ಮತ್ತೆ ಒಂದಾದ ‘ರಂಗಿತರಂಗ’ ಕಾಂಬಿನೇಷನ್; ನಿರೂಪ್ ಭಂಡಾರಿ ಜೊತೆ ಸಾಯಿಕುಮಾರ್ ನಟನೆ
ಹೊಸ ಸಿನಿಮಾದಲ್ಲಿ ಸಾಯಿಕುಮಾರ್ ಅವರು ನಿರೂಪ್ ತಂದೆ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಈ ಚಿತ್ರದ ಟೈಟಲ್ ಮತ್ತು ಮೊದಲ ಲುಕ್ ಫೆಬ್ರವರಿ 6ಕ್ಕೆ ರಿಲೀಸ್ ಆಗಲಿದೆ.
2015ರಲ್ಲಿ ರಿಲೀಸ್ ಆದ ‘ರಂಗಿತರಂಗ’ ಸಿನಿಮಾ (RangiTaranga Movie) ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ನಿರೂಪ್ ಭಂಡಾರಿ ಹಾಗೂ ಸಾಯಿಕುಮಾರ್ ಕಾಂಬಿನೇಷನ್ ಬೇರೆಯದೇ ರೀತಿ ಇತ್ತು. ಈ ಚಿತ್ರವನ್ನು ಜನರು ಸಾಕಷ್ಟು ಇಷ್ಟಪಟ್ಟಿದ್ದರು. ಈ ಚಿತ್ರ ರಿಲೀಸ್ ಆಗಿ 9 ವರ್ಷಗಳು ಕಳೆದಿವೆ. ಈಗ ನಿರೂಪ್ ಮತ್ತು ಸಾಯಿಕುಮಾರ್ ಹೊಸ ಚಿತ್ರಕ್ಕಾಗಿ ಒಂದಾಗಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಭರ್ಜರಿ ಖುಷಿಪಟ್ಟಿದ್ದಾರೆ. ಚಿತ್ರದ ಶೀರ್ಷಿಕೆ ತಿಳಿದುಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ. ಇದಕ್ಕೆ ಫೆಬ್ರವರಿ 6ರಂದು ಉತ್ತರ ಸಿಗಲಿದೆ.
ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಸಿನಿಮಾ ಎದುರು ರಿಲೀಸ್ ಆಗಿ ‘ರಂಗಿತರಂಗ’ ಸಿನಿಮಾ ಸದ್ದು ಮಾಡಿತ್ತು. ಗುಡ್ಡದ ಭೂತದ ಕಥೆ ಚಿತ್ರದಲ್ಲಿತ್ತು. ಈ ಚಿತ್ರದಲ್ಲಿ ಎರಡು ಶೇಡ್ನ ಪಾತ್ರದಲ್ಲಿ ಸಾಯಿಕುಮಾರ್ ನಟಿಸಿದ್ದರು. ಈಗ ಅವರು ಮತ್ತೆ ನಿರೂಪ್ ಭಂಡಾರಿ ಜೊತೆ ಕೈ ಜೋಡಿಸಿದ್ದಾರೆ. ಇವರ ಕಾಂಬಿನೇಷನ್ ಚಿತ್ರಕ್ಕೆ ಸಚಿನ್ ವಾಲಿ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರಿಗೆ ಮೊದಲ ಅನುಭವ. ಮೊದಲ ಚಿತ್ರದಲ್ಲೇ ಅವರು ನಿರೂಪ್ ಹಾಗೂ ಸಾಯಿಕುಮಾರ್ ಕಾಂಬಿನೇಷನ್ ಆಯ್ಕೆ ಮಾಡಿಕೊಂಡಿದ್ದಾರೆ.
‘ರಂಗಿತರಂಗ’ ಚಿತ್ರದಲ್ಲಿ ಸಾಯಿಕುಮಾರ್ ಹಾಗೂ ನಿರೂಪ್ ಆರಂಭದಲ್ಲಿ ಉತ್ತಮವಾಗಿದ್ದು, ಕೊನೆಗೆ ಸತ್ಯ ಗೊತ್ತಾದಾಗ ವೈರಿಗಳಾಗುತ್ತಾರೆ. ಹೊಸ ಸಿನಿಮಾದಲ್ಲಿ ಸಾಯಿಕುಮಾರ್ ಅವರು ನಿರೂಪ್ ತಂದೆ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಈ ಚಿತ್ರದ ಟೈಟಲ್ ಮತ್ತು ಮೊದಲ ಲುಕ್ ಫೆಬ್ರವರಿ 6ಕ್ಕೆ ರಿಲೀಸ್ ಆಗಲಿದೆ ಎಂದು ತಂಡ ಮಾಹಿತಿ ಹಂಚಿಕೊಂಡಿದೆ.
ಇದನ್ನೂ ಓದಿ: ನಿರೂಪ್ ಭಂಡಾರಿ ಜೊತೆ ಬೃಂದಾ ಆಚಾರ್ಯ ಹೊಸ ಸಿನಿಮಾ; ಶಿವಾನಿಗೆ ಸಖತ್ ಚಾನ್ಸ್
ಸತ್ಯ ಮತ್ತು ಸುಳ್ಳಿನ ನಡುವೆ ಕಥೆ ಸಾಗುತ್ತದೆ. ಸಖತ್ ಕಾಮಿಡಿ ಸಿನಿಮಾದಲ್ಲಿ ಇರಲಿದೆ. ಫ್ಯಾಮಿಲಿ ಎಂಟರ್ ಟೈನರ್ ಕಥಾಹಂದರವನ್ನು ಚಿತ್ರ ಹೊಂದಿದೆ. ‘ಅಂಕಿತ್ ಸಿನಿಮಾಸ್’ ಅಡಿಯಲ್ಲಿ ಅಂಕಿತ್ ಸೋನಿಗಾರ ಚಿತ್ರ ನಿರ್ಮಿಸಿಸುತ್ತಿದ್ದಾರೆ. ಪ್ರಶಾಂತ್ ಮುಲಗೆ ನಿರ್ಮಾಣದಲ್ಲಿ ಕೈ ಜೋಡಿಸುತ್ತಿದ್ದಾರೆ. ಸಚಿನ್ ಬಸ್ರೂರ್ ಸಂಗೀತ ಸಂಯೋಜನೆ ಚಿತ್ರಕ್ಕೆ ಇದೆ. ಉಜ್ವಲ್ ಚಂದ್ರ ಸಂಕಲನ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಉಲ್ಲಾಸ್ ಹೈದೂರು ಕಲಾ ನಿರ್ದೇಶನ ಈ ಚಿತ್ರಕ್ಕೆ ಇದೆ. ಸದ್ಯ ಚಿತ್ರದ ಶೂಟಿಂಗ್ ಕಡೆ ಚಿತ್ರತಂಡ ಗಮನ ಹರಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:01 am, Sat, 27 January 24