ನಟಿ, ನಿರೂಪಕಿ ಅನುಶ್ರೀ ಡ್ರಗ್ಸ್ ಕೇಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿಕೆ ನೀಡಿದ್ದು, ಟಿವಿ9ನಲ್ಲಿ ಪ್ರಸಾರವಾಗಿರುವ ಚಾರ್ಜ್ಶೀಟ್ನ ಮಾಹಿತಿ ಸತ್ಯ ಎಂದಿದ್ದಾರೆ. ಈಗಾಗಲೇ ತನಿಖೆ ಪೂರ್ಣಗೊಂಡು ಅಂತಿಮ ವರದಿ ಸಲ್ಲಿಕೆಯಾಗಿದೆ. ತಾನು ಆಯುಕ್ತನಾಗಿ ಬರುವಷ್ಟರಲ್ಲೇ ತನಿಖೆ ಪೂರ್ಣವಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಹಿತಿ ಪಡೆದುಕೊಂಡಿದ್ದೇನೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದ್ದಾರೆ.
ನ್ಯಾಯಾಲಯಕ್ಕೆ ಫೈನಲ್ ಚಾರ್ಜ್‌ಶೀಟ್ ಈಗಾಗಲೇ ಸಲ್ಲಿಸಲಾಗಿದೆ. ನಿರೂಪಕಿ ಅನುಶ್ರೀ ವಿರುದ್ಧ ಸಾಕ್ಷ್ಯಾಧಾರದ ಕೊರತೆಯಿಂದಾಗಿ ಅಂದು ಪ್ರಕರಣ ದಾಖಲಿಸಲಾಗಿಲ್ಲ. ಪ್ರಕರಣದ ಸಂಬಂಧ ಮತ್ತೆ ಅನುಶ್ರೀ ವಿಚಾರಣೆಯ ಸಾಧ್ಯತೆ ಕಡಿಮೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರಕರಣ 2007ರಲ್ಲಿ ನಡೆದಿದ್ದರಿಂದ ಮತ್ತು ಅನುಶ್ರೀ ವಿರುದ್ಧ ಸಾಕ್ಷಾಧಾರಗಳು ಇಲ್ಲದ್ದರಿಂದ ಅವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿಲ್ಲ ಎಂದು ಶಶಿಕುಮಾರ್ ತಿಳಿಸಿದ್ದಾರೆ.
‘ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿದ ಅಂಶಗಳು ನನ್ನ ಹೇಳಿಕೆಯಲ್ಲ’ ಎಂದ ಕಿಶೋರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶಶಿಕುಮಾರ್:
‘ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿದ ಅಂಶಗಳು ನನ್ನ ಹೇಳಿಕೆಯಲ್ಲ’ ಎಂದಿರುವ ಪ್ರಕರಣದ ಎ2 ಕಿಶೋರ್ ಅಮನ್ ಶೆಟ್ಟಿ ಕುರಿತಂತೆ ಎನ್.ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ‘‘ಚಾರ್ಜ್‌ಶೀಟ್‌ನಲ್ಲಿನ ಅಂಶಗಳನ್ನು ಓದಿ ಹೇಳಿಸಿ ನಂತರ ವ್ಯಕ್ತಿಯ ಸಹಿ ಪಡೆಯಲಾಗುತ್ತದೆ. ಪ್ರತಿಯೊಂದು ಪ್ರಕರಣದಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆ ಇದಾಗಿದ್ದು, ಹೇಳಿಕೆ ಅವರದ್ದಲ್ಲ ಎಂದಾಗಿದ್ದರೆ, ಕಿಶೋರ್ ಶೆಟ್ಟಿ ಅಂದು ನ್ಯಾಯಾಲಯದಲ್ಲೇ ಹೇಳಬಹುದಿತ್ತು. ಆದರೆ ಈಗ ಆ ವ್ಯಕ್ತಿ ತಾನು ಹೇಳಿಕೆ ನೀಡಿಲ್ಲ ಎಂಬುದು ತಪ್ಪು’’ ಎಂದು ಶಶಿಕುಮಾರ್ ಹೇಳಿದ್ದಾರೆ.
ಕಿಶೋರ್ ಏನು ಹೇಳಿದ್ದರು?
‘‘ನನಗೆ ಡ್ರಗ್ಸ್ ಪ್ರಕರಣದ ಬಗ್ಗೆ ಏನೇನೂ ಗೊತ್ತಿಲ್ಲ. ಚಾರ್ಜ್‌ಶೀಟ್ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಟಿ ಅನುಶ್ರೀ ಜೊತೆ ಯಾವುದೇ ಪಾರ್ಟಿ ಮಾಡಿಲ್ಲ. ಚಾರ್ಜ್‌ಶೀಟ್‌ನಲ್ಲಿರುವುದು ನನ್ನ ಹೇಳಿಕೆ ಅಲ್ಲ’’ ಎಂದು ಆರೋಪಿ ಕಿಶೋರ್ ಶೆಟ್ಟಿ ಹೇಳಿಕೆ ನೀಡಿದ್ದರು.
ಇದನ್ನೂ ಓದಿ:
ಅನುಶ್ರೀ ಡ್ರಗ್ಸ್ ಕೇಸ್; ಚಾರ್ಜ್ಶೀಟಿನಲ್ಲಿರುವುದು ತನ್ನ ಹೇಳಿಕೆ ಅಲ್ಲ ಎಂದ ಆರೋಪಿ ಕಿಶೋರ್ ಅಮನ್ ಶೆಟ್ಟಿ
(Mangalore Police Commissioner says tv9 report on drugs case charge sheet is true and there is less chance to re-investigate Anushree)
Published On - 3:26 pm, Wed, 8 September 21