ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ಇಷ್ಟು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಇದ್ದ ನಟಿ ಪವಿತ್ರಾ ಗೌಡ ಜೈಲು ಪಾಲು ಆಗಿದ್ದಾರೆ. ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಇಂದು (ಜೂನ್ 20) ಎಲ್ಲ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಪ್ರಮುಖ ಆರೋಪಿ ಆಗಿರುವ ಪವಿತ್ರಾ ಗೌಡ ಅವರಿಗೆ ನ್ಯಾಯಾಂಗ ಬಂಧನ (Judicial Custody) ವಿಧಿಸಲಾಗಿದೆ. ಇನ್ಮುಂದೆ ಪವಿತ್ರಾ ಗೌಡ (Pavithra Gowda) ಪರಪ್ಪನ ಅಗ್ರಹಾರದಲ್ಲಿ ಕಾಲ ಕಳೆಯಬೇಕಿದೆ. ಈ ಪ್ರಕರಣದಲ್ಲಿ ಅವರು ಎ1 ಆಗಿರುವ ಕಾರಣ ಕಾನೂನಿನ ಸಂಕಷ್ಟ ಹೆಚ್ಚಾಗಿದೆ. ದರ್ಶನ್, ವಿನಯ್ ಮುಂತಾದವರು ಕೂಡ ಈ ಕೇಸ್ನಲ್ಲಿ ಆರೋಪಿಗಳಾಗಿದ್ದಾರೆ.
ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯು ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳಿಸಿದ್ದ ಎಂಬ ಆರೋಪಿ ಇದೆ. ಆದ್ದರಿಂದ ಆತನಿಗೆ ಬುದ್ಧಿ ಕಲಿಸಲು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು ಹತ್ಯೆ ಮಾಡಲಾಯಿತು. ಈ ಕೇಸ್ನಲ್ಲಿ 19 ಜನರನ್ನು ಪೊಲೀಸರು ಬಂಧಿಸಿದ್ದಾರೆ. ದರ್ಶನ್, ಪವಿತ್ರಾ ಗೌಡ, ಪವನ್, ವಿನಯ್, ಪ್ರದೋಶ್, ನಾಗರಾಜ್, ಲಕ್ಷ್ಮಣ್ ಮುಂತಾದವರು ಪ್ರಮುಖ ಆರೋಪಿಗಳು.
ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಈ ಕೇಸ್ನ ವಿಚಾರಣೆ ನಡೆಯುತ್ತಿದೆ. ಪೊಲೀಸರು ಈಗಾಗಲೇ ಸಾಕಷ್ಟು ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಅನೇಕ ಸ್ಥಳಗಳಿಗೆ ತೆರಳಿ ಮಹಜರು ಮಾಡಲಾಗಿದೆ. ಪವಿತ್ರಾ ಗೌಡ ಮನೆಯಲ್ಲೂ ಮಹಜರು ಮಾಡಲಾಗಿತ್ತು. ತನಿಖೆ ಇನ್ನೂ ಪ್ರಗತಿಯಲ್ಲಿದೆ. ಪವಿತ್ರಾ ಗೌಡಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶಿಸಿದೆ.
ಇದನ್ನೂ ಓದಿ: ಡಿಎನ್ಎ ಟೆಸ್ಟ್ ಮಾಡಿಸಲು ಆಸ್ಪತ್ರೆಗೆ ತೆರಳುವಾಗಿ ಟೆನ್ಷನ್ ಆದ ಪವಿತ್ರಾ ಗೌಡ
ಪವಿತ್ರಾ ಗೌಡಗೆ ನ್ಯಾಯಾಂಗ ಬಂಧನ ವಿಧಿಸಿರುವ ಹಿನ್ನೆಲೆಯಲ್ಲಿ ಮಗಳು ಖುಷಿ ಗೌಡ ಕೋರ್ಟ್‌ಗೆ ಆಗಮಿಸಿದ್ದಾರೆ. ಜೈಲಾದ ಕಾರಣ ಪವಿತ್ರಾ ಗೌಡರನ್ನು ಮಾತನಾಡಿಸಲು ಮಗಳು ಮತ್ತು ಅಜ್ಜಿ ಬಂದಿದ್ದಾರೆ. ತನಿಖೆ ಇನ್ನೂ ಬಾಕಿ ಇರುವ ಕಾರಣದಿಂದ ದರ್ಶನ್, ವಿನಯ್, ಪ್ರದೋಶ್, ನಾಗರಾಜ್, ಲಕ್ಷ್ಮಣ್ ಹಾಗೂ ಧನರಾಜ್‌ನನ್ನು 4 ದಿನಗಳ ಕಾಲ ಮತ್ತೆ ಪೊಲೀಸ್ ಕಸ್ಟಡಿಗೆ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.