777 Charlie: ಶ್ವಾನ ಪ್ರೇಮಿಗಳೇ ಹುಷಾರ್! ‘777 ಚಾರ್ಲಿ’ ಚಿತ್ರದ ಒಂದು ತಪ್ಪಿನಿಂದ ನಾಯಿಗಳಿಗೆ ಹೆಚ್ಚಬಹುದು ಸಂಕಷ್ಟ
777 Charlie | Stray Dog: ‘777 ಚಾರ್ಲಿ’ ಸಿನಿಮಾ ನೋಡಿದ ಬಳಿಕ ಬಹುತೇಕರಿಗೆ ವಿದೇಶಿ ತಳಿಯ ಶ್ವಾನಗಳ ಮೇಲೆ ಪ್ರೀತಿ ಉಕ್ಕುತ್ತಿದೆ. ಇದರಿಂದ ಚಿತ್ರದ ಆಶಯವೇ ಬುಡಮೇಲು ಆಗುತ್ತಿದೆಯೇ ಎಂಬ ಪ್ರಶ್ನೆ ಎದುರಾಗಿದೆ.
ಬಾಕ್ಸ್ ಆಫೀಸ್ನಲ್ಲಿ ‘777 ಚಾರ್ಲಿ’ (777 Charlie) ಸಿನಿಮಾ ಗೆದ್ದಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ಪರಭಾಷೆಯ ಪ್ರೇಕ್ಷಕರು ಕೂಡ ಈ ಎಮೋಷನಲ್ ಕಥೆಗೆ ಮನಸೋತಿದ್ದಾರೆ. ಶಾನ್ವ ಮತ್ತು ಮನುಷ್ಯರ ನಡುವಿನ ಸಂಬಂಧವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವಲ್ಲಿ ‘777 ಚಾರ್ಲಿ’ ಚಿತ್ರ ಯಶಸ್ವಿ ಆಗಿದೆ. ಇದರಿಂದ ನಟ/ನಿರ್ಮಾಪಕ ರಕ್ಷಿತ್ ಶೆಟ್ಟಿ (Rakshit Shetty) ಅವರ ವೃತ್ತಿಜೀವನಕ್ಕೆ ದೊಡ್ಡ ಮೈಲೇಜ್ ಸಿಕ್ಕಿದೆ. ಪ್ರೇಕ್ಷಕರಿಗೆ ಅವರ ಮೇಲೆ ಇದ್ದ ಅಭಿಮಾನ ಇನ್ನಷ್ಟು ಹೆಚ್ಚಿದೆ. ಚೊಚ್ಚಲ ನಿರ್ದೇಶನದಲ್ಲಿಯೇ ಕಿರಣ್ ರಾಜ್ (Director Kiran Raj) ಕೂಡ ಗಮನ ಸೆಳೆದಿದ್ದಾರೆ. ಇಷ್ಟೆಲ್ಲ ಮೆಚ್ಚುಗೆಗೆ ಪಾತ್ರವಾಗಿರುವ ಸಿನಿಮಾದಲ್ಲಿ ನಾಯಿಯೇ ಹೈಲೈಟ್. ಆದರೆ ಈಗ ಶ್ವಾನಗಳಿಗೆ ಒಂದು ಸಮಸ್ಯೆ ಎದುರಾಗುವ ಸಂಭವ ಇದೆ. ಅದಕ್ಕೆ ಪರೋಕ್ಷವಾಗಿ ‘777 ಚಾರ್ಲಿ’ ಸಿನಿಮಾ ಕಾರಣ ಆಗುತ್ತಿದೆ ಎಂಬುದು ವಿಪರ್ಯಾಸ.
ಬೀದಿನಾಯಿಗಳನ್ನು ಸಾಕಿ, ಅವುಗಳಿಗೆ ಕಾಳಜಿ ತೋರಿಸಿ ಎಂಬ ಮೆಸೇಜ್ ‘777 ಚಾರ್ಲಿ’ ಚಿತ್ರದಲ್ಲಿ ಇದೆ. ಆದರೆ ಇಡೀ ಸಿನಿಮಾದಲ್ಲಿ ಮಿಂಚಿರುವುದು ಲ್ಯಾಬ್ರಡಾರ್ ತಳಿಯ ನಾಯಿ. ಇದರ ಮುದ್ದು ಮೊಗಕ್ಕೆ ಜನರು ಮನಸೋತಿದ್ದಾರೆ. ಸಿನಿಮಾ ನೋಡಿದ ಬಳಿಕ ಬಹುತೇಕರು ಲ್ಯಾಬ್ರಡಾರ್ ಜಾತಿ ನಾಯಿಯನ್ನೇ ಸಾಕಲು ಆಸೆಪಡುತ್ತಿದ್ದಾರೆ. ಇದರಿಂದ ಬೀದಿನಾಯಿಗಳನ್ನು ಕೇಳುವವರೇ ಇಲ್ಲದಂತೆ ಆಗುತ್ತಿದೆ. ಹಾಗಾಗಿ ಚಿತ್ರದ ಆಶಯವೇ ಬುಡಮೇಲು ಆಗುತ್ತಿದೆಯಲ್ಲ ಎಂಬ ಪ್ರಶ್ನೆ ಎದುರಾಗಿದೆ.
ಎಲ್ಲರೂ ವಿದೇಶಿ ತಳಿಯ ನಾಯಿಯೇ ಬೇಕು ಎಂದು ಬಯಸುವುದರಿಂದ ಬೀದಿ ನಾಯಿಗೆ ಮಾತ್ರವಲ್ಲದೇ ಜಾತಿ ನಾಯಿಗಳಿಗೂ ಸಂಕಷ್ಟ ಎದುರಾಗುತ್ತದೆ. ಬೇಡಿಕೆ ಹೆಚ್ಚಿದಾಗ ಬೇಗ ಮರಿಗಳನ್ನು ಪಡೆಯಲು ಕೆಲವರು ಇನ್ಬ್ರೀಡಿಂಗ್ Inbreeding ಮಾಡಿಸುತ್ತಾರೆ. ಅದರಿಂದ ಸಿನಿಮಾದಲ್ಲಿ ತೋರಿಸಿದ ರೀತಿಯಲ್ಲೇ ಜಾತಿ ನಾಯಿಗಳಿಗೆ ಕ್ಯಾನ್ಸರ್ ಮುಂತಾದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ.
‘777 ಚಾರ್ಲಿ’ ಸಿನಿಮಾದಲ್ಲಿಯೂ ಕಥಾನಾಯಕ ಲ್ಯಾಬ್ರಡಾರ್ ಬದಲಿಗೆ ದೇಸಿ ತಳಿಯ ಬೀದಿ ನಾಯಿಯನ್ನೇ ಸಾಕುವಂತೆ ತೋರಿಸಿದ್ದರೆ ಜನರಿಗೆ ಹೆಚ್ಚು ಮನವರಿಕೆ ಆಗುತ್ತಿತ್ತು. ಆದರೆ ಈ ವಿಚಾರದಲ್ಲಿ ಚಿತ್ರತಂಡ ಪ್ರೇಕ್ಷಕರನ್ನು ಕೊಂಚ ದಾರಿತಪ್ಪಿಸಿದಂತೆ ಆಗುತ್ತಿದೆ. ವಿದೇಶಿ ತಳಿಯ ಜಾತಿ ನಾಯಿಯನ್ನು ವಿಜೃಂಭಿಸಿದ ಬಳಿಕ ಎಲ್ಲರೂ ಬೀದಿನಾಯಿಯನ್ನು ಸಾಕಬೇಕು ಎಂಬ ಸಂದೇಶ ಹೇಳಿದರೆ ಅದನ್ನು ಕೇಳುವವರ ಸಂಖ್ಯೆ ಕಡಿಮೆ ಎನಿಸುತ್ತದೆ.
ಕ್ಷಣಿಕ ಉತ್ಸಾಹಕ್ಕೆ ಸಾಕದಿರಿ:
ಒಂದು ವೇಳೆ ವಿದೇಶಿ ತಳಿಯ ನಾಯಿಯನ್ನೇ ಸಾಕುವುದಾದರೂ ಕೂಡ ಅದಕ್ಕೂ ಮುನ್ನ ಸರಿಯಾಗಿ ಆಲೋಚಿಸಬೇಕು. ಸಿನಿಮಾ ನೋಡಿದ ಬಳಿಕ ನಾಯಿ ಸಾಕಬೇಕು ಎಂಬ ಉತ್ಸಾಹ ಏಕಾಏಕಿ ಮೂಡಬಹುದು. ಆದರೆ ಕೊನೆವರೆಗೂ ಅದನ್ನು ತುಂಬ ಕಾಳಜಿಯಿಂದ ನೋಡಿಕೊಳ್ಳುವ ತಾಳ್ಮೆ ನಿಮ್ಮಲ್ಲಿ ಇರಬೇಕು. ನಾಯಿಗೆ ಅಗತ್ಯವಾದಷ್ಟು ಸಮಯ ನೀಡಬೇಕು. ಇಲ್ಲದಿದ್ದರೆ ಅವುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.