ಹೆಸರು ಮಾತ್ರ ‘Love..ಲಿ’, ಆದರೆ ಹೀರೋ ಗೆಟಪ್​ ತುಂಬಾ​ ರಗಡ್​; ಅಚ್ಚರಿ ಮೂಡಿಸಿದ ವಸಿಷ್ಠ ಸಿಂಹ ಲುಕ್​

ಹೆಸರು ಮಾತ್ರ ‘Love..ಲಿ’, ಆದರೆ ಹೀರೋ ಗೆಟಪ್​ ತುಂಬಾ​ ರಗಡ್​; ಅಚ್ಚರಿ ಮೂಡಿಸಿದ ವಸಿಷ್ಠ ಸಿಂಹ ಲುಕ್​
ವಸಿಷ್ಠ ಸಿಂಹ

‘Love..ಲಿ’ ಚಿತ್ರದಲ್ಲಿ ವಸಿಷ್ಠ ಸಿಂಹ ಸಖತ್​ ರಗಡ್​ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅಭಿಮಾನಿಗಳ ವಲಯದಲ್ಲಿ ಈ ಸಿನಿಮಾದ ಹೊಸ ಪೋಸ್ಟರ್​ ವೈರಲ್​ ಆಗಿದೆ.

TV9kannada Web Team

| Edited By: Madan Kumar

May 23, 2022 | 7:30 AM

ನಟ ವಸಿಷ್ಠ ಸಿಂಹ (Vasishta Simha) ಅವರು ಹಲವು ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ನಾಯಕ ನಟನಾಗಿ, ಖಳನಟನಾಗಿ, ಗಾಯಕನಾಗಿ, ಆಡಿಯೋ ಕಂಪನಿ ಮಾಲಿಕನಾಗಿ.. ಹೀಗೆ ಅವರು ಹಲವು ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ವಸಿಷ್ಠ ಸಿಂಹ ಅವರ ಹೊಸ ಸಿನಿಮಾ ‘Love..ಲಿ’ (Love..Li Kannada Movie) ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದಲ್ಲಿ ಅವರು ಹೀರೋ ಆಗಿ ನಟಿಸುತ್ತಿದ್ದಾರೆ. ಶೀರ್ಷಿಕೆ ಮೂಲಕವೇ ಈ ಚಿತ್ರ ಗಮನ ಸೆಳೆದಿದೆ. ಕೆಲವೇ ದಿನಗಳ ಹಿಂದೆ ಈ ಸಿನಿಮಾಗೆ ಮುಹೂರ್ತ ನೆರವೇರಿಸಲಾಗಿತ್ತು. ವಸಿಷ್ಠ ಸಿಂಹ ಅವರ ಲುಕ್​ ನೋಡಿ ಫ್ಯಾನ್ಸ್​ ಫಿದಾ ಆಗಿದ್ದರು. ಈಗ ಈ ಸಿನಿಮಾದಿಂದ ಇನ್ನೊಂದು ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ‘Love..ಲಿ’ ಸಿನಿಮಾದ ಕಥೆಯ ಬಗ್ಗೆ ಭಾರಿ ಕೌತುಕ ಮೂಡಿಸುವಲ್ಲಿ ಈ ಪೋಸ್ಟರ್​ ಯಶಸ್ವಿ ಆಗಿದೆ. ಎಲ್ಲ ಬಗೆಯ ಪಾತ್ರಗಳಿಗೂ ಸೈ ಎಂಬಂತಿರುವ ನಟ ವಸಿಷ್ಠ ಸಿಂಹ. ಈಗಾಗಲೇ ಅವರು ಅನೇಕ ಸಿನಿಮಾಗಳ ಮೂಲಕ ಜನಮೆಚ್ಚುಗೆ ಗಳಿಸಿದ್ದಾರೆ. ಅವರ ಮುಂಬರುವ ಚಿತ್ರಗಳ ಬಗ್ಗೆ ನಿರೀಕ್ಷೆ ಇದೆ.

ಸಿನಿಮಾಗಳ ಪೋಸ್ಟರ್​, ಟೀಸರ್​, ಟ್ರೇಲರ್​ ಹಾಗೂ ಹಾಡುಗಳು ಎಂದರೆ ಪ್ರೇಕ್ಷಕರಿಗೆ ನೀಡುವ ಆಹ್ವಾನ ಇದ್ದಂತೆ. ಪೋಸ್ಟರ್​ ನೋಡಿ ಕುತೂಹಲ ಹುಟ್ಟಿದರೆ ಎಷ್ಟೋ ಜನರು ಚಿತ್ರಮಂದಿರಕ್ಕೆ ಕಾಲಿಡುತ್ತಾರೆ. ಹಾಗಾಗಿ ಪೋಸ್ಟರ್​ ವಿನ್ಯಾಸ ಎಂಬುದು ಬಹಳ ಮುಖ್ಯವಾಗುತ್ತದೆ. ಈ ವಿಚಾರದಲ್ಲಿ ‘Love..ಲಿ’ ಸಿನಿಮಾ ಗಮನಾರ್ಹ ಪ್ರಯತ್ನ ಮಾಡಿದೆ. ವಸಿಷ್ಠ ಸಿಂಹ ಅವರ ಪಾತ್ರದ ಬಗ್ಗೆ ಅಭಿಮಾನಿಗಳ ಮನದಲ್ಲಿ ನಿರೀಕ್ಷೆ ಮೂಡಿಸುವಲ್ಲಿ ಈ ಪೋಸ್ಟರ್​ ಯಶಸ್ವಿ ಆಗಿದೆ.

ವಸಿಷ್ಠ ಸಿಂಹ ಅವರ ಕೈ ರಕ್ತಸಿಕ್ತವಾಗಿದೆ. ಇದೇ ಕೈಯಲ್ಲಿ ಲಾಂಗ್​ ಹಿಡಿದು ಖಡಕ್​ ಆಗಿ ಅವರು ನಡೆದುಬರುತ್ತಿದ್ದಾರೆ. ಇನ್ನೊಂದು ಕೈಯಲ್ಲಿ ಧಮ್​ ಎಳೆಯುತ್ತ ಲುಕ್​ ಕೊಡುತ್ತಿರುವಂತೆ ಅವರ ಪೋಸ್ಟರ್​ ವಿನ್ಯಾಸಗೊಂಡಿದೆ. ಅಭಿಮಾನಿಗಳ ವಲಯದಲ್ಲಿ ಈ ಪೋಸ್ಟರ್​ ವೈರಲ್​ ಆಗುತ್ತಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ‘Love..ಲಿ’ ಚಿತ್ರದ ಇಂಟ್ರೊಡಕ್ಷನ್ ದೃಶ್ಯವನ್ನು ಅದ್ದೂರಿಯಾಗಿ ಚಿತ್ರೀಕರಿಸುತ್ತಿರುವ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿತ್ತು. ಈಗ ಹೊಸ ಪೋಸ್ಟರ್ ಮೂಲಕ ಹೈಪ್​ ಕ್ರಿಯೇಟ್​ ಮಾಡಲಾಗಿದೆ.

‘ಮಫ್ತಿ’ ಸಿನಿಮಾ ನಿರ್ದೇಶಕ ನರ್ತನ್‌ ಜೊತೆಗೆ ಕೆಲಸ ಮಾಡಿದ ಅನುಭವ ಹೊಂದಿರುವ ಚೇತನ್‌ ಕೇಶವ್‌ ಅವರು ನೈಜ ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ‘love..ಲಿ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ರವೀಂದ್ರ ಕುಮಾರ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಹರೀಶ್‌ ಕೊಂಬೆ ಛಾಯಾಗ್ರಹಣ, ಅನೂಪ್‌ ಸಿಳೀನ್‌ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

‘Love..ಲಿ’ ಚಿತ್ರದಲ್ಲಿ​ ಲವ್ ಸ್ಟೋರಿ ಇರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ರೌಡಿಸಂ ಕಥೆಯನ್ನೂ ಸಿನಿಮಾ ಒಳಗೊಂಡಿದೆ. ಬೆಂಗಳೂರಿನ ಸರ್ಕಲ್ ಮಾರಮ್ಮ ದೇಗುಲದಲ್ಲಿ ಸರಳವಾಗಿ ಸಿನಿಮಾದ ಮುಹೂರ್ತ ಮಾಡಲಾಗಿತ್ತು. ಮೇ 4ರಿಂದ ಸಿನಿಮಾ ಶೂಟಿಂಗ್​ ಆರಂಭಗೊಂಡಿದ್ದು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗುತ್ತಿದೆ. ವಸಿಷ್ಠ ಸಿಂಹ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಶೂನ್ಯ ನಿರ್ದೇಶನ ಮಾಡುತ್ತಿರುವ ‘ಹೆಡ್ ಬುಷ್’, ‘ಸಿಂಬಾ’, ‘ಓದೆಲಾ ರೈಲ್ವೇ ಸ್ಟೇಷನ್’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada