‘ಟೆಡ್ಡಿ ಬೇರ್’ ಚಿತ್ರತಂಡಕ್ಕೆ ಸಿಕ್ತು ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಹಾರೈಕೆ
‘ಟೆಡ್ಡಿ ಬೇರ್’ ಸಿನಿಮಾಗೆ ಲೋಕೇಶ್ ಬಿ. ಅವರು ನಿರ್ದೇಶನ ಮಾಡಿದ್ದಾರೆ. ನಾಯಕ ನಟ ಭಾರ್ಗವ್ ಅವರಿಗೆ ಇದು ಮೊದಲ ಸಿನಿಮಾ. ಶೈಲಜಾ ಸಿಂಹ ಮತ್ತು ದೀನಾ ಪೂಜಾರಿ ಅವರು ಈ ಸಿನಿಮಾದಲ್ಲಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಟ್ರೇಲರ್ ಬಿಡುಗಡೆ ಮಾಡಲಾಯಿತು. ಈ ಚಿತ್ರಕ್ಕೆ ಪ್ರೀಕ್ವೆಲ್ ಮತ್ತು ಸೀಕ್ವೆಲ್ ಕೂಡ ಬರಲಿದೆ ಎಂದು ಚಿತ್ರತಂಡದವರು ಹೇಳಿದ್ದಾರೆ.
ಕನ್ನಡದ ‘ಟೆಡ್ಡಿ ಬೇರ್’ (Teddy Bear) ಸಿನಿಮಾದ ಟ್ರೇಲರ್ ರಿಲೀಸ್ ಮಾಡಲಾಗಿದೆ. ಶೀಘ್ರದಲ್ಲೇ ಈ ಸಿನಿಮಾ ಬಿಡುಗಡೆ ಆಗಲಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇರುವ ಕಲಾವಿದರ ಸಂಘದ ಕಟ್ಟಡದಲ್ಲಿ ಟ್ರೇಲರ್ ಬಿಡುಗಡೆ ಮಾಡಲಾಗಿದ್ದು, ಈ ಕಾರ್ಯಕ್ರಮಕ್ಕೆ ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ (OM Sai Prakash) ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ‘ಆದ್ಯಲಕ್ಷೀ ಪ್ರೊಡಕ್ಷನ್’ ಮೂಲಕ ಜ್ಯೋತಿ ತಾರಕೇಶ್, ನವೀನ್ ಮತ್ತು ಭರತ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ತೆಲುಗಿನ ಪುರಿ ಜಗನ್ನಾಥ್ ಬಳಿ ಸಹಾಯಕರಾಗಿ ಕೆಲಸ ಮಾಡಿ ಅನುಭವ ಪಡೆದ ಲೋಕೇಶ್ ಬಿ. ಅವರು ‘ಟೆಡ್ಡಿ ಬೇರ್’ ಸಿನಿಮಾಗೆ (Teddy Bear Kannada Movie) ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ.
ಸಿನಿಮಾ ಬಗ್ಗೆ ನಿರ್ದೇಶಕ ಲೋಕೇಶ್ ಅವರು ಮಾಹಿತಿ ಹಂಚಿಕೊಂಡರು. ಇದು ಅವರ ಮೊದಲ ಸಿನಿಮಾ. ಇದರ ಬಿಡುಗಡೆಗೂ ಮುನ್ನವೇ ಅವರು ಇನ್ನೂ ಕೆಲವು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದು, ಅವುಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ವಿಶೇಷ ಏನೆಂದರೆ, ಇಡೀ ಕಥೆಯ ಮಧ್ಯದ ಭಾಗವನ್ನು ‘ಟೆಡ್ಡಿ ಬೇರ್’ ಸಿನಿಮಾದಲ್ಲಿ ತೋರಿಸಲಾಗುವುದು. ನಂತರದಲ್ಲಿ ಪ್ರೀಕ್ವೆಲ್ ಮತ್ತು ಸೀಕ್ವಲ್ ಬರಲಿದೆ.
‘ಸಂಶೋಧನೆ ಮಾಡಿ ಈ ಸಿನಿಮಾದ ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ. ಶೀರ್ಷಿಕೆ ಹೇಗೆ ಬಂತು? ಗೊಂಬೆಯ ಒಳಗೆ ಯಾವ ರೀತಿಯಲ್ಲಿ ಆತ್ಮ ಸೇರಿಕೊಳ್ಳುತ್ತದೆ ಎಂಬಿತ್ಯಾದಿ ಕೌತುಕ ಅಂಶಗಳನ್ನು ತಿಳಿಯಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಬೇಕು’ ಎಂದು ನಿರ್ದೇಶಕರು ಹೇಳಿದ್ದಾರೆ. ಬೆಂಗಳೂರು, ಮಂಗಳೂರು ಮುಂತಾದ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ‘ಕಾಲ ಭೈರವೇಶ್ವರ’ ಸ್ವಾಮಿಯ ಕುರಿತು ಒಂದು ಹಾಡು ಇರಲಿದೆ ಎಂದು ಕೂಡ ಚಿತ್ರತಂಡದವರು ಹೇಳಿದ್ದಾರೆ.
ನಾಯಕ ನಟ ಭಾರ್ಗವ್ ಅವರಿಗೆ ‘ಟೆಡ್ಡಿ ಬೇರ್’ಮೊದಲ ಸಿನಿಮಾ. ಈ ಸಿನಿಮಾ ಒಪ್ಪಿಕೊಂಡ ನಂತರ ಅವರಿಗೆ ಏಳು ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ‘ಈ ಸಿನಿಮಾದಲ್ಲಿ ನಾನು ಸೈಕೊಲಾಜಿಕಲ್ ಕೌನ್ಸಲರ್ ಪಾತ್ರ ಮಾಡಿದ್ದೇನೆ. ಮುಂದಿನ ತಿಂಗಳು ಸಿನಿಮಾ ಬಿಡುಗಡೆ ಆಗಲಿದೆ’ ಎಂದು ಅವರು ಹೇಳಿದ್ದಾರೆ. ಶೈಲಜಾ ಸಿಂಹ, ದೀನಾ ಪೂಜಾರಿ ಅವರು ಈ ಸಿನಿಮಾದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಸ್ವರ್ಶ ರೇಖಾ, ಕಿಟ್ಟಿ ತಾಳಿಕೋಟೆ, ದಿಶಾ ಪೂವಯ್ಯ, ಮುತ್ತು, ಬೇಬಿ ಅಕ್ಷರಾ, ಅರವಿಂದ್ ಮುಂತಾದವರು ಈ ಚಿತ್ರದ ಪಾತ್ರವರ್ಗದಲ್ಲಿದ್ದಾರೆ.
ಇದನ್ನೂ ಓದಿ: ಫ್ಯಾಮಿಲಿ ಪ್ರೇಕ್ಷಕರಿಗಾಗಿ ಕುಟುಂಬದವರೆಲ್ಲ ಸೇರಿ ಮಾಡಿದ ಸಿನಿಮಾ ‘ಜನಕ’; ಏನಿದರ ಕಥೆ?
ವಿವೇಕ್ ಜಂಗ್ಲಿ ಅವರು ಸಂಗೀತ ನೀಡಿದ್ದಾರೆ. ದೀಪು ಹಾಗೂ ಬೆನಕರಾಜ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಸಂತೋಷ್ ಅವರ ಸಂಕಲನ ಈ ಸಿನಿಮಾಗಿದೆ. ಸ್ಟಂಟ್ ಶಿವ, ಗಣೇಶ್ ಮತ್ತು ಚನ್ನಕೃಷ್ಣ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರು ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ‘ಇಂದು ಈ ಕಾರ್ಯಕ್ರಮಕ್ಕೆ ಆಡಿಟೋರಿಯಂ ಹೌಸ್‌ಫುಲ್ ಆಗಿದೆ. ಇದನ್ನು ಕಂಡಾಗ ಚಿತ್ರತಂಡದವರು ಎಷ್ಟು ಪ್ರೀತಿ ಗಳಿಸಿದ್ದಾರೆ ಎಂಬುದು ತಿಳಿಯುತ್ತದೆ’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.