ನಿನ್ನೆ (ಆಗಸ್ಟ್ 17) 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳು ಘೋಷಣೆಯಾಗಿವೆ. ಜನಪ್ರಿಯ ಸಿನಿಮಾ ವಿಭಾಗದಲ್ಲಿ ‘ಕಾಂತಾರ’ ಹಾಗೂ ‘ಕೆಜಿಎಫ್ 2’ ಸಿನಿಮಾಗಳು ಮಾತ್ರವೇ ಪ್ರಶಸ್ತಿ ಗಳಿಸಿವೆ. ಆದರೆ ಫೀಚರ್ ವಿಭಾಗದಲ್ಲಿ ಕನ್ನಡಕ್ಕೆ ಎಷ್ಟು ಪ್ರಶಸ್ತಿಗಳು ಬಂದಿವೆಯೋ ನಾನ್ ಫೀಚರ್ ವಿಭಾಗದಲ್ಲಿಯೂ ಅಷ್ಟೆ ಪ್ರಶಸ್ತಿಗಳು ಲಭಿಸಿವೆ. ‘ಮಧ್ಯಂತರ’ ಕಿರುಚಿತ್ರಕ್ಕೆ ಎರಡು ಪ್ರಶಸ್ತಿಗಳು ಲಭಿಸಿರುವದು ವಿಶೇಷ. ‘ಮಧ್ಯಂತರ’ ಕಿರುಚಿತ್ರ ಹೊಸ ನಿರ್ದೇಶಕರ ಅತ್ಯುತ್ತಮ ಸಿನಿಮಾ ಹಾಗೂ ಸಂಕಲಕ್ಕೆ ಸುರೇಶ್ ಅವರಿಗೆ ರಾಷ್ಟ್ರಪ್ರಶಸ್ತಿ ದೊರೆತಿದೆ. ಅಂದಹಾಗೆ ಭಾರತದ ಖ್ಯಾತ ಸಂಕಲನಕಾರರಲ್ಲಿ ಒಬ್ಬರಾದ ಸುರೇಶ್ ಅವರಿಗೆ ಇದು ಮೊದಲ ರಾಷ್ಟ್ರಪ್ರಶಸ್ತಿ ಏನಲ್ಲ. ಸುರೇಶ್ ಅವರಿಗೆ ಈ ರೀತಿಯ ಪ್ರಶಸ್ತಿಗಳು ಹೊಸದೇನಲ್ಲ.
ಸುರೇಶ್ ಅರಸ್ ಕನ್ನಡದ ಖ್ಯಾತ ನಟ ಸುಂದರ್ ಕೃಷ್ಣ ಅರಸ್ ಅವರ ಸಹೋದರ. ಕೊಳ್ಳೆಗಾಲದ ಸುರೇಶ್ ಅರಸ್, ಹೆಸರಿಗೆ ಅರಸು ಕುಟುಂಬದವರಾದರೂ ಬಡತನದಲ್ಲಿ ಬೆಳೆದವರು. ಊಟದ ಸಮಸ್ಯೆಯಿಂದಾಗಿ ಕಲಿಯುತ್ತಿದ್ದ ಡಿಪ್ಲೋಮಾ ಎಂಜಿನಿಯರಿಂಗ್ ಬಿಟ್ಟು ಬಾವಿಗಳಿಗೆ ಮೋಟರ್ ಕೂರಿಸುವ ಕೆಲಸಕ್ಕೆ ಸೇರಿಕೊಂಡಿದ್ದರು ಸುರೇಶ್ ಅರಸ್. ಮೈಸೂರಿನ ಹಲವು ಹಳ್ಳಿಗಳಿಗೆ ಹೋಗಿ ಅಲ್ಲೆಲ್ಲ ಬಾವಿಗಳಿಗೆ ಮೋಟರ್ ಕೂಡಿಸುವ ಕೆಲಸ ಮಾಡುತ್ತಿದ್ದರು. ಅದರಿಂದ ಅಲ್ಪ-ಸ್ವಲ್ಪ ಸಂಪಾದನೆ ಆಗುತ್ತಿತ್ತಾದರೂ. ಅದು ಜೀವನ ನಡೆಸಲು ಸಾಧ್ಯವಾಗದು ಎಂದು ಅರಿತ ಸುರೇಶ್, ಅಣ್ಣ ಸುಂದರ್ ಕೃಷ್ಣ ಅರಸ್ ಸಲಹೆಯಂತೆ ಸಿನಿಮಾಕ್ಕೆ ಸೇರಿಕೊಂಡರು.
ಅಸಲಿಗೆ ತಮ್ಮನನ್ನು ಚಿತ್ರರಂಗಕ್ಕೆ ಕರೆತಂದಾಗ ಅಣ್ಣನ ಜೀವನಕ್ಕೆ ಇನ್ನೂ ನೆಲೆ ಒದಗಿರಲಿಲ್ಲ. ಆಗಷ್ಟೆ ಪುಟ್ಟಣ್ಣ ಕಣಗಾಲ್ ನೆರಳಿನಿಂದ ಹೊರಬಂದಿದ್ದ ಸುಂದರ್ ಅವರಿಗೆ ಹೆಚ್ಚಿನ ಅವಕಾಶಗಳೇನೂ ಇರಲಿಲ್ಲ. ತಮ್ಮನನ್ನು ತಮ್ಮಂತೆ ನಟನಾಗಿಸಲು ಇಷ್ಟವಿಲ್ಲದೆ ಕ್ಯಾಮೆರಾ ಮನ್ ಆಗಿಸುವ ಆಸೆ ಸುಂದರ್ ಕೃಷ್ಣ ಅವರಿಗಿತ್ತು. ಸುರೇಶ್ ಅವರಿಗೂ ಇಂಥಹುದೇ ಎಂಬ ಗುರಿ ಇರಲಿಲ್ಲ. ಆಕಸ್ಮಿಕವಾಗಿ ಅವರು ಎಡಿಟಿಂಗ್ ಡಿಪಾರ್ಟ್ಮೆಂಟ್ನಲ್ಲಿ ಕೆಲಸಕ್ಕೆ ಸೇರಬೇಕಾಯ್ತು. ಅಲ್ಲಿ ಜನಪ್ರಿಯ ಎಡಿಟರ್ ಒಬ್ಬರ ಬಳಿ ಸಹಾಯಕರಾಗಿ ಕೆಲಸ ಮಾಡಿದರು.
ಸಹಾಯಕನಾಗಿ ಕೆಲಸ ಆರಂಭಿಸುತ್ತಿದ್ದಂತೆ ಕೆಲವು ಸಿನಿಮಾಗಳನ್ನು ಎಡಿಟ್ ಮಾಡುವ ಅವಕಾಶ ಸುರೇಶ್ ಅವರಿಗೆ ದೊರಕಿತು. ಅಲ್ಲಿಂದ ಸುರೇಶ್ ಹಿಂತಿರುಗಿ ನೋಡಿದ್ದಿಲ್ಲ. ಮಾನವ-ದಾನವ ಸೇರಿದಂತೆ ಇನ್ನು ಹಲವು ಸಿನಿಮಾಗಳನ್ನು 80ರ ದಶಕದಲ್ಲಿ ಸುರೇಶ್ ಎಡಿಟ್ ಮಾಡಿದ್ದರು. ಮದ್ರಾಸ್ನ ಯಾರೋ ಎಡಿಟ್ ಮಾಡಿದ್ದ ‘ಬಂಗಾರದ ಜಿಂಕೆ’ ಸಿನಿಮಾವನ್ನು ರೀ ಎಡಿಟ್ ಮಾಡಿ ಸಿನಿಮಾ ಬ್ಲಾಕ್ ಬಸ್ಟರ್ ಆಗುವಂತೆ ಮಾಡಿದ್ದರು ಸುರೇಶ್ ಅರಸ್. ಆ ಸಿನಿಮಾದ ಬಳಿಕ ಸುರೇಶ್ ಅರಸ್ ಅವರು ಚಿತ್ರರಂಗದ ಹೊಸ ತಾರೆ ಆಗಿಬಿಟ್ಟರು.
‘ಬ್ಯಾಂಕರ್ ಮಾರ್ಗಯ್ಯ’ ಸಿನಿಮಾದಿಂದ ಸ್ವತಂತ್ರ್ಯ ಎಡಿಟಿಂಗ್ ಆರಂಭಿಸಿ, ಆಗಿನ ಅತ್ಯುತ್ತಮ ನಿರ್ದೇಶಕರಾಗದ್ದ ಗಿರೀಶ್ ಕಾಸರವಳ್ಳಿ, ಗಿರೀಶ್ ಖಾರ್ನಾಡ್, ಕಾರಂತರು, ಶಂಕರ್ ನಾಗ್, ನಾಗಾಭರಣ, ಇನ್ನೂ ಹಲವು ಹೊಸ ಅಲೆಯ ಸಿನಿಮಾ ನಿರ್ದೇಶಕರ ಮೆಚ್ಚಿನ ಸಂಕಲನಕರಾರರಾಗಿದ್ದರು. ಬರ-ಬರುತ್ತಾ ಕಮರ್ಶಿಯಲ್ ಸಿನಿಮಾಗಳಿಗೂ ಸಂಕಲನ ಮಾಡಲು ಆರಂಭಿಸಿದರು. ಅತ್ಯಂತ ಚುರುಕಿನ ಮತ್ತು ಪ್ರತಿಭಾವಂತ ಎಡಿಟರ್ ಆಗಿದ್ದ ಅರಸ್ ಅವರ ಖ್ಯಾತ ಬಹುಬೇಗ ಪರಭಾಷೆಗಳಲ್ಲಿಯೂ ಹಬ್ಬಿ, ತಮಿಳು, ತೆಲುಗಿನಿಂದಲೂ ಒಂದರ ಮೇಲೊಂದು ಅವಕಾಶಗಳು ಬರಲು ಆರಂಭವಾದವು. ಅದರಲ್ಲಿಯೂ ತಮಿಳು ಚಿತ್ರರಂಗದ ನಂಬರ್ 1 ಎಡಿಟರ್ ಆಗಿ ಹೋದರು ಸುರೇಶ್ ಅರಸ್.
ಇದನ್ನೂ ಓದಿ:National Award: ರಾಷ್ಟ್ರಪ್ರಶಸ್ತಿ ಪಡೆದ ಕನ್ನಡ ಸಿನಿಮಾಗಳು
ಶಂಕರ್ನಾಗ್ರ ‘ಮಾಲ್ಗುಡಿ ಡೇಸ್’, ‘ಇದು ಸಾಧ್ಯ’, ‘ಆಸ್ಫೋಟ’, ‘ಗಣೇಶನ ಮದುವೆ’, ‘ಗಣೇಶನ ಗಲಾಟೆ’, ‘ಪಂಚಮ ವೇದ’ ಇನ್ನಿತರೆ ಸೂಪರ್ ಹಿಟ್ ಸಿನಿಮಾಗಳನ್ನು ಆರಂಭದಲ್ಲಿ ಎಡಿಟ್ ಮಾಡಿದರು. ಅದಾದ ಬಳಿಕ 1991 ರಲ್ಲಿ ಮೊದಲ ಬಾರಿಗೆ ಖ್ಯಾತ ನಿರ್ದೇಶಕ ಮಣಿರತ್ನಂ ಜೊತೆಗೆ ಕೆಲಸ ಮಾಡಿ ರಜನೀಕಾಂತ್-ಮಮ್ಮುಟಿ ನಟಿಸಿರುವ ‘ದಳಪತಿ’ ಸಿನಿಮಾ ಎಡಿಟ್ ಮಾಡಿದರು. ಇದು ಅವರ ಎರಡನೇ ತಮಿಳು ಸಿನಿಮಾ. ಈ ಸಿನಿಮಾದ ಬಳಿಕ ಮಣಿರತ್ನಂರ ಎಲ್ಲ ಸೂಪರ್ ಹಿಟ್ ಸಿನಿಮಾಗಳಿಗೆ ಸುರೇಶ್ ಅರಸ್ ಖಾಯಂ ಸಂಕಲನಕಾರರಾದರು.
ಮಣಿರತ್ನಂರ ‘ರೋಜಾ’, ‘ಬಾಂಬೆ’, ‘ತಿರುಡ-ತಿರುಡ’ , ಶಾರುಖ್ ಖಾನ್ ನಟನೆಯ ‘ದಿಲ್ ಸೆ’ ಸಿನಿಮಾಗಳನ್ನು ಸುರೇಶ್ ಎಡಿಟ್ ಮಾಡಿದರು. ಆದರೆ ‘ದಿಲ್ ಸೇ’ ಸಿನಿಮಾದ ಬಳಿಕ ಮಣಿರತ್ನಂ-ಸುರೇಶ್ ಒಟ್ಟಿಗೆ ಕೆಲಸ ಮಾಡಲಿಲ್ಲ. ಆದರೆ ಆ ವೇಳೆಗಾಗಲೆ ತಮಿಳಿನ ನಂಬರ್ 1 ಎಡಿಟರ್ ಆಗಿಬಿಟ್ಟಿದ್ದರು ಸುರೇಶ್. ತಮಿಳಿನ ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಸಂಕಲನ ಮಾಡಿರುವುದು ಸುರೇಶ್ ಅರಸ್. ಬ್ಲಾಕ್ ಬಸ್ಟರ್ ‘ಮಿನ್ಸರ ಕನವು’, ‘ಪೂವೆಲಿ’, ‘ಕಂಡುಕೊಂಡೆನ್ ಕಂಡುಕೊಂಡೇನ್’, ‘ಧೀನ’, ‘ನಂದ’, ಬ್ಲಾಕ್ ಬಸ್ಟರ್ ‘ಮಿನ್ನಲೆ’ (ರೆಹನಾ ಹೆ ತೇರೆ ದಿಲ್ ಮೆ), ‘ಜೆಮಿನಿ’, ‘ಪಿತಾಮಗನ್’, ‘ತಿರುಮಲೈ’, ‘ತಿರುಪಾಚ್ಚಿ’, ‘ವಸೂಲ್ ರಾಜ ಎಂಬಿಬಿಎಸ್’, ‘ಚಂದ್ರಮುಖಿ’, ‘ನಾನ್ ಕಡವಲ್’ ‘ಅವನ್ ಇವನ್’ ಪಟ್ಟಿ ಹೀಗೆ ಉದ್ದವಾಗುತ್ತಾ ಸಾಗುತ್ತದೆ.
ಇದನ್ನೂ ಓದಿ:National Award: ರಾಷ್ಟ್ರಪ್ರಶಸ್ತಿ ಪಡೆದ ಕನ್ನಡ ಸಿನಿಮಾಗಳು
1991 ರ ‘ದಳಪತಿ’ ಸಿನಿಮಾದ ಬಳಿಕ ಕನ್ನಡದಲ್ಲಿ ಕೆಲಸ ಮಾಡುವುದು ಕಡಿಮೆಯಾಯ್ತಾದರೂ ಮಾಡಿದ್ದೆಲ್ಲವೂ ಒಳ್ಳೆಯ ಸಿನಿಮಾಗಳೇ. ‘ಮೈಸೂರು ಮಲ್ಲಿಗೆ’, ‘ಬಾ ನಲ್ಲೆ ಮಧು ಚಂದ್ರಕೆ’, ಗಿರೀಶ್ ಕಾರ್ನಾಡ್ ನಿರ್ದೇಶನದ ‘ಚೆಲ್ವಿ’, 1998 ರ ‘ಭೂಮಿ ತಾಯಿ ಚೊಚ್ಚಲ ಮಗ’, ‘ಗಾಳಿಪಟ’, ‘ಮೊಗ್ಗಿನ ಮನಸ್ಸು’, ‘ಸಂಗಮ’, ‘ಆಪ್ತರಕ್ಷಕ’, ‘ಪರೋಲ್’, ‘ಪ್ಯಾರ್ಗೆ ಆಗ್ಬಿಟ್ಟೈತೆ’, ಇತ್ತೀಚೆಗಿನ ಯೋಗರಾಜ ಭಟ್ಟರ ‘ಗರಡಿ’ ಸಿನಿಮಾಕ್ಕೂ ಸುರೇಶ್ ಅವರೇ ಸಂಕಲನ ಮಾಡಿದ್ದಾರೆ.
ಸುರೇಶ್ ಅವರ ಅತ್ಯುತ್ತಮ ಸಂಕಲನ ಪ್ರತಿಭೆಯನ್ನು ಅರಸಿ ಹಲವಾರು ರಾಷ್ಟ್ರ, ರಾಜ್ಯ ಪ್ರಶಸ್ತಿಗಳು ಸಂದಿವೆ. ಮಣಿರತ್ನಂ ನಿರ್ದೇಶನದ ‘ಬಾಂಬೆ’ ಸಿನಿಮಾದ ಸಂಕಲನಕ್ಕೆ ಮೊದಲ ರಾಷ್ಟ್ರಪ್ರಶಸ್ತಿ ದೊರಕಿದೆ. 2011 ರಲ್ಲಿ ಅಂಥಾಲಜಿ ಕನ್ನಡ ಸಿನಿಮಾ ‘ಐದೊಂದ್ಲ ಐದು’, ‘ಪಂಚಮ ವೇದ’, ‘ಸವಿ ಸವಿ ನೆನಪು’, ‘ಮೈಸೂರು ಮಲ್ಲಿಗೆ’, ‘ಮೂರು ದಾರಿಗಳು’ ಸಿನಿಮಾಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿ, ‘ತಿರುಡ-ತಿರುಡ’ ಸಿನಿಮಾಕ್ಕೆ ತಮಿಳುನಾಡು ರಾಜ್ಯ ಪ್ರಶಸ್ತಿ ಲಭಿಸಿದೆ. ಇದೀಗ ‘ಮಧ್ಯಂತರ’ ಕನ್ನಡ ಕಿರುಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಲಭಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ