವ ‘ಲಕ್ಕಿ ಮ್ಯಾನ್’ ಸಿನಿಮಾ (Lucky Man Movie) ತೆರೆಗೆ ಬರೋಕೆ ರೆಡಿ ಆಗಿದೆ. ಈ ಚಿತ್ರದಲ್ಲಿ ಫ್ಯಾನ್ಸ್ಗೆ ಸರ್ಪ್ರೈಸ್ ಒಂದು ಇದೆ.
‘ಜೇಮ್ಸ್’ ಸಿನಿಮಾ ಕೆಲಸಗಳು ಪೂರ್ಣಗೊಳ್ಳುವ ಮೊದಲೇ ಪುನೀತ್ ರಾಜ್ಕುಮಾರ್ ನಿಧನ ಹೊಂದಿದ್ದರು. ಹೀಗಾಗಿ, ಕೆಲ ದೃಶ್ಯಗಳಲ್ಲಿ ಗ್ರಾಫಿಕ್ಸ್ ಮಾಡಲಾಗಿದೆ. ಎಲ್ಲಕಿಂತ ಮುಖ್ಯವಾಗಿ ಚಿತ್ರಕ್ಕೆ ಪುನೀತ್ ಧ್ವನಿ ಇಲ್ಲ. ಇದು ಅಭಿಮಾನಿಗಳಿಗೆ ಕೊಂಚ ಬೇಸರ ತರಿಸಿದೆ. ಆದರೆ, ‘ಲಕ್ಕಿ ಮ್ಯಾನ್’ ಸಿನಿಮಾದಲ್ಲಿ ಪುನೀತ್ ಪಾತ್ರಕ್ಕೆ ಅವರದ್ದೇ ಧ್ವನಿ ಇರಲಿದೆ ಅನ್ನೋದು ವಿಶೇಷ. ಈ ಬಗ್ಗೆ ಚಿತ್ರದ ನಾಯಕ ಡಾರ್ಲಿಂಗ್ ಕೃಷ್ಣ ಮಾಹಿತಿ ನೀಡಿದ್ದಾರೆ.
‘ಲಕ್ಕಿ ಮ್ಯಾನ್’ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕ. ತಮಿಳಿನ ‘ಓಹ್ ಮೈ ಕಡವುಳೆ’ ಸಿನಿಮಾದ ರಿಮೇಕ್ ಇದು. ಈ ಚಿತ್ರದಲ್ಲಿ ಪುನೀತ್ ದೇವರಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಶೂಟಿಂಗ್ ಕೂಡ ಮುಗಿದಿದೆ. ಪುನೀತ್ ಈ ಚಿತ್ರಕ್ಕೆ ಡಬ್ ಮಾಡಿಲ್ಲ. ಆದರೆ, ಅವರು ಶೂಟಿಂಗ್ ಸಂದರ್ಭದಲ್ಲಿ ಹೇಳಿದ ಡೈಲಾಗ್ಅನ್ನೇ ಸಿನಿಮಾದಲ್ಲೂ ಬಳಕೆ ಮಾಡಿಕೊಳ್ಳಲಾಗಿದೆ. ಹೀಗಾಗಿ, ಪುನೀತ್ ಅವರ ಧ್ವನಿ ‘ಲಕ್ಕಿ ಮ್ಯಾನ್’ ಸಿನಿಮಾದಲ್ಲಿ ಸಿಗಲಿದೆ. ಮೇ ತಿಂಗಳಲ್ಲಿ ಸಿನಿಮಾ ತೆರೆಗೆ ತರುವ ಆಲೋಚನೆ ಚಿತ್ರತಂಡಕ್ಕೆ ಇದೆ.
ಪುನೀತ್ ನಿರ್ಮಾಣದ ‘ಗಂಧದ ಗುಡಿ’ ಸಾಕ್ಷ್ಯಚಿತ್ರ ಕೂಡ ಚಿತ್ರಮಂದಿರದಲ್ಲಿ ರಿಲೀಸ್ ಆಗುತ್ತಿದೆ. ಈ ಸಾಕ್ಷ್ಯಚಿತ್ರಕ್ಕೆ ಪುನೀತ್ ಅವರು ನಿರೂಪಣೆ ಮಾಡಬೇಕಿತ್ತು. ಆದರೆ, ಅದು ಸಾಧ್ಯವಾಗುತ್ತಿಲ್ಲ. ಶೂಟಿಂಗ್ ವೇಳೆ ಕೆಲವು ಕಡೆಗಳಲ್ಲಿ ಪುನೀತ್ ಮಾತನಾಡಿರುವ ವಿಡಿಯೋ ಕೂಡ ಇದೆ ಎಂದು ಮೂಲಗಳು ಹೇಳಿವೆ. ಹೀಗಾಗಿ, ಈ ಸಾಕ್ಷ್ಯಚಿತ್ರದಲ್ಲೂ ಪುನೀತ್ ಧ್ವನಿ ಕೇಳಿಸಲಿದೆ. ಈ ಚಿತ್ರದಲ್ಲಿ ಬರುವ ವಿಶೇಷ ಹಾಡಿನಲ್ಲಿ ಪ್ರಭುದೇವ ಮತ್ತು ಪುನೀತ್ ರಾಜ್ಕುಮಾರ್ ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ. ಡಾ. ರಾಜ್ಕುಮಾರ್ ಅವರ ಕುರಿತು ಈ ಸಾಂಗ್ ರಚಿತವಾಗಿದೆ ಎಂಬುದು ವಿಶೇಷ.
‘ಲಕ್ಕಿ ಮ್ಯಾನ್’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಡಬ್ಬಿಂಗ್ ಮಾಡುವ ವೇಳೆ ಪುನೀತ್ ಅವರನ್ನು ಡಾರ್ಲಿಂಗ್ ಕೃಷ್ಣ ತುಂಬ ಮಿಸ್ ಮಾಡಿಕೊಂಡರು. ಡಬ್ಬಿಂಗ್ ಸಮಯದ ಒಂದು ವಿಡಿಯೋ ತುಣುಕನ್ನು ಅವರು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಅದನ್ನು ಕಂಡು ಅಭಿಮಾನಿಗಳು ಎಮೋಷನಲ್ ಆಗಿದ್ದರು. ಪರ್ಸಾ ಪಿಕ್ಚರ್ಸ್ ಬ್ಯಾನರ್ ಮೂಲಕ ಈ ಸಿನಿಮಾ ಮೂಡಿಬರುತ್ತಿದೆ.
ಇದನ್ನೂ ಓದಿ: James Movie Review: ಜೇಮ್ಸ್ ವಿಮರ್ಶೆ: ಗೆಳೆತನದ ಕಥೆ ಹೇಳುವ ಒಂದು ‘ಪವರ್ಫುಲ್’ ಶೋ
James First Day Collection: ನಿಜಕ್ಕೂ ‘ಜೇಮ್ಸ್’ ಸಿನಿಮಾ ಗಳಿಸಿದ್ದೆಷ್ಟು? ಪಕ್ಕಾ ಲೆಕ್ಕ ಕೊಟ್ಟ ನಿರ್ಮಾಪಕ