
ರೇಣುಕಾ ಯೋಗರಾಜ್ ಭಟ್, ಶ್ರೀನಿಧಿ ದರ್ಬೆ, ಶಿಲ್ಪಾ ಪ್ರಸನ್ನ ಅವರು ‘ಮತ್ತೆ ಮೊದಲಿಂದ’ (Matte Modalinda) ಗೀತಗುಚ್ಛವನ್ನು (ಆಲ್ಬಂ) ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ಒಟ್ಟು ನಾಲ್ಕು ಹಾಡುಗಳು ಇವೆ. ಈಗ ನಾಲ್ಕನೇ ಮತ್ತು ಕೊನೆಯ ಹಾಡನ್ನು ಜಯಂತ ಕಾಯ್ಕಿಣಿ (Jayant Kaikini) ಅವರು ಬಿಡುಗಡೆ ಮಾಡಿ, ಶುಭ ಹಾರೈಸಿದ್ದಾರೆ. ‘ನೀ ಹೋದ ಮೇಲೆ’ (ನೆನಪಿನ ಬಣ್ಣ ಹಸಿರು) ಎಂಬುದು ಈ ಹಾಡಿನ ಶೀರ್ಷಿಕೆ. ಯೋಗರಾಜ್ ಭಟ್ (Yogaraj Bhat) ಅವರು ಬರೆದಿರುವ ಈ ಹಾಡಿಗೆ ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ. ವಾಸುಕಿ ವೈಭವ್ ಗಾಯನದಲ್ಲಿ ಈ ಹಾಡು ಮೂಡಿಬಂದಿದೆ.
‘ಪಂಚರಂಗಿ’ ಯೂಟ್ಯೂಬ್ ಚಾನೆಲ್ ಮೂಲಕ ‘ನೀ ಹೋದ ಮೇಲೆ’ (ನೆನಪಿನ ಬಣ್ಣ ಹಸಿರು) ಹಾಡು ಬಿಡುಗಡೆ ಆಗಿದೆ. ಈ ಗೀತೆಯಲ್ಲಿ ಸಂಜನ್ ಕಜೆ ಮತ್ತು ಅಂಜಲಿ ಗೌಡ ಅವರು ನಟಿಸಿದ್ದಾರೆ. ಇತ್ತೀಚೆಗೆ ನಡೆದ ಈ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ಗಡ್ಡ ವಿಜಿ, ‘ಬೆಂಗಳೂರು ಕೆಫೆ’ ಶಿವಾನಂದ್ ಮುಂತಾದವರು ಉಪಸ್ಥಿತರಿದ್ದರು.
ಹಾಡು ಬಿಡುಗಡೆ ಮಾಡಿದ ಬಳಿಕ ಜಯಂತ ಕಾಯ್ಕಿಣಿ ಅವರು ಮಾತನಾಡಿದರು. ‘ಪ್ರೇಮಗೀತೆಗಳಲ್ಲಿ ಹೆಚ್ಚಾಗಿ ಜನಪ್ರಿಯ ಆಗಿರುವುದು ಪ್ರೀತಿ ಕೈ ಕೊಟ್ಟಾಗ ಬಂದಿರುವ ಗೀತೆಗಳು. ಅಂತಹ ಹಾಡುಗಳನ್ನು ಯೋಗರಾಜ್ ಭಟ್ ಅವರು ಬಹಳ ಚೆನ್ನಾಗಿ ಬರೆಯುತ್ತಾರೆ. ಅವುಗಳ ಸಾಲಿಗೆ ಈ ಹಾಡು ಕೂಡ ಸೇರಿದೆ. ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಮತ್ತು ವಾಸುಕಿ ವೈಭವ್ ಅವರ ಗಾಯನ ಈ ಹಾಡಿಗೆ ಪೂರಕವಾಗಿದೆ. ಕಲಾವಿದರ ನಟನೆ ಕೂಡ ಚೆನ್ನಾಗಿದೆ. 4 ಹಾಡುಗಳನ್ನು 4 ಬಣ್ಣಗಳು ಪ್ರತಿನಿಧಿಸಿರುವುದು ವಿಶೇಷ’ ಎಂದು ಜಯಂತ ಕಾಯ್ಕಿಣಿ ಹೇಳಿದರು.
ಯೋಗರಾಜ್ ಭಟ್ ಅವರು ಮಾತನಾಡಿ, ‘ಮತ್ತೆ ಮೊದಲಿಂದ ಗೀತಗುಚ್ಛದಲ್ಲಿ 4 ಪ್ರೇಮಗೀತೆಗಳಿವೆ. ನಾಲ್ಕು ಹಾಡುಗಳನ್ನು ಬಿಳುಪು, ನೀಲಿ, ಕೆಂಪು ಮತ್ತು ಹಸಿರು ಬಣ್ಣಗಳು ಪ್ರತಿನಿಧಿಸುತ್ತದೆ. ಎಲ್ಲ ಹಾಡುಗಳಿಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನಾನೇ 4 ಹಾಡುಗಳನ್ನು ಬರೆದಿದ್ದೇನೆ. 4 ಹಾಡುಗಳಿಗೂ ನಾಲ್ಕು ಹೆಸರಾಂತ ಸಂಗೀತ ನಿರ್ದೇಶಕರು ಸಂಗೀತ ಸಂಯೋಜಿಸಿದ್ದಾರೆ. ಜನಪ್ರಿಯ ಗಾಯಕ, ಗಾಯಕಿಯರು ಹಾಡಿದ್ದಾರೆ. ಈಗ ಬಿಡುಗಡೆ ಆಗಿರುವ ಹಾಡಿನಲ್ಲಿ ಖ್ಯಾತ ಆಯುರ್ವೇದ ವೈದ್ಯ ಗಿರಿಧರ ಕಜೆ ಅವರ ಕುಟುಂಬದ ಸದಸ್ಯ ಸಂಜನ್ ಕಜೆ ಮತ್ತು ಅಂಜಲಿ ಗೌಡ ಅಭಿನಯಿಸಿದ್ದಾರೆ’ ಎಂದರು.
ಇದನ್ನೂ ಓದಿ: ‘ನಿಮಗಿಂತ ಮೂಗೇ ಮೊದಲು ಬರುತ್ತೆ’; ಪೂಜಾ ಗಾಂಧಿಗೆ ನೇರವಾಗಿ ಹೇಳಿದ್ದ ಯೋಗರಾಜ್ ಭಟ್
ಹಾಡು ಬಿಡುಗಡೆ ಮಾಡಿದ ಜಯಂತ ಕಾಯ್ಕಿಣಿ ಅವರಿಗೆ ಯೋಗರಾಜ್ ಭಟ್ ಅವರು ಧನ್ಯವಾದ ತಿಳಿಸಿದರು. ವಾಸುಕಿ ವೈಭವ್ ಅವರು ಮಾತನಾಡಿ, ‘ಯೋಗರಾಜ್ ಭಟ್ ಅವರು ಬರೆದ ಹಾಡನ್ನು ಹಾಡುವುದಕ್ಕೆ ನನಗೆ ಬಹಳ ಖುಷಿಯಾಗುತ್ತದೆ. ಈ ಹಾಡು ಕೂಡ ಮಧುರವಾಗಿದೆ’ ಎಂದರು. ‘ಈ ಹಾಡಿನಲ್ಲಿ ಅಭಿನಯಿಸಿದ್ದು ಬಹಳ ಸಂತೋಷವಾಗಿದೆ’ ಎಂದು ನಟ ಸಂಜನ್ ಕಜೆ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.