ಸುಮಲತಾ ಮೊಮ್ಮಗನ ನಾಮಕರಣ, ಬರ್ತಾರಾ ನಟ ದರ್ಶನ್?
Sumalatha Ambareesh: ಸುಮಲತಾ ಅಂಬರೀಶ್ ಹಾಗೂ ದರ್ಶನ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದೆ. ಇಂದು ಸುಮಲತಾ ಅವರ ಮೊಮ್ಮಗನ ನಾಮಕರಣ ಸಮಾರಂಭ ಇದೆ. ಇಂದಿನ ಕಾರ್ಯಕ್ರಮಕ್ಕೆ ನಟ ದರ್ಶನ್ ತೂಗುದೀಪ ಬರಲಿದ್ದಾರೆಯೇ ಎಂಬುದು ಕುತೂಹಲ ಕೆರಳಿಸಿದೆ. ಅಭಿಷೇಕ್ ಪುತ್ರನಿಗೆ ‘ಅ‘ ಅಕ್ಷರದಿಂದಲೇ ಹೆಸರು ಇಡಲಾಗುತ್ತದೆಯಂತೆ.

ಮಾಜಿ ಸಂಸದೆ, ನಟಿ ಸುಮಲತಾ ಅಂಬರೀಶ್ ಮನೆಯಲ್ಲಿ ಇಂದು ಹಬ್ಬದ ಸಂಭ್ರಮ. ಅವರ ಮೊಮ್ಮಗನ ನಾಮಕರಣ ಮಹೋತ್ಸವ ಇಂದು (ಮಾರ್ಚ್ 16) ನಡೆಯುತ್ತಿದೆ. ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಶ್ ಮತ್ತು ಸೊಸೆ ಅವಿವಾ ಬಿದಪ್ಪ ಅವರು ಕೆಲ ತಿಂಗಳ ಹಿಂದಷ್ಟೆ ಗಂಡು ಮಗುವಿನ ಪೋಷಕರಾಗಿದ್ದು, ಇಂದು ಈ ಮಗುವಿನ ನಾಮಕರಣ ಮಹೋತ್ಸವ ಇದೆ. ಖಾಸಗಿ ಹೋಟೆಲ್ನಲ್ಲಿ ಮಗುವಿನ ನಾಮಕರ ಸಮಾರಂಭ ನಡೆಯಲಿದ್ದು, ಹಲವು ಗಣ್ಯರು ಆಗಮಿಸಲಿದ್ದಾರೆ. ನಟ ದರ್ಶನ್ ಸಹ ಆಗಮಿಸುವ ನಿರೀಕ್ಷೆ ಇದೆ.
ಕೆಲ ದಿನಗಳ ಹಿಂದಷ್ಟೆ ನಟ ದರ್ಶನ್, ಸುಮಲತಾ ಸೇರಿದಂತೆ ಹಲವರನ್ನು ಇನ್ಸ್ಟಾಗ್ರಾಂನಿಂದ ಅನ್ಫಾಲೋ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಸುಮಲತಾ ಸಹ ಇನ್ಸ್ಟಾಗ್ರಾಂನಲ್ಲಿ ಒಂದರ ಹಿಂದೆ ಒಂದರಂತೆ ಸುಭಾಷಿತಗಳನ್ನು ಹಂಚಿಕೊಂಡು ಪರೋಕ್ಷವಾಗಿ ದರ್ಶನ್ಗೆ ಟಾಂಗ್ ನೀಡಿದ್ದರು. ದರ್ಶನ್ ಹಾಗೂ ಸುಮಲತಾ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಸುದ್ದಿಗೆ ಈ ಬೆಳವಣಿಗೆ ಪುಷ್ಟಿ ನೀಡಿತ್ತು. ಆದರೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಸುಮಲತಾ, ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಇಲ್ಲ. ಈಗಲೂ ದರ್ಶನ್ ನನ್ನ ಮಗ ಎಂದಿದ್ದರು.
ಆದರೆ ಇಂದು ನಾಮಕರಣ ಮಹೋತ್ಸವ ಇದ್ದು, ಇಂದಿನ ಸಮಾರಂಭಕ್ಕೆ ಸುಮಲತಾರ ‘ಮಗ’ ದರ್ಶನ್ ಆಗಮಿಸುತ್ತಾರೋ ಇಲ್ಲವೊ ಎಂಬುದು ಕುತೂಹಲ ಕೆರಳಿಸಿದೆ. ದರ್ಶನ್ರ ‘ಡೆವಿಲ್’ ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿ ನೆನ್ನೆಯಷ್ಟೆ ಮುಗಿದಿದ್ದು, ಇಂದು ದರ್ಶನ್ಗೆ ಯಾವುದೇ ಶೂಟಿಂಗ್ ಇಲ್ಲ. ಒಂದೊಮ್ಮೆ ದರ್ಶನ್, ನಾಮಕರಣಕ್ಕೆ ಬಂದರೆ ಸುಮಲತಾ ಹಾಗೂ ದರ್ಶನ್ ನಡುವೆ ಯಾವುದೇ ಮನಸ್ಥಾಪ ಇಲ್ಲವೆಂದು ಊಹಿಸಬಹುದು. ಒಂದೊಮ್ಮೆ ದರ್ಶನ್, ನಾಮಕರಣಕ್ಕೆ ಬರದೇ ಹೋದಲ್ಲಿ ದರ್ಶನ್ ಹಾಗೂ ಸುಮಲತಾ ನಡುವೆ ಮನಸ್ಥಾನ ಇರುವುದು ಪಕ್ಕಾ ಆಗುತ್ತದೆ.
ಇದನ್ನೂ ಓದಿ: ದರ್ಶನ್ ನಟನೆಯ ‘ಡೆವಿಲ್’ ಚಿತ್ರಕ್ಕೆ ಮೈಸೂರಿನಲ್ಲಿ ಕೊನೆಯ ದಿನದ ಶೂಟಿಂಗ್
ದರ್ಶನ್, ಇಲ್ಲದೆ ನಮ್ಮ ಮನೆಯಲ್ಲಿ ಯಾವ ಶುಭ ಕಾರ್ಯವೂ ನಡೆಯುವುದಿಲ್ಲ ಎಂದು ಹಿಂದೊಮ್ಮೆ ಸುಮಲತಾ ಹೇಳಿದ್ದರು. ಅಂತೆಯೇ ಅಭಿಷೇಕ್-ಅವಿವಾ ಮದುವೆ ಸೇರಿದಂತೆ ಇತರೆ ಎಲ್ಲ ಬಹುಮುಖ್ಯ ಕಾರ್ಯಗಳಿಗೆ ದರ್ಶನ್ ಹಾಜರಿದ್ದರು. ಸುಮಲತಾ ಅವರ ರಾಜಕೀಯ ಕಾರ್ಯಕ್ರಮಗಳಿಗೂ ಸಹ ದರ್ಶನ್ ಹಾಜರಿದ್ದು, ರಾಜಕೀಯವಾಗಿ ಅವರಿಗೆ ಬೆಂಬಲ ಸಹ ನೀಡಿದ್ದರು. ಸುಮಲತಾ ಅವರು ಮಂಡ್ಯ ಲೋಕಸಭೆ ಚುನಾವಣೆ ಗೆಲುವಿನಲ್ಲಿ ದರ್ಶನ್ ಪಾತ್ರ ಮಹತ್ವದ್ದಾಗಿದೆ. ಒಂದೊಮ್ಮೆ ಸುಮಲತಾ ಹಾಗೂ ದರ್ಶನ್ ದೂರಾದಲ್ಲಿ, ಅದು ಸುಮಲತಾಗೆ ರಾಜಕೀಯವಾಗಿ ನಷ್ಟವಾಗುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:53 am, Sun, 16 March 25