ಮುಖ್ಯಮಂತ್ರಿ ಚಂದ್ರು ಅವರು ಕಾಲೇಜ್ನಲ್ಲಿ ಕ್ಲರ್ಕ್ ಆಗಿ ಕೆಲಸಕ್ಕೆ ಸೇರಿದವರು. ಆ ಬಳಿಕ ಅವರ ಆಸಕ್ತಿ ನಟನೆಯತ್ತ ಮೂಡಿತು. ಎಲ್ಲರ ಬೆಂಬಲದಿಂದ ಅವರು ಚಿತ್ರರಂಗದಲ್ಲಿ ಮುಂದುವರಿದರು. ಅವರು ಮಾಡಿದ ‘ಮುಖ್ಯಮಂತ್ರಿ’ ನಾಟಕದಿಂದ ಮುಖ್ಯಮಂತ್ರಿ ಚಂದ್ರು ಎಂದೇ ಫೇಮಸ್ ಆದರು. ಈಗ ಅವರು ಕಿರುತೆರೆಯಲ್ಲಿ ತೊಡಗಿಕೊಂಡಿದ್ದಾರೆ. ‘ಸೀತಾ ರಾಮ’ ಧಾರಾವಾಹಿಯಲ್ಲಿ ಅವರು ನಟಿಸುತ್ತಿದ್ದಾರೆ. ಮುಖ್ಯಮಂತ್ರಿ ಚಂದ್ರು ಅವರು ‘ಕಲಾಮಾಧ್ಯಮ’ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರವಿಚಂದ್ರನ್ ತಂದೆಯ ಬಗ್ಗೆಯೂ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.
ರವಿಚಂದ್ರನ್ ತಂದೆಯ ಹೆಸರು ಎನ್. ವೀರಸ್ವಾಮಿ. ಅವರು ಖ್ಯಾತ ನಿರ್ಮಾಪಕರು, ನಿರ್ದೇಶಕರು ಕೂಡ ಹೌದು. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. 1983ರಲ್ಲಿ ಅವರು ‘ಚಕ್ರವ್ಯೂಹ’ ಸಿನಿಮಾ ನಿರ್ಮಾಣ ಮಾಡಿದ್ದರು. ಈ ಚಿತ್ರದಲ್ಲಿ ಅಂಬರೀಷ್, ಮುಖ್ಯಮಂತ್ರಿ ಚಂದ್ರು ಮೊದಲಾದವರು ನಟಿಸಿದ್ದರು. ಈ ಸಿನಿಮಾ ಹಿಟ್ ಆದ ಬಳಿಕ ವೀರಸ್ವಾಮಿ ಅವರು ಮುಖ್ಯಮಂತ್ರಿ ಚಂದ್ರುಗೆ ದೊಡ್ಡ ಗಿಫ್ಟ್ ಕೊಟ್ಟಿದ್ದರು.
‘ಚಕ್ರವ್ಯೂಹ ಚಿತ್ರದಲ್ಲಿ ಅಂಬರೀಷ್, ಅಂಬಿಕಾ, ತೂಗುದೀಪ ಶ್ರೀನಿವಾಸ್ ಎಲ್ಲಾ ನಟಿಸುತ್ತಿದ್ದರು. ವೀರಸ್ವಾಮಿ ಮುಖ್ಯ ನಿರ್ಮಾಪಕರು, ರವಿಚಂದ್ರನ್ ಸಹ ನಿರ್ಮಾಪಕರು. ಸಿನಿಮಾ ಗೆದ್ದ ಖುಷಿಯಲ್ಲಿ ದೊಡ್ಡ ಪಾರ್ಟಿ ಇಡಲಾಗಿತ್ತು. ನಾನು ಪತ್ನಿ ಜೊತೆಗೆ ಪಾರ್ಟಿಗೆ ಹೋದೆ. ನಾನು ಎಲ್ಲಾ ಕಡೆ ಸುತ್ತು ಹಾಕಿ ಬಂದೆ. ವೀರಸ್ವಾಮಿ ನನ್ನನ್ನು ಕರೆದರು. ನಾನು ಹೋದೆ. ಮದ್ಯ ಸೇವನೆ, ಸಿಗರೇಟ್ ಅಲ ಬಿಟ್ಟುಬಿಡು ಎಂದರು. ಹೆಂಡತಿಯನ್ನು ಕರೆದು ತಿದ್ದಿ ಹೇಳುವಂತೆ ಹೇಳಿದರು’ ಎಂದಿದ್ದಾರೆ ಚಂದ್ರು.
ಇದನ್ನೂ ಓದಿ: ‘ನಾನು ಲೀಡರ್ ಆಗೋಕೆ ಲಾಯಕ್ ಇಲ್ಲ’; ನೇರ ಮಾತಲ್ಲಿ ಹೇಳಿದ ರವಿಚಂದ್ರನ್
‘ಮನೆಗೆ ಬರುವಂತೆ ವೀರಸ್ವಾಮಿ ಹೇಳಿದರು. ನಾನು ಪತ್ನಿ ಜೊತೆ ಹೋದೆ. ನಿನ್ನ ಕಾಲ್ಗುಣ ಚೆನ್ನಾಗಿದೆ. ಅವನಿಗೆ ಸಾಕಷ್ಟು ಸಿನಿಮಾ ಬರುತ್ತದೆ ಎಂದು ವೀರಸ್ವಾಮಿ ನನ್ನ ಪತ್ನಿ ಹೇಳಿದರು. ನನಗೆ ಒಂದು ಕೀ ಕೊಟ್ಟರು. ಇದು ನಾನು ಉಪಯೋಗಿಸುತ್ತಿರುವ ಅಂಬಾಸಿಡರ್ ಕಾರಿನ ಕೀ. ನಾನು ಹೊಸ ಕಾರು ತೆಗೆದುಕೊಳ್ಳಬೇಕು ಎಂದುಕೊಂಡಿದ್ದೇನೆ. ಈ ಕಾರು ಯೋಗ್ಯರಿಗೆ ಕೊಡಬೇಕು ಎಂದುಕೊಂಡಿದ್ದೆ. ನೀನು ಸಿಕ್ಕಿದೀಯಾ. ಕಾರಿನಲ್ಲಿ ಓಡಾಬೇಕು ಎಂದರು’ ಎಂಬುದಾಗಿ ಮುಖ್ಯಮಂತ್ರಿ ಚಂದ್ರು ಮಾಹಿತಿ ಹಂಚಿಕೊಂಡಿದ್ದಾರೆ. ಆಗ ಅವರಿಗೆ ಕಾರು ಓಡಿಸೋಕೂ ಬರುತ್ತಿರಲಿಲ್ಲವಂತೆ. ನಂತರ ಕಾರು ಕಲಿತು ಅದನ್ನು ಓಡಿಸೋಕೆ ಕಲಿತರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.