ಕೊರೊನಾ ಕಾಟ ಕಡಿಮೆ ಆದ ಬಳಿಕ ಚಿತ್ರರಂಗದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಲಾಕ್ಡೌನ್ ಕಾರಣದಿಂದ ಅನೇಕ ಸಿನಿಮಾಗಳ ಕೆಲಸಗಳು ಸ್ಥಗಿತಗೊಂಡಿದ್ದವು. ಕೊವಿಡ್ ನಿರ್ಬಂಧಗಳೆಲ್ಲ ಸಡಿಲಗೊಂಡ ಬಳಿಕ ಮತ್ತೆ ಕನ್ನಡ ಚಿತ್ರರಂಗದ (Kannada Film Industry) ಕಾರ್ಯಗಳು ಪುನಾರಂಭಗೊಂಡವು. ನೂರಾರು ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ಚಿಕ್ಕ ಬಜೆಟ್ನ ಚಿತ್ರತಂಡಗಳು ಕೂಡ ಉತ್ಸಾಹದೊಂದಿಗೆ ಕಾರ್ಯಮಗ್ನವಾಗಿವೆ. ಶೂಟಿಂಗ್, ಡಬ್ಬಿಂಗ್, ಆಡಿಯೋ ರಿಲೀಸ್, ಪ್ರಚಾರ ಸೇರಿದಂತೆ ಹಲವು ಕೆಲಸಗಳು ಗಾಂಧಿನಗರದಲ್ಲಿ ನಡೆಯುತ್ತಿವೆ. ಆ ಪೈಕಿ ಹೊಸಬರ ‘ಮಹಾಬಲಿ’ ಸಿನಿಮಾ (Mahabali Kannada movie) ಕೂಡ ಹಾಡುಗಳನ್ನು ರಿಲೀಸ್ ಮಾಡಿಕೊಂಡಿದೆ. ಈ ಸಿನಿಮಾದಲ್ಲಿ ನಟಿಸಿರುವ ಬಹುತೇಕರು ಹೊಸಬರು. ಬಣ್ಣದ ಲೋಕದ ಸೆಳೆತ ಅವರನ್ನು ಗಾಂಧಿನಗರಕ್ಕೆ ಕರೆತಂದಿದೆ.
ಶಿವಮೊಗ್ಗದ ಆನಂದಪುರದಲ್ಲಿ ಹೋಟೆಲ್ ನಡೆಸುತ್ತಿರುವ ಮಲ್ಲೇಶ್ ಯಡೇಹಳ್ಳಿ ಅವರಿಗೆ ಚಿತ್ರರಂಗದ ಬಗ್ಗೆ ಆಸಕ್ತಿ ಮೂಡಿದ್ದರಿಂದ ಅವರು ‘ಮಹಾಬಲಿ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ನಿರ್ಮಾಣ ಮಾತ್ರವಲ್ಲದೇ ನಿರ್ದೇಶನದ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಕೂಡ ಮಲ್ಲೇಶ್ ಯಡೇಹಳ್ಳಿ ಅವರದ್ದೇ. ‘ಮಾಲಾಸಾಂಭ ಕಂಬೈನ್ಸ್’ ಮೂಲಕ ‘ಮಹಾಬಲಿ’ ಸಿನಿಮಾವನ್ನು ಅವರು ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: ಟ್ರೇಲರ್ನಿಂದ ನಿರೀಕ್ಷೆ ಮೂಡಿಸಿದ ‘ಮನಸ್ಮಿತ’ ಸಿನಿಮಾ; ಅತುಲ್ ಕುಲಕರ್ಣಿ ಜೊತೆ ಹೊಸ ಕಲಾವಿದರ ಸಂಗಮ
ಕುಟುಂಬ ಸಮೇತ ಕುಳಿತು ನೋಡಬಹುದಾದ ಸಿನಿಮಾವನ್ನು ಮಾಡಿರುವುದಾಗಿ ನಿರ್ದೇಶಕರು ಹೇಳಿಕೊಂಡಿದ್ದಾರೆ. ‘ಇಂದಿನ ಕಾಲಘಟ್ಟದಲ್ಲಿ ಮಾನವ ನಿರ್ಮಿಸಿಕೊಂಡ ಜೀವನದ ಮೌಲ್ಯಗಳು ಅಧೋಗತಿಗೆ ಹೋಗುತ್ತಿವೆ. ಪ್ರತಿಯೊಬ್ಬ ಮನುಷ್ಯನಿಗೂ ಅವನದ್ದೇ ಆದಂತಹ ಸೀಮಿತ ಕುಟುಂಬ ಇರುತ್ತದೆ. ಅಂಥ ಕುಟುಂಬದ ಮೌಲ್ಯವು ಈಗ ಯಾವ ಮಟ್ಟಕ್ಕೆ ಹೋಗ್ತಾ ಇದೆ? ಅದರ ಅರ್ಥವೇನು? ಈ ಕುರಿತಾಗಿ ಜಾಗೃತಿ ಮೂಡಿಸುವುವಂತಹ ಕಥೆ ಈ ಸಿನಿಮಾದಲ್ಲಿದೆ’ ಎಂದಿದ್ದಾರೆ ನಿರ್ದೇಶಕರು.
ಇದನ್ನೂ ಓದಿ: ಟ್ರೇಲರ್ ಮೂಲಕವೇ ಗಮನ ಸೆಳೆಯುತ್ತಿದ್ದಾನೆ ವೀಲ್ ಚೇರ್ ರೋಮಿಯೋ !
ಮಲ್ಲೇಶ್ ಅವರ ಪುತ್ರ ಪೃಥ್ವಿರಾಜ್ ಯಡೇಹಳ್ಳಿ ಅವರು ‘ಮಹಾಬಲಿ’ ಸಿನಿಮಾದಲ್ಲಿ ನಾಯಕನಾಗಿದ್ದಾರೆ. ಮಾನ್ವಿತಾ ರಾಜ್ ಅವರು ನಾಯಕಿಯಾಗಿ ನಟಿಸಿದ್ದಾರೆ. ರಥ ಸಪ್ತಮಿ ಅರವಿಂದ್ ಅವರನ್ನು ಹೊರತುಪಡಿಸಿ ಈ ಸಿನಿಮಾದಲ್ಲಿ ನಟಿಸಿರುವ ಎಲ್ಲರೂ ಹೊಸ ಕಲಾವಿದರು. ಎಲ್ಲರಿಗೂ ವರ್ಕ್ಶಾಪ್ ಮಾಡಿಸಿದ ಬಳಿಕ ಚಿತ್ರೀಕರಣ ಮಾಡಲಾಗಿದೆ. ವಾಸುದೇವ ಆಚಾಪುರ, ಚೇತನ್ ಶೆಟ್ಟಿ, ಅಕ್ಷರಾ, ಸೌಪರ್ಣಿಕಾ, ನೂತನ್, ಯುವರಾಜ್, ಪ್ರವೀಣ್ ರಾಜ್ ಪುತ್ತೂರು, ಪ್ರದೀಪ್ ಮೆಂಥೆಲ್, ಉಮೇಶ್ ಕೆ.ಎಲ್, ಆಚಾರ್ಯ ರಾಘು ಮುಂತಾದವರು ಈ ಚಿತ್ರದ ಪಾತ್ರವರ್ಗದಲ್ಲಿದ್ದಾರೆ.
ನಾಲ್ಕು ಹಾಡುಗಳಿಗೆ ರಾಜ್ ಭಾಸ್ಕರ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಎರಡು ಸಾಹಸ ದೃಶ್ಯಗಳಿಗೆ ಜಾಗ್ವಾರ್ ಸಣ್ಣಪ್ಪ ಆ್ಯಕ್ಷನ್-ಕಟ್ ಹೇಳಿದ್ದಾರೆ. ರವಿ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. ಕವಿತಾ ಭಂಡಾರಿ ಸಂಕಲನ ಹಾಗೂ ಜೈ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ‘ಸಿರಿ ಮ್ಯೂಸಿಕ್’ ಮೂಲಕ ‘ಮಹಾಬಲಿ’ ಚಿತ್ರದ ಆಡಿಯೋ ರಿಲೀಸ್ ಆಗಿದೆ.
ಈ ಚಿತ್ರಕ್ಕೆ ಈಗಾಗಲೇ ಸೆನ್ಸಾರ್ ಪ್ರಕ್ರಿಯೆ ಮುಗಿದಿದೆ. ಯುಎ ಪ್ರಮಾಣ ಪತ್ರ ಪಡೆದುಕೊಂಡಿದ್ದು, ಶೀಘ್ರದಲ್ಲೇ ತೆರೆಕಾಣಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಶಿಕಾರಿಪುರ, ಸಾಗರ, ಮಲ್ಲೇನಹಳ್ಳಿ, ಹಾವೇರಿ, ಹಿರೇಕೇರಿ, ಚಿಕ್ಕೇರಿ, ಕನಕದಾಸರ ಪೀಠ ಸೇರಿದಂತೆ ಹಲವು ಸ್ಥಳಗಳಲ್ಲಿ ‘ಮಹಾಬಲಿ’ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.