ಮೋಹನ್​ ಜೊತೆ ‘ಜುನೇಜ’ ಹೆಸರು ಸೇರಿಕೊಂಡಿದ್ದು ಹೇಗೆ? ಹಾಸ್ಯನಟನ ಬದುಕಿನ ಇಂಟರೆಸ್ಟಿಂಗ್​ ವಿಷಯ ಇಲ್ಲಿದೆ..

| Updated By: ಮದನ್​ ಕುಮಾರ್​

Updated on: May 07, 2022 | 1:36 PM

Mohan Juneja Death: ಚಿತ್ರರಂಗಕ್ಕೆ ಬರುವುದಕ್ಕೂ ಮುನ್ನ ಮೋಹನ್​ ಜುನೇಜ ಅವರು ರಂಗಭೂಮಿಯಲ್ಲಿ ತೊಡಗಿಕೊಂಡಿದ್ದರು. ಬಳಿಕ ಅನೇಕ ಸೀರಿಯಲ್​ಗಳಲ್ಲಿ ನಟಿಸಿದರು.

ಮೋಹನ್​ ಜೊತೆ ‘ಜುನೇಜ’ ಹೆಸರು ಸೇರಿಕೊಂಡಿದ್ದು ಹೇಗೆ? ಹಾಸ್ಯನಟನ ಬದುಕಿನ ಇಂಟರೆಸ್ಟಿಂಗ್​ ವಿಷಯ ಇಲ್ಲಿದೆ..
ಮೋಹನ್ ಜುನೇಜ
Follow us on

ಕನ್ನಡದ ಸಿನಿಪ್ರಿಯರಿಗೆ ಮೋಹನ್​ ಜುನೇಜ (Mohan Juneja) ಚಿರ ಪರಿಚಿತರು. ಪೋಷಕ ನಟನಾದ ಕಾರಣ ಎಷ್ಟೋ ಜನರಿಗೆ ಅವರ ಹೆಸರು ತಿಳಿದಿಲ್ಲದೇ ಇರಬಹುದು. ಆದರೆ ಈ ಪ್ರತಿಭಾವಂತ ಕಲಾವಿದನ ನಟನೆ ನೋಡಿ ಎಂಜಾಯ್​ ಮಾಡದವರಿಲ್ಲ. ‘ಕೆಜಿಎಫ್​ 2’ (KGF 2) ಸೇರಿದಂತೆ ನೂರಾರು ಸಿನಿಮಾಗಳಲ್ಲಿ ನಟಿಸಿದ ಅವರು ಕನ್ನಡ ಚಿತ್ರರಂಗದ ಅನೇಕ ಹೀರೋಗಳ ಜೊತೆ ಕೆಲಸ ಮಾಡಿದ್ದಾರೆ. ಬಹುಬೇಡಿಕೆಯ ನಟನಾಗಿಯೂ ಅವರು ಬ್ಯುಸಿ ಆಗಿದ್ದರು. ಈಗ ಅವರು ಅನಾರೋಗ್ಯದಿಂದ ಮೃತಪಟ್ಟಿರುವುದು (Mohan Juneja Death) ನೋವಿನ ಸಂಗತಿ. ಚಿಕಿತ್ಸೆ ಫಲಕಾರಿ ಆಗದೇ ಅವರು ಮೇ 6ರ ಶುಕ್ರವಾರ ರಾತ್ರಿ ನಿಧನರಾದರು. ಇಂದು (ಮೇ 7) ಮಧ್ಯಾಹ್ನ ತಮ್ಮೇನಹಳ್ಳಿ ಗ್ರಾಮದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಈಗಾಗಲೇ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಡಿಂಗ್ರಿ ನಾಗರಾಜ್​, ಹೊನ್ನವಳಿ ಕೃಷ್ಣ ಸೇರಿದಂತೆ ಅನೇಕರು ಬಂದು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಎಷ್ಟೋ ಸಿನಿಮಾಗಳಲ್ಲಿ ಮೋಹನ್​ ಜುನೇಜ ಅವರು ಮಾಡಿದ್ದು ಸಣ್ಣ-ಪುಟ್ಟ ಪಾತ್ರಗಳು ಮಾತ್ರ. ಆದರೆ ಅವುಗಳಿಗೆ ಸಂಪೂರ್ಣವಾಗಿ ನ್ಯಾಯ ಒದಗಿಸುವ ಮೂಲಕ ಅವರು ಜನಮನ ಗೆದ್ದಿದ್ದರು. ಅವರ ಹೆಸರಿನ ಬಗ್ಗೆ ಇಲ್ಲಿದೆ ಇಂಟರೆಸ್ಟಿಂಗ್​ ವಿವರ..

ಚಿತ್ರರಂಗಕ್ಕೆ ಬರುವುದಕ್ಕೂ ಮುನ್ನ ಮೋಹನ್​ ಜುನೇಜ ಅವರು ರಂಗಭೂಮಿಯಲ್ಲಿ ತೊಡಗಿಕೊಂಡಿದ್ದರು. ಬಳಿಕ ಅನೇಕ ಸೀರಿಯಲ್​ಗಳಲ್ಲಿ ನಟಿಸಿದರು. ಸಿನಿಮಾ, ಕಿರುತೆರೆ ಮತ್ತು ರಂಗಭೂಮಿಯಲ್ಲಿ ಹಲವು ಹೆಸರಾಂತ ಕಲಾವಿದರು, ಬರಹಗಾರರು ಮತ್ತು ತಂತ್ರಜ್ಞರ ಜೊತೆ ಕೆಲಸ ಮಾಡುವ ಮೂಲಕ ಅನೇಕ ವಿಚಾರಗಳನ್ನು ಕಲಿತುಕೊಂಡರು. ಜಿವಿ ಅಯ್ಯರ್​ ಮತ್ತು ಕೆಎಸ್​ಎಲ್​ ಸ್ವಾಮಿ ಅವರ ಮಾರ್ಗದರ್ಶನ ಕೂಡ ಮೋಹನ್​ ಜುನೇಜ ಅವರಿಗೆ ಸಿಕ್ಕಿತ್ತು.

‘ಕೆಎಸ್​ಎಲ್​ ಸ್ವಾಮಿ ಅವರ ಸಹಕಾರವನ್ನು ನಾನು ಮರೆಯಲು ಸಾಧ್ಯವಿಲ್ಲ. ಯಾಕೆಂದರೆ, ಈ ಮಟ್ಟಕ್ಕೆ ಬರಲು ಅವರೇ ಕಾರಣ. ನನಗೆ ಮೋಹನ್​ ಜುನೇಜ ಎಂಬ ಹೆಸರು ಕೊಟ್ಟಿದ್ದೇ ಅವರು. ಮೋಹನ್​ ಅಂತ ಲಕ್ಷ ಜನರು ಇರುತ್ತಾರೆ. ಹಾಗಾಗಿ ನಿನ್ನನ್ನು ಜನರು ಗುರುತು ಹಿಡಿಯುವುದಿಲ್ಲ. ಮೋಹನ್​ ಎಂಬ ಹೆಸರಿನ ಜೊತೆ ಬೇರೆ ಏನಾದರೂ ಬೇಕು ಅಂದರು. ಆಗ ನಾನು ನಾಟಕದಲ್ಲಿ ವಿದೇಶಿ ವ್ಯಕ್ತಿಯ ಪಾತ್ರ ಮಾಡಿದ್ದೆ. ಆ ಪಾತ್ರದ ಹೆಸರು ಜನೇನ. ಅದೇ ಹೆಸರು ಜುನೇಜ ಎಂದಾಯಿತು. ‘ಜಂಬೂ ಸವಾರಿ’ ಸಿನಿಮಾದಿಂದ ನನ್ನ ಹೆಸರು ಮೋಹನ್​ ಜುನೇಜ ಅಂತ ಆಯಿತು’ ಎಂದು ಈ ಹಿಂದೆ ನಟಿ ರೇಖಾ ದಾಸ್​ ಅವರ ಯೂಟ್ಯೂಬ್​ ಚಾನಲ್​ಗೆ ನೀಡಿದ ಸಂದರ್ಶನದಲ್ಲಿ ಮೋಹನ್​ ಜುನೇಜ ಅವರು ಹೇಳಿಕೊಂಡಿದ್ದರು.

ಇದನ್ನೂ ಓದಿ
Mohan Juneja Death: ನೇತ್ರದಾನದಿಂದ ಮಾದರಿಯಾದ ಮೋಹನ್​ ಜುನೇಜ; ‘ಕೆಜಿಎಫ್​’ ನಟನಿಗೆ ‘ಹೊಂಬಾಳೆ ಫಿಲ್ಮ್ಸ್​’ ಶ್ರದ್ಧಾಂಜಲಿ
Mohan Juneja: ಖ್ಯಾತ ನಟ ಮೋಹನ್​ ಜುನೇಜ ನಿಧನ; ‘ಕೆಜಿಎಫ್​’ ಚಿತ್ರದಲ್ಲಿ ಅಭಿನಯಿಸಿದ್ದ ಜನಪ್ರಿಯ ಕಲಾವಿದ ಇನ್ನಿಲ್ಲ
ಹಿರಿಯ ನಟಿ ತಾರಾಗೆ ಮಾತೃ ವಿಯೋಗ; ತಾಯಿ ಪುಷ್ಪಾ ನಿಧನ
‘2 ಸ್ಟೇಟ್ಸ್​’ ನಟ ಶಿವಕುಮಾರ್​ ಸುಬ್ರಮಣಿಯಂ ಇನ್ನಿಲ್ಲ; ಮಗ ಸತ್ತು 2 ತಿಂಗಳು ಕಳೆಯೋದರಲ್ಲಿ ತಂದೆ ನಿಧನ

ಮೋಹನ್​ ಜುನೇಜ ನಿಧನಕ್ಕೆ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ‘ಕೆಜಿಎಫ್​’ ಸಿನಿಮಾದಲ್ಲಿ ಅವರು ನಟಿಸಿದ ಪಾತ್ರ ಫೇಮಸ್​ ಆಗಿತ್ತು. ‘ಕೆಜಿಎಫ್​ 1’ ಮತ್ತು ‘ಕೆಜಿಎಫ್​ 2’ ಸಿನಿಮಾದ ನಿರ್ಮಾಣ ಸಂಸ್ಥೆಯಾದ ‘ಹೊಂಬಾಳೆ ಫಿಲ್ಮ್ಸ್​’ ಕೂಡ ಮೋಹನ್​ ಜುನೇಜ ಆತ್ಮಕ್ಕೆ ಶಾಂತಿ ಕೋರಿದೆ. ‘ಕನ್ನಡದ ಖ್ಯಾತ ಹಾಸ್ಯ ನಟರಾದ ಮೋಹನ್ ಜುನೇಜ ಅವರ ಆತ್ಮಕ್ಕೆ ಶಾಂತಿ ಸಿಗಲಿ. ನಮ್ಮ ಕೆಜಿಎಫ್ ಚಿತ್ರತಂಡದ ಜತೆಗಿನ ಅವರ ಅವಿನಾಭಾವ ಸಂಬಂಧ ಮರೆಯಲಾರೆವು. ಕನ್ನಡ ಚಿತ್ರರಂಗದಲ್ಲಿ ಅವರು ಜನಪ್ರಿಯರಾಗಿದ್ದರು. ಅವರ ಕುಟುಂಬದವರಿಗೆ, ಸ್ನೇಹಿತರಿಗೆ ಮತ್ತು ಹಿತೈಷಿಗಳಿಗೆ ನಮ್ಮ ಸಾಂತ್ವನಗಳು’ ಎಂದು ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆ ಟ್ವೀಟ್​ ಮಾಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.