ಪುನೀತ್​ಗೆ ಗಾನ ನಮನ ಸಲ್ಲಿಸಲು ಒಂದಾದ ನಾಲ್ವರು ಗಾಯಕರು; ಮಾ.15ಕ್ಕೆ ‘ಮಹಾನುಭಾವ’ ರಿಲೀಸ್​

ಪುನೀತ್​ ರಾಜ್​ಕುಮಾರ್ ಮೇಲಿನ ಅಭಿಮಾನಕ್ಕಾಗಿ ಸೋನು ನಿಗಮ್, ಶಂಕರ್​ ಮಹದೇವನ್​, ವಿಜಯ್​ ಪ್ರಕಾಶ್​ ಹಾಗೂ ಕೈಲಾಶ್​ ಖೇರ್ ಅವರು ಸಂಭಾವನೆ ಪಡೆಯದೇ ಈ ಹಾಡಿಗೆ ಧ್ವನಿ ನೀಡಿದ್ದಾರೆ. ಹಾಡಿನ ಕುರಿತು ಮಾಹಿತಿ ಇಲ್ಲಿದೆ.

ಪುನೀತ್​ಗೆ ಗಾನ ನಮನ ಸಲ್ಲಿಸಲು ಒಂದಾದ ನಾಲ್ವರು ಗಾಯಕರು; ಮಾ.15ಕ್ಕೆ ‘ಮಹಾನುಭಾವ’ ರಿಲೀಸ್​
ಮಹಾನುಭಾವ ಹಾಡಿಗೆ ಧ್ವನಿ ನೀಡಿದ ವಿಜಯ್ ಪ್ರಕಾಶ್, ಕೈಲಾಶ್ ಖೇರ್, ಸೋನು ನಿಗಮ್, ಶಂಕರ್ ಮಹದೇವನ್
TV9kannada Web Team

| Edited By: Madan Kumar

Mar 13, 2022 | 12:51 PM

ಭೌತಿಕವಾಗಿ ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರು ನಮ್ಮನ್ನು ಅಗಲಿರಬಹುದು. ಆದರೆ ಸಿನಿಮಾಗಳ ಮೂಲಕ, ಮೌಲ್ಯಗಳ ಮೂಲಕ ಅವರು ಯಾವಾಗಲೂ ಜೀವಂತವಾಗಿ ಇರುತ್ತಾರೆ. ಅಪ್ಪು ನಿಧನದ ನಂತರ ಅನೇಕರು ಅವರಿಗೆ ಗಾನನಮನ ಸಲ್ಲಿಸಿದ್ದಾರೆ. ಈಗ ನಿರ್ದೇಶಕ ಕಾಂತ ಕನ್ನಲ್ಲಿ ಮತ್ತು ಸಂಗೀತ ನಿರ್ದೇಶಕ ಶ್ರೀಧರ್​ ವಿ. ಸಂಭ್ರಮ್ (Sridhar V Sambhram) ಅವರು ಹೊಸ ಹಾಡು ಸಿದ್ಧಪಡಿಸಿದ್ದಾರೆ. ಪುನೀತ್​ ರಾಜ್​ಕುಮಾರ್​ ಅವರ ವ್ಯಕ್ತಿತ್ವವನ್ನು ಕೊಂಡಾಡುವ, ಎಲ್ಲರಿಗೂ ಸ್ಫೂರ್ತಿ ಆಗುವಂತಹ​ ರೀತಿಯಲ್ಲಿ ಈ ಹಾಡು ಮೂಡಿಬಂದಿದೆ ಎಂದು ಕಾಂತ ಕನ್ನಲ್ಲಿ ಹೇಳಿದ್ದಾರೆ. ಈ ಗೀತೆಗೆ ‘ಮಹಾನುಭಾವ’ ಎಂದು ಶೀರ್ಷಿಕೆ ಇಡಲಾಗಿದೆ. ವಿಶೇಷ ಏನೆಂದರೆ, ಖ್ಯಾತ ಗಾಯಕರಾದ ವಿಜಯ್​ ಪ್ರಕಾಶ್​, ಸೋನು ನಿಗಮ್​, ಕೈಲಾಶ್​ ಖೇರ್​ ಹಾಗೂ ಶಂಕರ್​ ಮಹದೇವನ್​ ಅವರು ಜೊತೆಯಾಗಿ ಈ ಗೀತೆಗೆ ಧ್ವನಿ ನೀಡಿದ್ದಾರೆ. ಕಾಂತ ಕನ್ನಲ್ಲಿ ಬರೆದ ಸಾಹಿತ್ಯಕ್ಕೆ ಈ ನಾಲ್ವರು ಜೀವ ತುಂಬಿದ್ದಾರೆ. ಮಾ.15ರಂದು ‘ಮಹಾನುಭಾವ’ ಸಾಂಗ್​ (Mahanubhava Song) ಬಿಡುಗಡೆ ಆಗುತ್ತಿದೆ. ಹಾಡಿನ ವಿಶೇಷಗಳ ಕುರಿತು ಕಾಂತ ಕನ್ನಲ್ಲಿ ಅವರು ಕೆಲವು ವಿಚಾರಗಳನ್ನು ‘ಟಿವಿ9 ಡಿಜಿಟಲ್​’ ಜೊತೆ ಹಂಚಿಕೊಂಡಿದ್ದಾರೆ.

ಪುನೀತ್​ ರಾಜ್​ಕುಮಾರ್ ಅವರು ಸದಾ ನಮ್ಮೊಂದಿಗೆ ಇರುತ್ತಾರೆ ಎಂಬ ಭಾವವನ್ನು ‘ಮಹಾನುಭಾವ’ ಹಾಡಿನ ಮೂಲಕ ಇನ್ನಷ್ಟು ಗಟ್ಟಿಗೊಳಿಸಲು ಕಾಂತ ಕನ್ನಲ್ಲಿ ಪ್ರಯತ್ನಿಸಿರುವುದಾಗಿ ಹೇಳಿದ್ದಾರೆ. ಈಗಾಗಲೇ ಕೆಲವರು ಈ ಸಾಂಗ್​ ಕೇಳಿದ್ದು ತುಂಬ ಇಷ್ಟಪಟ್ಟಿದ್ದಾರೆ. ನಟ ಶ್ರೀಮುರಳಿ ಅವರು 5 ನಿಮಿಷ ಭಾವುಕರಾಗಿದ್ದರು ಎಂದಿದ್ದಾರೆ ಕಾಂತ. ವಿಶೇಷ ಏನೆಂದರೆ ಈ ಹಾಡಿಗಾಗಿ ಕೆಲಸ ಮಾಡಿದ ಬಹುತೇಕರು ಸಂಭಾವನೆ ಪಡೆದಿಲ್ಲ.

‘ಪುನೀತ್​ ರಾಜ್​ಕುಮಾರ್ ಅವರ ಮೇಲಿನ ಅಭಿಮಾನಕ್ಕಾಗಿ ಸೋನು ನಿಗಮ್, ಶಂಕರ್​ ಮಹದೇವನ್​, ವಿಜಯ್​ ಪ್ರಕಾಶ್​ ಹಾಗೂ ಕೈಲಾಶ್​ ಖೇರ್ ಅವರು ಸಂಭಾವನೆ ಪಡೆಯದೇ ಈ ಹಾಡಿಗೆ ಧ್ವನಿ ನೀಡಿದ್ದಾರೆ. ಸಾಹಿತ್ಯ ಕೇಳಿ ಎಲ್ಲರೂ ಇಷ್ಟಪಟ್ಟಿದ್ದಾರೆ. ಈ ನಾಲ್ವರು ಗಾಯಕರ ನಡುವಿನ ಜುಗಲ್ಬಂದಿ ಚೆನ್ನಾಗಿದೆ. ಪುನೀತ್​ ನಟನೆಯ ಒಂದು ಹೊಸ ಸಿನಿಮಾ ಬಂದರೆ, ಅದರಲ್ಲಿ ಹೀರೋ ಇಂಟ್ರಡಕ್ಷನ್​ ಸಾಂಗ್​ ಇದ್ದರೆ ಹೇಗೆ ಇರಬಹುದೋ ಅದೇ ರೀತಿಯಲ್ಲಿ ಈ ಗೀತೆ ಮೂಡಿಬಂದಿದೆ’​ ಎಂದು ಕಾಂತ ಕನ್ನಲ್ಲಿ ಹೇಳಿದ್ದಾರೆ.

ಪುನೀತ್​ ರಾಜ್​ಕುಮಾರ್​ ಜೊತೆ ಒಂದು ಸಿನಿಮಾ ಮಾಡಬೇಕು ಎಂಬುದು ಕಾಂತ ಅವರ ಕನಸಾಗಿತ್ತು. ಅದಕ್ಕೆ ‘ಮಹಾನುಭಾವ’ ಅಂತ ಟೈಟಲ್​ ಇಡಲು ನಿರ್ಧರಿಸಲಾಗಿತ್ತು. ಆ ಕುರಿತು ಮಾತುಕತೆ ಆರಂಭ ಆಗಿತ್ತು. ಇನ್ನೇನು ಪುನೀತ್​ ರಾಜ್​ಕುಮಾರ್ ಅವರು ಕಥೆ ಕೇಳಲು ಟೈಮ್​ ಫಿಕ್ಸ್​ ಮಾಡುವುದು ಬಾಕಿ ಇತ್ತು. ಆದರೆ ಅಷ್ಟರಲ್ಲಾಗಲೇ ವಿಧಿ ತನ್ನ ಆಟ ಆಡಿತು. ‘ಮಹಾನುಭಾವ’ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ. ಕೊನೇ ಪಕ್ಷ ಅದೇ ಶೀರ್ಷಿಕೆ ಇಟ್ಟುಕೊಂಡು ಹಾಡಿನ ಮೂಲಕ ನಮನ ಸಲ್ಲಿಸಲು ಕಾಂತ ಕನ್ನಲ್ಲಿ ನಿರ್ಧರಿಸಿದರು.

ಕಾಂತ ಬರೆದ ಸಾಲುಗಳನ್ನು ಕೇಳಿ ಸಖತ್​ ಮೆಚ್ಚಿಕೊಂಡ ಸಂಗೀತ ನಿರ್ದೇಶಕ ಶ್ರೀಧರ್​ ವಿ. ಸಂಭ್ರಮ್​ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಪುನೀತ್​ ಅವರ ಅಭಿಮಾನಿಯಾದ ನಿರ್ಮಾಪಕ ಸುನೀಲ್​ ಬಿ.ಎನ್​. ಅವರು ಇದಕ್ಕೆ ಬಂಡವಾಳ ಹಾಕಿದ್ದಾರೆ. ‘ಸಂಭ್ರಮ್​ ಸ್ಟುಡಿಯೋಸ್​’ ಯೂಟ್ಯೂಬ್​ ಚಾನೆಲ್​ನಲ್ಲಿ ಈ ಗೀತೆ ರಿಲೀಸ್​ ಆಗಲಿದೆ. ‘ಮಹಾನುಭಾವ’ ಹಾಡಿಗಾಗಿ ಅಪ್ಪು ಫ್ಯಾನ್ಸ್​ ಕಾಯುತ್ತಿದ್ದಾರೆ.

ಇದನ್ನೂ ಓದಿ:

‘ಕನ್ನಡದ ಕೋಟ್ಯಧಿಪತಿ’ಯಿಂದ ಪುನೀತ್​ಗೆ ಸಿಕ್ಕ ಸಂಭಾವನೆ ಎಷ್ಟು ಕೋಟಿ? ಆ ದುಡ್ಡಲ್ಲಿ ಆಗ್ತಿದೆ ಪುಣ್ಯದ ಕೆಲಸ

ಸೈನಿಕನ ಗೆಟಪ್​ನಲ್ಲಿ ಆಹಾ ಎಷ್ಟು ಚಂದ ಪುನೀತ್​; ಇಲ್ಲಿವೆ ‘ಜೇಮ್ಸ್​’ ಸಿನಿಮಾದ ಫೋಟೋಗಳು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada