ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಬಿಡುಗಡೆ ಮಾಡಿದ ‘ಮೃತ್ಯುದೇವತೆ’ ಸಿನಿಮಾ ಹಾಡು

ಶೀರ್ಷಿಕೆ ಮೂಲಕ ‘ಮೃತ್ಯದೇವತೆ’ ಸಿನಿಮಾ ಗಮನ ಸೆಳೆಯುತ್ತಿದೆ. ಈ ಸಿನಿಮಾಗೆ ನವೀನ್ ಮಹದೇವ್ ಅವರು ನಿರ್ದೇಶನ ಮಾಡಿದ್ದು, ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರು ಹೊಸ ಹಾಡು ಬಿಡುಗಡೆ ಮಾಡಿದ್ದಾರೆ. ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಈ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು.

ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಬಿಡುಗಡೆ ಮಾಡಿದ ‘ಮೃತ್ಯುದೇವತೆ’ ಸಿನಿಮಾ ಹಾಡು
Mruthyu Devathe Song Release Event

Updated on: May 05, 2026 | 8:55 PM

ವಿನಯಾ ಪ್ರಸಾದ್, ಸಾರಿಕಾ ರಾವ್, ಡಯಾನಾ, ಹಿಮಶ್ರೀ, ಮಾಹೀನ್, ನವೀನ್ ಮಹದೇವ್, ಸೂರ್ಯ, ಪವನ್ ಶೆಟ್ಟಿ, ವರ್ಷಿತಾ ಮುಂತಾದವರು ‘ಮೃತ್ಯುದೇವತೆ’ ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಹಾಡನ್ನು ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ (Om Sai Prakash) ಅವರಿಂದ ಬಿಡುಗಡೆ ಮಾಡಿಸಲಾಯಿತು. ಸಮಾಜದಲ್ಲಿ ಪ್ರತಿದಿನ ಹೆಣ್ಣು ಮಕ್ಕಳ ಮೇಲೆ ಅನ್ಯಾಯ, ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಟ್ರ್ಯಾಪ್​ಗೆ ಒಳಗಾದ 3 ಹೆಣ್ಣು ಮಕ್ಕಳು ಹೇಗೆ ಅದರಿಂದ ಹೊರಗೆ ಬರುತ್ತಾರೆ ಎಂಬ ಮಹಿಳಾಪ್ರಧಾನ ಕಥಾಹಂದರ ಇಟ್ಟುಕೊಂಡು ನವೀನ್ ಮಹದೇವ್ ಅವರು ‘ಮೃತ್ಯದೇವತೆ’ (Mruthyu Devathe) ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ಹಾಡು ಬಿಡುಗಡೆ ಮಾಡಿದ ಬಳಿಕ ಓಂ ಸಾಯಿ ಪ್ರಕಾಶ್ ಅವರು ಮಾತನಾಡಿದರು. ‘ಈ ಸಿನಿಮಾದ ಶೀರ್ಷಿಕೆ ಕೇಳಿದ ಕೂಡಲೇ ಮಹಿಳಾ ಪ್ರಧಾನ ಕಥೆ ಎನಿಸುತ್ತೆ. ಒಂದು ರಿವೆಂಜ್ ಕಾಣುತ್ತೆ. ಸಾಂಗ್, ಕೊರಿಯೋಗ್ರಫಿ ಚೆನ್ನಾಗಿದೆ. ನಾಗದೇವತೆ, ಗ್ರಾಮದೇವತೆ ಹೀಗೆ ಹಲವಾರು ಅಮ್ಮನ ಭಕ್ತಿಪ್ರಧಾನ ಚಿತ್ರಗಳನ್ನು ಮಾಡಿದ್ದೇನೆ. ಸಿನಿಮಾ ನೋಡಿದ ತಕ್ಷಣ ಇದು ಸಾಯಿ ಪ್ರಕಾಶ್ ಚಿತ್ರ ಎಂದು ಗುರುತಿಸುತ್ತಿದ್ದರು. ದೇವಿ ಗೆಟಪ್​ನಲ್ಲಿ ನಾಯಕಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಒಳ್ಳೆಯದಾಗಲಿ’ ಎಂದು ಓಂ ಸಾಯಿ ಪ್ರಕಾಶ್ ಅವರು ಶುಭ ಕೋರಿದರು.

ನವೀನ್ ಮಹದೇವ್ ಅವರು ಈ ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ನಟನೆ ಕೂಡ ಮಾಡಿದ್ದಾರೆ. ‘ಇದೊಂದು ಮಹಿಳಾ ಪ್ರಧಾನ ಕಥಾಹಂದರ ಇರುವ ಸಿನಿಮಾ. ಹೆಣ್ಣುಮಕ್ಕಳು ಎಷ್ಟೇ ಬುದ್ಧಿವಂತೆ ಆಗಿದ್ದರೂ ದುರುಳರು ಅವರನ್ನು ಹೇಗೆಲ್ಲಾ ಟ್ರ್ಯಾಪ್ ಮಾಡುತ್ತಾರೆ? ಹೆಣ್ಣಿನ ಸಹನೆಯ ಕಟ್ಟಿ ಒಡೆದಾಗ ಏನಾಗುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಿದ್ದೇವೆ. ಸ್ವಲ್ಪ ಹಾರರ್ ಕೂಡ ಇದೆ’ ಎಂದು ಅವರು ಹೇಳಿದ್ದಾರೆ.

‘ಮೃತ್ಯದೇವತೆ’ ಸಿನಿಮಾ ಈಗ ಸೆನ್ಸಾರ್ ಹಂತದಲ್ಲಿದೆ. ಮೇ ತಿಂಗಳ 22ರಂದು ರಿಲೀಸ್ ಮಾಡಬೇಕು ಎಂಬ ಗುರಿ ಇಟ್ಟುಕೊಂಡು ಚಿತ್ರತಂಡ ಕಾರ್ಯನಿರತವಾಗಿದೆ. ನವೀನ್‍ ಮಹದೇವ್‍ ಅವರ ಪತ್ನಿ ಸರಸ್ವತಿ ಅವರು ‘ವರ್ಷಿತಾ ಪ್ರೊಡಕ್ಷನ್ಸ್’ ಮೂಲಕ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಅನಿರುದ್ಧ್ ಅವರ ಛಾಯಾಗ್ರಹಣ, ಶಿವಪ್ರಸಾದ್ ಅವರ ಸಂಗೀತ ನಿರ್ದೇಶನ ಈ ಸಿನಿಮಾಗಿದೆ.

ಇದನ್ನೂ ಓದಿ: ‘ಕೆರೆಬೇಟೆ’ ಬಳಿಕ ‘ಕಾಮನ್ ಮ್ಯಾನ್’: ಓಂ ಸಾಯಿ ಪ್ರಕಾಶ್ ಜೊತೆ ಗೌರಿ ಶಂಕರ್ ಸಿನಿಮಾ

ರಘು ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಅಲ್ಟಿಮೇಟ್‍ ಶಿವು ಮತ್ತು ಚಿಟ್ಟ ಜಾಧವ್‍ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಮಂಜು ವಿಕ್ರಂ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಗಣೇಶ್ ಅವರು ಕಲಾ ನಿರ್ದೇಶನ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ನಟಿ ಹಿಮಶ್ರೀ ಮಾತನಾಡಿ, ‘ನನ್ನದು ಹಳ್ಳಿ ಹುಡುಗಿಯ ಪಾತ್ರ. ಆ ಪಾತ್ರಕ್ಕೆ ಒಂದು ಶಕ್ತಿ ಬಂದು ಸೇರಿದಾಗ ಹೋರಾಟ ಆಗುತ್ತದೆ’ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us