ರಾತ್ರಿ​ ಕರ್ಫ್ಯೂ ಎಫೆಕ್ಟ್​; ನೈಟ್​ ಶೋಗಳು ರದ್ದು, ಮತ್ತೆ ಸಂಕಷ್ಟದಲ್ಲಿ ಕನ್ನಡ ಚಿತ್ರರಂಗ

| Updated By: ರಾಜೇಶ್ ದುಗ್ಗುಮನೆ

Updated on: Aug 06, 2021 | 5:22 PM

ಸದ್ಯ ಚಿತ್ರಮಂದಿರಗಳಲ್ಲಿ ಶೇ. 50 ಆಸನ ಭರ್ತಿಗೆ ಮಾತ್ರ ಅವಕಾಶವಿದೆ. ಇದರ ಮಧ್ಯೆಯೂ ನಿರ್ಮಾಪಕರು ಸಿನಿಮಾ ರಿಲೀಸ್​ ಮಾಡೋಕೆ ಮುಂದಾಗಿದ್ದಾರೆ.

ರಾತ್ರಿ​ ಕರ್ಫ್ಯೂ ಎಫೆಕ್ಟ್​; ನೈಟ್​ ಶೋಗಳು ರದ್ದು, ಮತ್ತೆ ಸಂಕಷ್ಟದಲ್ಲಿ ಕನ್ನಡ ಚಿತ್ರರಂಗ
ಪ್ರಾತಿನಿಧಿಕ ಚಿತ್ರ
Follow us on

ಕೊವಿಡ್​ ಎರಡನೇ ಅಲೆಯ ಅಬ್ಬರ ನಿಧಾನವಾಗಿ ಕಡಿಮೆ ಆಗುತ್ತಿದೆ ಎನ್ನುವಾಗಲೇ ಮೂರನೇ ಅಲೆ ಕಾಣಿಸಿಕೊಳ್ಳುವ ಮುನ್ಸೂಚನೆ ಸಿಕ್ಕಿದೆ. ನಿಧಾನವಾಗಿ ಕೊವಿಡ್​ ಪ್ರಕರಣಗಳು ಹೆಚ್ಚುತ್ತಿವೆ. ಇದು ರಾಜ್ಯ ಸರ್ಕಾರವನ್ನು ಆತಂಕಕ್ಕೆ ಈಡು ಮಾಡಿದೆ. ಈ ಕಾರಣಕ್ಕೆ ಸರ್ಕಾರ ಈಗಲೇ ಕಾರ್ಯಪ್ರವೃತ್ತವಾಗಿದ್ದು, ರಾಜ್ಯದೆಲ್ಲೆಡೆ ನೈಟ್​ ಕರ್ಫ್ಯೂ ಜಾರಿ ಮಾಡಿದೆ. ರಾಜ್ಯದ ಗಡಿ ಜಿಲ್ಲೆಗಳಲ್ಲಿ ವೀಕೆಂಡ್​ ಕರ್ಫ್ಯೂ ಇರಲಿದೆ.  ಇದರನ್ವಯ ರಾತ್ರಿ 9ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ಇದು ನೇರವಾಗಿ ಚಿತ್ರರಂಗದ ಮೇಲೆ ಪ್ರಭಾವ ಬೀರಿದೆ.

ಕೊವಿಡ್​ ಎರಡನೇ ಅಲೆ ನಿಯಂತ್ರಣಕ್ಕೆ ಸರ್ಕಾರ ಲಾಕ್​ಡೌನ್​ ಘೋಷಣೆ ಮಾಡಿತ್ತು. ಈ ವೇಳೆ ಚಿತ್ರಮಂದಿರಗಳು ಮುಚ್ಚಿದ್ದವು. ಹಂತ ಹಂತವಾಗಿ ಲಾಕ್​ಡೌನ್​ ತೆರವು ಮಾಡಲಾಗಿತ್ತು. ಸದ್ಯ ಚಿತ್ರಮಂದಿರಗಳಲ್ಲಿ ಶೇ. 50 ಆಸನ ಭರ್ತಿಗೆ ಮಾತ್ರ ಅವಕಾಶವಿದೆ. ಇದರ ಮಧ್ಯೆಯೂ ನಿರ್ಮಾಪಕರು ಸಿನಿಮಾ ರಿಲೀಸ್​ ಮಾಡೋಕೆ ಮುಂದಾಗಿದ್ದಾರೆ. ಆದರೆ, ಈಗ ನೈಟ್​ ಕರ್ಫ್ಯೂ ನಿರ್ಮಾಪಕರಿಗೆ ಸಂಕಷ್ಟ ತಂದಿದೆ.

ಮೂರನೇ ಅಲೆ ಭೀತಿಗೆ ಗಾಂಧೀನಗರದ ಮಂದಿಗೆ ಸಂಕಷ್ಟ ಶುರುವಾಗಿದೆ. ಇಂದು (ಆಗಸ್ಟ್ 6) ರಾಜ್ಯಾದ್ಯಂತ ‘ಕಲಿವೀರ’ ಹೆಸರಿನ ಸಿನಿಮಾ ರಿಲೀಸ್ ಆಗಿತ್ತು. ವೀಕೆಂಡ್​ ಸಂದರ್ಭದಲ್ಲಿ ಜನರು ರಾತ್ರಿ ಶೋಗೆ ಹೋಗೋಕೆ ಇಷ್ಟಪಡುತ್ತಾರೆ. ಆದರೆ, ನೈಟ್ ಕರ್ಪ್ಯೂ ಹಿನ್ನೆಲೆಯಲ್ಲಿ ನೈಟ್​ ಶೋ ಕ್ಯಾನ್ಸಲ್ ಆಗಲಿದೆ. ಇನ್ನು, ರಾಜ್ಯದ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಹೇರಲು ನಿರ್ಧರಿಸಲಾಗಿದೆ. ಇದರಿಂದ ಈ ಜಿಲ್ಲೆಗಳಲ್ಲಿ ಎರಡು ದಿನ ಶೋಗೆ ಬ್ರೇಕ್ ಬೀಳಲಿದೆ.

ಈಗಾಗಲೇ ಸ್ಟಾರ್​ ಸಿನಿಮಾಗಳು ರಿಲೀಸ್​ಗೆ ರೆಡಿ ಇವೆ. ‘ಸಲಗ’ ಸಿನಿಮಾ ಸ್ಯಾಂಡಲ್​ವುಡ್​ನ ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಇಷ್ಟು ದಿನ ನಾಯಕ ನಟನಾಗಿ ಗುರುತಿಸಿಕೊಂಡಿದ್ದ ದುನಿಯಾ ವಿಜಯ್​ ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್​ ತೊಟ್ಟಿದ್ದಾರೆ. ಆಗಸ್ಟ್ 20ರಂದು ‘ಸಲಗ’ ರಿಲೀಸ್ ಆಗುತ್ತಿದೆ. ಇನ್ನು,  ಗಣೇಶ ಚತುರ್ಥಿ ಪ್ರಯುಕ್ತ ಸೆಪ್ಟೆಂಬರ್‌ 10ರಂದು ಶಿವರಾಜ್ ಕುಮಾರ್ ನಟನೆಯ ‘ಭಜರಂಗಿ 2’ ಚಿತ್ರ ರಿಲೀಸ್​ ಆಗುತ್ತಿದೆ. ಒಂದೊಮ್ಮೆ ನೈಟ್​ ಕರ್ಫ್ಯೂ ಮುಂದುವರಿದರೆ, ಈ ಸಿನಿಮಾಗಳು ರಿಲೀಸ್​ ದಿನಾಂಕ ಮುಂದೂಡಬಹುದು.

ಇದನ್ನೂ ಓದಿ: ‘ನೀವು ಗೆದ್ದು ಬನ್ನಿ’; ಫಿನಾಲೆ ತಲುಪಿದ ಮಂಜುಗೆ ಶಿವರಾಜ್​ಕುಮಾರ್ ವಿಶೇಷ ಹಾರೈಕೆ

ಬಿಗ್ ಬಾಸ್ ಫಿನಾಲೆಯಲ್ಲಿ ಅರವಿಂದ್​ ಕೆಪಿ ಗೆಲುವಿಗೂ, ಸೋಲಿಗೂ ಕಾರಣವಾಗಬಹುದು ಈ ಅಂಶಗಳು

Published On - 5:02 pm, Fri, 6 August 21