ಕೆಜಿಎಫ್ ಕಥೆ ಹೇಳಿದ ಮಾಳವಿಕಾ ಅವಿನಾಶ್.. ಪಾರ್ಟ್ 2 ಸೆಟ್ ಅದೆಷ್ಟು ಅದ್ಧೂರಿ!
ಎಂತಹ ಮೇರು ನಟರನ್ನೇ ನಿಲ್ಲಿಸಿದರೂ ತನಗೆ ಬೇಕಾದ ರೀತಿಯಲ್ಲಿ ಕೆಲಸ ತೆಗೆಸುವ ತಾಕತ್ತು ಪ್ರಶಾಂತ್ ನೀಲ್ಗೆ ಇದೆ. ಮೊದಲ ಭಾಗದಲ್ಲಿ ಅನಂತ್ ನಾಗ್, ಈ ಬಾರಿ ಸಂಜಯ್ ದತ್ ಹೀಗೆ ಯಾರೇ ಇರಲಿ ಪ್ರಶಾಂತ್ ತನಗೆ ಇಂಥದ್ದೇ ಅಭಿನಯ ಬೇಕು ಎಂದು ಅವರಿಂದ ಕೇಳಿ ಪಡೆಯುತ್ತಾರೆ. ಅಂತಹ ಪರ್ಫೆಕ್ಷನಿಸ್ಟ್, ಪ್ರತಿಭಾವಂತ ಮತ್ತು ತನ್ನ ಕೆಲಸದ ಬಗ್ಗೆ ಆತ್ಮವಿಶ್ವಾಸ, ಅಚಲತೆ ಇರುವ ಯುವ ನಿರ್ದೇಶಕ ಎನ್ನುವುದು ಮೆಚ್ಚಲೇಬೇಕಾದ ಸಂಗತಿ.
ಕನ್ನಡದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ 2 ತನ್ನ ಟೀಸರ್ ಮೂಲಕವೇ ಹೊಸ ದಾಖಲೆಗಳನ್ನು ನಿರ್ಮಿಸಿದೆ. ಈ ಸಿನಿಮಾ ಕನ್ನಡ ನೆಲದಾಚೆಗೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇಂತಹ ದೈತ್ಯ ಚಿತ್ರದಲ್ಲಿ ಅಭಿನಯಿಸಿರುವ ಮಾಳವಿಕಾ ಅವಿನಾಶ್ ತಮ್ಮ ಅನುಭವಗಳನ್ನು ಟಿವಿ9 ಕನ್ನಡದೊಂದಿಗೆ ಹಂಚಿಕೊಂಡಿದ್ದಾರೆ..
ಕನ್ನಡ ಸಿನಿಮಾವೊಂದು ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಕನ್ನಡಿಗರೆಲ್ಲರಿಗೂ ಸಂಭ್ರಮದ ಕ್ಷಣ. ಇಂಥದ್ದೊಂದು ದಿನ ಬರಲಿ, ಕನ್ನಡ ಚಿತ್ರರಂಗ ದೊಡ್ಡ ಮಟ್ಟಕ್ಕೆ ಹೋಗಲಿ ಎಂಬ ಆಸೆ, ನಿರೀಕ್ಷೆಗೆ ಈಗ ಕಾಲ ಕೂಡಿಬಂದಿದೆ. ನಾವು ಹಲವು ದಶಕಗಳಿಂದ ಒಳ್ಳೆಯ ಸಿನಿಮಾಗಳನ್ನೇ ಕೊಡ್ತಿದ್ದೇವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಈ ಪರಿಯಾದ ನಿರೀಕ್ಷೆ ಹುಟ್ಟಿಸಿದ ಆ ಶ್ರೇಯಸ್ಸು ನಿಸ್ಸಂದೇಹವಾಗಿ ಕೆಜಿಎಫ್ ತಂಡಕ್ಕೆ ಸಲ್ಲಬೇಕು. ಕೆಜಿಎಫ್ ಕೇವಲ ನೆರೆಹೊರೆಯ ಭಾಷಿಕರನ್ನಷ್ಟೇ ಸೆಳೆದಿಲ್ಲ. ಇದು ದೇಶ, ಭಾಷೆಗಳ ಗಡಿ ದಾಟಿ ಜಾಗತಿಕ ಮಟ್ಟದಲ್ಲಿ ಸದ್ದು ಮಾಡ್ತಿದೆ. ಒಂದೆಡೆ ಆ್ಯವೆಂಜರ್ಸ್ ಸಿನಿಮಾವನ್ನು ಮೀರಿಸುವ ಮಟ್ಟದ್ದು ಎಂಬ ಸುದ್ದಿ ಓದಿದೆ. ಅದು ನಮಗೆ ಅತ್ಯಂತ ಹೆಮ್ಮೆಯ ಭಾವವನ್ನು ಹುಟ್ಟಿ ಹಾಕೋ ಸಂಗತಿ. ನಮ್ಮ ಭಾಷೆಯ ಸಿನಿಮಾ ಇಷ್ಟೆಲ್ಲಾ ಅದ್ಭುತಗಳನ್ನು ಸೃಷ್ಟಿಸ್ತಾ ಇದೆ ಎಂದರೆ ನಮಗದು ಸಾರ್ಥಕತೆಯ ಭಾವ ನೀಡುತ್ತದೆ.
ಇಲ್ಲಿ ಪ್ರಶಾಂತ್ ನೀಲ್ ಬಗ್ಗೆ ಹೇಳಲೇಬೇಕು. ಅವರೊಂದಿಗೆ ಕೆಲಸ ಮಾಡೋದು ಸಾಮಾನ್ಯ ಸಂಗತಿಯಲ್ಲ. ನಮಗೆ ಪ್ರತಿಬಾರಿ ಹೊಸ ಸಿನಿಮಾ ಮಾಡುವಾಗಲೂ ಒಂದು ಸಣ್ಣ ಭಯ ಇರುತ್ತೆ. ಆದ್ರೆ, ಪ್ರಶಾಂತ್ ನೀಲ್ ಜೊತೆ ಇದ್ದರೆ ಆ ಭಯ ಇನ್ನೂ ಜಾಸ್ತಿ. ಜೊತೆಗೆ, ಕೆಜಿಎಫ್ ಬಗ್ಗೆ ಜನರಿಗೆ ಅತೀವ ನಿರೀಕ್ಷೆ ಇದೆ ಅಂದಮೇಲೆ ಒಂದು ಬಗೆಯ ನರ್ವಸ್ನೆಸ್ ಸಹಜವಾಗಿ ಬಂದಿತ್ತು. ಪ್ರಶಾಂತ್ ನೀಲ್ ಬಳಿ ಎಂತಹ ಮೇರು ನಟರನ್ನೇ ನಿಲ್ಲಿಸಿದರೂ ತನಗೆ ಬೇಕಾದ ರೀತಿಯಲ್ಲಿ ಕೆಲಸ ತೆಗೆಸುವ ತಾಕತ್ತು ಇದೆ. ಮೊದಲ ಭಾಗದಲ್ಲಿ ಅನಂತ್ ನಾಗ್, ಈ ಬಾರಿ ಸಂಜಯ್ ದತ್ ಹೀಗೆ ಯಾರೇ ಇರಲಿ ಪ್ರಶಾಂತ್ ತನಗೆ ಇಂಥದ್ದೇ ಅಭಿನಯ ಬೇಕು ಎಂದು ಅವರಿಂದ ಕೇಳಿ ಪಡೆಯುತ್ತಾರೆ. ಅವರು ಅಂತಹ ಪರ್ಫೆಕ್ಷನಿಸ್ಟ್, ಪ್ರತಿಭಾವಂತ ಮತ್ತು ತನ್ನ ಕೆಲಸದ ಬಗ್ಗೆ ಆತ್ಮವಿಶ್ವಾಸ, ಅಚಲತೆ ಇರುವ ಯುವ ನಿರ್ದೇಶಕ ಎನ್ನುವುದು ಮೆಚ್ಚಲೇಬೇಕಾದ ಸಂಗತಿ.
ನಾವು ಸಾಧಾರಣವಾಗಿ ಯಾವುದೇ ಸಿನಿಮಾ ಸೆಟ್ನಲ್ಲಿ ಸೀನ್ ಇದ್ದಾಗ ಗಂಭೀರವಾಗಿರ್ತೇವೆ. ಬಿಡುವಿದ್ದಾಗ ಆರಾಮಾಗಿ ಹರಟೆ ಹೊಡ್ಕೊಂಡು ಕಾಲ ಕಳೆಯೋದು ರೂಢಿ. ಆದರೆ, ಪ್ರಶಾಂತ್ ನೀಲ್ ಇರುವಲ್ಲಿ ಅದಕ್ಕೆಲ್ಲಾ ಜಾಗವೇ ಇಲ್ಲ. ಅವರದ್ದು ಕೆಲಸ ಅಂದ್ರೆ ಕೆಲಸ ಅಷ್ಟೇ. ಅವರೂ ನೂರಕ್ಕೆ ನೂರು ಕೆಲಸ ಮಾಡ್ತಾರೆ ಮತ್ತು ಅಲ್ಲಿರುವ ಪ್ರತಿಯೊಬ್ಬರಿಂದಲೂ ಅಷ್ಟೇ ಶ್ರದ್ಧೆ ಬಯಸುತ್ತಾರೆ. ಹಾಗಾಗಿ, ಕೆಜಿಎಫ್ ಸೆಟ್ನಲ್ಲಿ ಜೋರಾಗಿ ನಗುವುದಿರಲಿ, ಅನಾವಶ್ಯಕವಾಗಿ ತುಟಿಕ್ಪಿಟಿಕ್ ಅನ್ನೋ ಸದ್ದು ಕೂಡಾ ಕೇಳೋಕೆ ಸಾಧ್ಯವಾಗ್ತಾ ಇರ್ಲಿಲ್ಲ. ಅಲ್ಲಿ ಸೆಟ್ ಒಳಗೆ ಹೋಗ್ತಿದ್ವಿ ಅನ್ನೋದಕ್ಕಿಂತ ಲ್ಯಾಬ್ ಒಳಗೆ ಹೊಕ್ಕ ಅನುಭವ ಆಗ್ತಾ ಇತ್ತು.
ಕೆಜಿಎಫ್ ಮೊದಲ ಭಾಗದಲ್ಲಿ ನಾನು ಅಭಿನಯಿಸಿದ ಸೀನ್ನಲ್ಲಿ ಅದ್ಧೂರಿ ಸೆಟ್ಗಳೇನೂ ಇರಲಿಲ್ಲ. ಆದ್ರೆ, ಒಬ್ಬಳು ಪ್ರೇಕ್ಷಕಳಾಗಿ ನೋಡಿದಾಗ ಕನ್ನಡದಲ್ಲೂ ಹೀಗೆಲ್ಲಾ ಮಾಡ್ತಾರಾ ಎಂದು ಬೆರಗಾಗಿತ್ತು. ಆ ಸಿನಿಮಾವೇ ಒಂದು ಅಚ್ಚರಿ. ಆದ್ರೆ ಎರಡನೇ ಭಾಗ ಅದನ್ನೂ ಮೀರಿಸುವಂತಹದ್ದು. ಇಲ್ಲಿ ನಾನು ಅಭಿನಯಿಸಿದ ಸೆಟ್ ನೋಡಿದಾಗಲೇ ನನಗೆ ಹಾಲಿವುಡ್ ಸಿನಿಮಾನ ಇದು ಎನ್ನುವಷ್ಟು ಆಶ್ಚರ್ಯ ಆಗಿತ್ತು. ಅದಾದ ಮೇಲೆ ಡಬ್ಬಿಂಗ್ ಮಾಡುವಾಗ ಸ್ಕ್ರೀನ್ ಮೇಲೆ ನೋಡಿದ ಒಂದೊಂದು ದೃಶ್ಯಾವಳಿಯೂ ಅತ್ಯದ್ಭುತ ಎನ್ನುವ ಫೀಲ್ ಕೊಟ್ಟಿದೆ. ಈ ಭಾಗವನ್ನು ತೆರೆಯ ಮೇಲೆ ನೋಡೋದೇ ಒಂದು ಹಬ್ಬವಾಗಲಿದೆ.
ಇಂತಹದ್ದೊಂದು ಸಿನಿಮಾವನ್ನು ಸೃಷ್ಟಿ ಮಾಡುವ ಹಿಂದೆ ಒಬ್ಬೊಬ್ಬರ ಶ್ರಮವೂ ಇದೆ. ಇಲ್ಲಿ ಒಂದು ಘಟನೆಯನ್ನು ಸ್ಮರಿಸಿಕೊಳ್ಳಲೇಬೇಕು. ಕೆಜಿಎಫ್ 1 ಚಿತ್ರೀಕರಣವೆಲ್ಲಾ ಮುಗಿದು ಸುಮಾರು ದಿನ ಆದಮೇಲೆ ತಡರಾತ್ರಿ ವೇಳೆ ನನಗೊಂದು ಕರೆ ಬಂತು. ಸಾಧಾರಣವಾಗಿ ರಾತ್ರಿ ಹೊತ್ತಿನಲ್ಲಿ ಯಾರೇ ಕಾಲ್ ಮಾಡಿದರೂ ರಿಸೀವ್ ಮಾಡೋದಿಲ್ಲ. ಆದರೆ, ಅವತ್ತು ಕಾಲ್ ಮಾಡಿದ್ದು ಯಶ್ ಆಗಿದ್ದರಿಂದ ಏನೋ ತುರ್ತು ಕಾರಣ ಇರಬಹುದು ಅಂತ ರಿಸೀವ್ ಮಾಡಿದೆ. ಅಷ್ಟು ಹೊತ್ತಿನಲ್ಲಿ ಕಾಲ್ ಮಾಡಿದರೆ ಉತ್ತರ ಸಿಗೋದು ಅನುಮಾನ ಅಂತ ರಾಧಿಕಾ ಪಂಡಿತ್ ಹೇಳಿದ್ರಂತೆ. ಆದ್ರೆ, ಯಾವ ಕಾರಣಕ್ಕೆ ಫೋನ್ ಮಾಡಿದ್ದು ಅಂತ ಗೊತ್ತಾದಾಗ ನನಗೆ ಅಚ್ಚರಿ ಆಯ್ತು. ನಾಳೆ ಬೆಳಗ್ಗೆ 10 ಗಂಟೆಗೆ ಬೇರೆಲ್ಲಾ ಭಾಷೆಗಳಲ್ಲಿ ಪ್ರೋಮೊ ಬಿಡುಗಡೆ ಮಾಡಬೇಕು ಬೇರೆ ಬೇರೆ ಪಾತ್ರಗಳಿಗೆ ಡಬ್ಬಿಂಗ್ ಆಗಬೇಕಿದೆ.. ಬರಬಹುದಾ? ಅಂತ ಕೇಳಿದ್ರು. ಒಬ್ಬ ಕಲಾವಿದ ತನ್ನ ಕೆಲಸದ ಮೇಲೆ ಅಷ್ಟೊಂದು ಪ್ಯಾಶನ್ ಇಟ್ಟು ಕರೆ ಮಾಡ್ತಾನೆ ಅಂದರೆ ನಿರಾಕರಿಸೋದು ಹೇಗೆ ಸಾಧ್ಯ? ಆಯ್ತಪ್ಪಾ.. ಖಂಡಿತಾ ಮಾಡ್ತೀನಿ. ಈಗಲೇ ಬರಬೇಕಾ ಅಂತ ಕೇಳಿದೆ. ಬೇಡ ಬೆಳಗ್ಗೆ 4:30ರಿಂದ 5ರ ಒಳಗೆ ಬನ್ನಿ. ಆಮೇಲೆ ಅದನ್ನೆಲ್ಲಾ ತಿದ್ದಿ ಸರಿ ಮಾಡ್ಕೊಂಡು 10 ಗಂಟೆಗೆ ಪ್ರೊಮೊ ಬಿಡ್ತೀವಿ ಅಂತ ಹೇಳಿದ್ರು. ಅವರ ಹುರುಪು ನೋಡಿ ಬೆಳಗ್ಗೆ ಬೇಗ ಎದ್ದು ಹೋದೆ. ಅಲ್ಲಿ ಹೋಗಿ ನೋಡಿದರೆ ಪ್ರಶಾಂತ್ ನೀಲ್ ಕಾಯ್ತಾ ನಿಂತಿದ್ರು. ಎಲ್ಲಾ ನಿರ್ದೇಶಕರೂ ಪರಿಶ್ರಮ ಪಡ್ತಾರೆ. ಆದ್ರೆ ಈ ಪರಿ ಮೈಮೇಲೆ ಏನೋ ಆವರಿಸಿಕೊಂಡಂತೆ ಹಗಲು ರಾತ್ರಿ ಎನ್ನದೇ ಇಡೀ ತಂಡಕ್ಕೆ ತಂಡವೇ ನಿದ್ದೆ ಬಿಟ್ಟು ಕೆಲಸ ಮಾಡೋದು ನಿಜಕ್ಕೂ ದೊಡ್ಡ ವಿಷಯ. ಇದೇ ಕೆಜಿಎಫ್ ಸಿನಿಮಾದ ಶಕ್ತಿ.
ಕೆಜಿಎಫ್ ಸಿನಿಮಾ 100 ಕೋಟಿ ಕ್ಲಬ್ಗೆ ಪದಾರ್ಪಣೆ ಮಾಡುವ ಮೂಲಕ ಕನ್ನಡ ಚಿಂತ್ರರಂಗವನ್ನು ಒಂದು ಹಂತಕ್ಕೆ ಕೊಂಡೊಯ್ದಿದೆ. ಈಗ ಕೆಜಿಎಫ್ 2 ಮೂಲಕ ಅದನ್ನೂ ಮೀರಿದ ಸಾಧನೆ ಮಾಡೋದು ಬಾಕಿ ಇದೆಯಷ್ಟೇ. ಕನ್ನಡ ಸಿನಿಮಾಗಳ ಗುಣಮಟ್ಟ ಮೊದಲಿನಿಂದಲೂ ಚೆನ್ನಾಗಿತ್ತು. ಈಗ ಕೆಜಿಎಫ್ 2 ಆರ್ಥಿಕ ಮಟ್ಟವನ್ನು ಮೇಲಕ್ಕೆ ಎತ್ತುವ ಕೆಲಸ ಮಾಡಲಿದೆ. ಮುಖ್ಯವಾಗಿ ಈ ಸಾಧನೆ ಕೆಜಿಎಫ್ 2ಗೆ ಮಾತ್ರ ಸೀಮಿತವಲ್ಲ. ಇದು ಇಡೀ ಕನ್ನಡ ಚಿತ್ರರಂಗಕ್ಕೆ ಸಿಗಲಿರುವ ಕೊಡುಗೆ. ಒಂದು ಸಿನಿಮಾ ಎಷ್ಟೊಂದು ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಬಹುದೋ ಅದನ್ನು ಕೆಜಿಎಫ್ 2 ಮಾಡಲಿದೆ. ಜನರು ಈ ಚಿತ್ರದ ಮೇಲಿಟ್ಟಿರುವ ನಂಬಿಕೆ, ಭರವಸೆ ಇದಕ್ಕೆ ಮತ್ತಷ್ಟು ಶಕ್ತಿ ತುಂಬಲಿದೆ.
Published On - 7:17 pm, Tue, 12 January 21