ನಟ ದರ್ಶನ್ (Darshan) ಅವರು ಹೀರೋ ಆಗಿ ನಟಿಸಿದ್ದು ‘ಮೆಜೆಸ್ಟಿಕ್’ ಸಿನಿಮಾದಲ್ಲಿ. ಆ ಚಿತ್ರದಿಂದ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿತು. ಈಗ ‘ಮೆಜೆಸ್ಟಿಕ್ 2’ ಸಿನಿಮಾ (Majestic 2 Movie) ಸೆಟ್ಟೇರಿದೆ. ಇಂದು (ಮಾರ್ಚ್ 31) ಈ ಸಿನಿಮಾಗೆ ಮುಹೂರ್ತ ಮಾಡಲಾಗಿದೆ. ಆದರೆ ಈ ಬಾರಿಗೆ ಹೀರೋ ಆಗಿ ನಟಿಸಲಿರುವುದು ದರ್ಶನ್ ಅಲ್ಲ. ಬದಲಿಗೆ, ಹೊಸ ನಟ ಭರತ್ ಅವರು ಹೀರೋ ಆಗಿ ‘ಮೆಜೆಸ್ಟಿಕ್ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ರಾಮು ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಎಚ್. ಆನಂದಪ್ಪ ಅವರು ನಿರ್ಮಾಣ ಮಾಡುತ್ತಿದ್ದಾರೆ. ‘ಅಮ್ಮ ಎಂಟರ್ಟೈನ್ಮೆಂಟ್’ ಹಾಗೂ ‘ಅಮ್ಮ ಫಿಲ್ಮ್ಸ್’ ಮೂಲಕ ‘ಮೆಜೆಸ್ಟಿಕ್ 2’ ಸಿನಿಮಾ ಸಿದ್ಧವಾಗುತ್ತಿದೆ. ಮುಹೂರ್ತದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ನಟ ಭರತ್ (Bharat) ಅವರು ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ.
ಕ್ಯಾಮೆರಾ ಚಾಲನೆ ಮಾಡುವ ಮೂಲಕ ಹಿರಿಯ ನಟಿ ಶ್ರುತಿ ಅವರು ‘ಮೆಜಸ್ಟಿಕ್ 2’ ಸಿನಿಮಾ ತಂಡಕ್ಕೆ ಸಾಥ್ ನೀಡಿದ್ದಾರೆ. ಸಂಹಿತಾ ವಿನ್ಯಾ ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ವಿನು ಮನಸು ಅವರ ಸಂಗೀತ ನಿರ್ದೇಶನ, ವೀನಸ್ ಮೂರ್ತಿ ಅವರ ಛಾಯಾಗ್ರಣ ಈ ಸಿನಿಮಾಗೆ ಇರಲಿದೆ. ‘ಮೆಜೆಸ್ಟಿಕ್ 2’ ಎಂಬ ಟೈಟಲ್ ಕಾರಣದಿಂದ ಎಲ್ಲರ ಗಮನ ಈ ಸಿನಿಮಾದ ಮೇಲಿದೆ. ಆ ಬಗ್ಗೆ ನಟ ಭರತ್ ಅವರು ಮಾತನಾಡಿದ್ದಾರೆ.
‘ನನ್ನ ಮೊದಲ ಸಿನಿಮಾದ ಮುಹೂರ್ತಕ್ಕೆ ಇಷ್ಟು ಜನರು ಬಂದು ಆಶೀರ್ವಾದ ಮಾಡಿದ್ದು ನನಗೆ ಖುಷಿ ನೀಡಿದೆ. ನಮ್ಮ ಸಿನಿಮಾದ ಟೈಟಲ್ ಮೇಲೆ ಎಲ್ಲರ ಗಮನ ಇದೆ. ಮೆಜೆಸ್ಟಿಕ್ ಅಂದ ತಕ್ಷಣ ನೆನಪಿಗೆ ಬರುವುದು ಡಿ ಬಾಸ್ ದರ್ಶನ್. ಅವರು ನಮಗೆ ದೇವರು ಇದ್ದಂಗೆ. ದೇವರು ವಿಗ್ರಹ ಬಿಟ್ಟು ಬರಬೇಕು ಅಂತೇನೂ ಇಲ್ಲ. ಅವರು ಬರದಿದ್ದರೂ ಅವರ ಆಶೀರ್ವಾದ ನಮ್ಮ ಮೇಲೆ ಇದೆ ಎಂದುಕೊಂಡು ನಾವು ಈ ಸಿನಿಮಾವನ್ನು ಶುರು ಮಾಡಿದ್ದೇವೆ’ ಎಂದು ಭರತ್ ಹೇಳಿದ್ದಾರೆ.
ಈ ಸಿನಿಮಾದಲ್ಲಿ ಭರತ್ ಅವರು ಮರಿ ದಾಸ ಎಂಬ ಪಾತ್ರ ಮಾಡುತ್ತಿದ್ದಾರೆ. ‘ಈಗಿನ ಕಾಲದಲ್ಲಿ ಮೆಜೆಸ್ಟಿಕ್ ಎನ್ನುವ ಊರಿನಲ್ಲಿ ಯಾವ ರೀತಿ ಚಟುವಟಿಕೆಗಳು ನಡೆಯುತ್ತವೆ? ಈಗ ಯಾವ ರೀತಿ ರೌಡಿಸಂ ಇದೆ? ಅದರ ಸ್ವರೂಪ ಯಾವ ರೀತಿ ಇರಲಿದೆ ಎಂಬುದನ್ನು ನಮ್ಮ ಸಿನಿಮಾದಲ್ಲಿ ತೋರಿಸುತ್ತೇವೆ. ಶೀರ್ಷಿಕೆ ಕಾರಣದಿಂದ ನಿರೀಕ್ಷೆ ಇದೆ. ನಿರೀಕ್ಷೆ ಬರಲು ಕಾರಣ ಡಿ ಬಾಸ್. ಹಾಗಾಗಿ ನಮಗೆ ಭಯ ಮತ್ತು ಜವಾಬ್ದಾರಿ ಇದೆ. ನಿರೀಕ್ಷೆಯ ಮಟ್ಟ ತಲುಪಲು ನಾವು ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಅವರ ರೀತಿ ಸಕ್ಸಸ್ ಸಿಗದಿದ್ದರೂ ಅವರ ಯಶಸ್ಸಿನಲ್ಲಿ ಕಿಂಚಿತ್ತು ಸಿಕ್ಕರೂ ಕೂಡ ಅದನ್ನು ನಾವು ಯಶಸ್ಸು ಅಂತ ಪರಿಗಣಿಸುತ್ತೇವೆ’ ಎಂದು ಭರತ್ ಹೇಳಿದ್ದಾರೆ.
ಇದನ್ನೂ ಓದಿ: ದರ್ಶನ್ ಮಾಜಿ ಪಿಎ ವಿರುದ್ಧ ಪತ್ರಿಕಾ ಪ್ರಕಟಣೆ; 7 ವರ್ಷವಾದ್ರೂ ಯಾರಿಗೂ ಸಿಕ್ಕಿಲ್ಲ ಮಲ್ಲಿಕಾರ್ಜುನ್
ನಟಿ ಸಂಹಿತಾ ವಿನ್ಯಾ ಅವರು ಒಂದು ಚಾಲೆಂಜಿಂಗ್ ಪಾತ್ರ ಮಾಡಲಿದ್ದಾರಂತೆ. ‘ನಾಳೆಯಿಂದಲೇ ಶೂಟಿಂಗ್ ಆರಂಭ ಆಗಲಿದೆ. ಎಲ್ಲರ ಮನಸ್ಸಿನಲ್ಲೂ ಡಿ ಬಾಸ್ ದರ್ಶನ್ ಇರುತ್ತಾರೆ. ಆದರೆ ನಮ್ಮದು ಹೊಸಬರ ಸಿನಿಮಾ. ಇದನ್ನು ಜನರು ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ. ಕಥೆಯಂತೂ ತುಂಬ ಅದ್ಭುತವಾಗಿ ಮೂಡಿಬರಲಿದೆ’ ಎಂದು ಸಂಹಿತಾ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.