ಡಾ. ರಾಜ್ ಸಹೋದರ ವರದಪ್ಪನವರ ಮೊಮ್ಮಗನ ಮೊದಲ ಸಿನಿಮಾ ‘ಮಿಂಚುಹುಳು’ ಅ.4ಕ್ಕೆ ರಿಲೀಸ್

|

Updated on: Sep 27, 2024 | 9:21 PM

ಕನ್ನಡದ ‘ಮಿಂಚುಹುಳು’ ಸಿನಿಮಾ ಅಕ್ಟೋಬರ್​ 4ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಪೃಥ್ವಿರಾಜ್​, ಪ್ರೀತಂ ಕೊಪ್ಪದ ಮುಂತಾದವರು ನಟಿಸಿದ್ದಾರೆ. ಮಹೇಶ್ ಕುಮಾರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಹಂಸಲೇಖ, ಜಯಮಾಲಾ, ಪಿ. ಶೇಷಾದ್ರಿ ಮುಂತಾದ ಗಣ್ಯರು ಸಿನಿಮಾ ವೀಕ್ಷಿಸಿ ಭೇಷ್​ ಎಂದಿದ್ದಾರೆ.

ಡಾ. ರಾಜ್ ಸಹೋದರ ವರದಪ್ಪನವರ ಮೊಮ್ಮಗನ ಮೊದಲ ಸಿನಿಮಾ ‘ಮಿಂಚುಹುಳು’ ಅ.4ಕ್ಕೆ ರಿಲೀಸ್
‘ಮಿಂಚುಹುಳು’ ಸಿನಿಮಾ ಸ್ಟಿಲ್
Follow us on

ಕನ್ನಡ ಚಿತ್ರರಂಗಕ್ಕೆ ಡಾ. ರಾಜ್​ಕುಮಾರ್​ ಅವರ ಕುಟುಂಬ ಸಾಕಷ್ಟು ಕೊಡುಗೆ ನೀಡಿದೆ. ಅವರ ಫ್ಯಾಮಿಲಿಯ ಹಲವರು ಸ್ಯಾಂಡಲ್​ವುಡ್​ನಲ್ಲಿ ಸಕ್ರಿಯರಾಗಿದ್ದಾರೆ. ಅದೇ ಕುಟುಂಬದ ಹೊಸ ತಲೆಮಾರಿನ ಪ್ರತಿಭೆಗಳು ಕೂಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಡಾ. ರಾಜ್​ಕುಮಾರ್ ಅವರ ಹಿಂದೆ ಶಕ್ತಿಯಾಗಿ ನಿಂತಿದ್ದವರು ಸಹೋದರ ವರದಪ್ಪ. ಈಗ ವರದಪ್ಪ ಅವರ ಮೊಮ್ಮಗ ಪೃಥ್ವಿರಾಜ್‌ ಕೂಡ ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅವರು ನಟಿಸಿದ ಮೊದಲ ಸಿನಿಮಾ ‘ಮಿಂಚುಹುಳು’ ಅ.4ರಂದು ಬಿಡುಗಡೆ ಆಗಲಿದೆ.

‘ಮಿಂಚುಹುಳು’ ಸಿನಿಮಾಗೆ ಮಹೇಶ್ ಕುಮಾರ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ರಾಜಗೋಪಾಲ್ ದೊಡ್ಡಹುಲ್ಲೂರು ಅವರು ನಿರ್ಮಾಣ ಮಾಡಿದ್ದಾರೆ. ಅವರಿಗೆ ವಿಜಯ್ ಕುಮಾರ್, ಅಬ್ದುಲ್ ರಫೀಕ್ ಉಲ್ಲಾ ಕೂಡ ಸಾಥ್ ನೀಡಿದ್ದಾರೆ. ಅಣ್ಣಾವ್ರ ಆತ್ಮೀಯರಾದ ದೊಡ್ಡಹುಲ್ಲೂರು ರುಕ್ಕೋಜಿ ರಾವ್ ಅವರು ತಮ್ಮೂರಿನ ನಿರ್ಮಾಪಕರಿಗೆ ಬೆಂಬಲವಾಗಿ ನಿಂತಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ವಿಶೇಷ ಪ್ರದರ್ಶನ ಆಯಿತು. ಅದರಲ್ಲಿ ಹಂಸಲೇಖ, ಪಿ. ಶೇಷಾದ್ರಿ, ಜಯಮಾಲಾ, ಲಹರಿ ವೇಲು, ಪ್ರೊ. ರಾಜಪ್ಪ ದಳವಾಯಿ, ಶಾಸಕ ಶರತ್ ಬಚ್ಚೇಗೌಡ ಮುಂತಾದ ಗಣ್ಯರು ಭಾಗಿ ಆಗಿದ್ದರು.

‘ಮಿಂಚುಹುಳು’ ಸಿನಿಮಾ ತಂಡ

ಹಿರಿಯ ನಿರ್ಮಾಪಕ ಎಸ್.ಎ. ಚಿನ್ನೇಗೌಡ, ಲಕ್ಷ್ಮಿ, ಪೂರ್ಣಿಮಾ ರಾಮ್ ಕುಮಾರ್, ದೊಡ್ಡಹುಲ್ಲೂರು ರುಕ್ಕೋಜಿರಾವ್ ಕೂಡ ಎಲ್ಲರ ಜತೆ ಸೇರಿ ಸಿನಿಮಾ ವೀಕ್ಷಿಸಿದರು. ಅಪ್ಪ-ಮಗನ ಕಥೆ ಈ ಸಿನಿಮಾದಲ್ಲಿ ಇದೆ. ಮನೆಗೆ ವಿದ್ಯುತ್ ಹಾಕಿಸಲು ಬಾಲಕ ಕೂಡಿಟ್ಟ ಹಣವನ್ನು ಇಲಿ ಕಚ್ಚಿ ಹಾಕುತ್ತದೆ. ಮಿಂಚು ಹುಳುವೊಂದನ್ನು ನೋಡಿದ ಬಳಿಕ ಆ ಹುಡುಗನಿಗೆ ಹೊಸ ಆಲೋಚನೆ ಬರುತ್ತದೆ. ಅದರಿಂದ ಆತನ ಜೀವನದಲ್ಲಿ ಹೊಸ ದಾರಿ ಕಾಣುತ್ತದೆ. ಈ ಕಥಾಹಂದರಕ್ಕೆ ಗಣ್ಯರು ಮೆಚ್ಚುಗೆ ಸೂಚಿಸಿದ್ದಾರೆ.

‘ಈ ಸಿನಿಮಾ ಆಗಲು ಪುನೀತ್ ರಾಜ್​ಕುಮಾರ್ ಅವರೇ ಕಾರಣ. ಕನ್ನಡಕ್ಕೆ ಉತ್ತಮ ಕಥಾವಸ್ತು ಇರುವ ಸಿನಿಮಾಗಳ ಅಗತ್ಯವಿದೆ’ ಎಂದು ನಿರ್ದೇಶಕ ಮಹೇಶ್ ಕುಮಾರ್ ಹೇಳಿದ್ದಾರೆ. ನಟ ಪೃಥ್ವಿರಾಜ್‌ ಮಾತನಾಡಿ, ‘ಈ ಸಿನಿಮಾದಲ್ಲಿ ಮುಖ್ಯ ಪಾತ್ರಕ್ಕೆ ಪೂರಕವಾಗಿ‌ ನಿಲ್ಲುವ ಪಾತ್ರ ನನಗೆ ಸಿಕ್ಕಿದೆ’ ಎಂದರು. ನಿರ್ಮಾಪಕ ರಾಜ್ ಗೋಪಾಲ್ ಮಾತನಾಡಿ, ‘ನಾನು ಸಿನಿಮಾ ಮಾಡಬೇಕೆಂದು ಎಂದುಕೊಂಡಿರಲಿಲ್ಲ. ಬಾಲ್ಯದ ಗೆಳೆಯ ರುಕ್ಕೋಜಿ ಅವರು ಈ ರೀತಿಯ ಕಥೆ ಇದೆ ಅಂತ ಹೇಳಿದ್ದಕ್ಕೆ ಎಲ್ಲರೂ ಸೇರಿ ಈ ಸಿನಿಮಾವನ್ನು ಮಾಡಿದ್ದೇವೆ‌’ ಎಂದರು.

ಇದನ್ನೂ ಓದಿ: ರಾಜ್​ಕುಮಾರ್ ಸಿನಿಮಾ ಸಹಿಹಾಕಿದ ಬಳಿಕ ಬದಲಾಯ್ತು ಸುಧೀರ್ ಬದುಕು

ಜಯಮಾಲಾ, ಹಂಸಲೇಖ ಅವರು ಸಿನಿಮಾದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದರು. ‘ವರದಪ್ಪ ಒಂದು ಭಾಷಣ ಮಾಡಿದ್ದು ನಾನು ಎಂದಿಗೂ ನೋಡಿಲ್ಲ. ಹಿಂದೆಯೇ ನಿಂತುಕೊಂಡು ನೋಡಿಕೊಳ್ಳುತ್ತಿದ್ದರು. ಅವರನ್ನು ಭೂಮಿತೂಕದ ವ್ಯಕ್ತಿ ಅಂತ ರಾಜಣ್ಣ ಕರೆಯುತ್ತಿದ್ದರು. ಈಗ ಅವರ ಮೊಮ್ಮಗ ಬೇರಿನೆಡೆಗೆ ಹೊರಟಿದ್ದಾನೆ’ ಎಂದರು ಹಂಸಲೇಖ. ‘ಈ ಸಿನಿಮಾವನ್ನು ಮಕ್ಕಳು ಮಾತ್ರವಲ್ಲದೇ ದೊಡ್ಡವರು ಕೂಡ ನೋಡಬೇಕು’ ಎಂದು ಪಿ. ಶೇಷಾದ್ರಿ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.