ನಟ, ರಾಜಕಾರಣಿ ಜಗ್ಗೇಶ್ (Jaggesh) ಆರೋಗ್ಯ ಕೆಟ್ಟಿರುವ ಕುರಿತು ನಿನ್ನೆ (ಸೆಪ್ಟೆಂಬರ್ 29) ಸುದ್ದಿಗಳು ಹರಿದಾಡಿದ್ದವು. ಇಂದು (ಸೆಪ್ಟೆಂಬರ್ 30) ತಮ್ಮ ನಿವಾಸದ ಬಳಿ ಸುದ್ದಿಗೋಷ್ಠಿ ಕರೆದಿದ್ದ ಜಗ್ಗೇಶ್, ತಮ್ಮ ಆರೋಗ್ಯ, ‘ತೋತಾಪುರಿ 2’ ಸಿನಿಮಾ, ಕಾವೇರಿ ವಿವಾದ, ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ನಟರ ಮೇಲೆ ದೂಷಣೆ, ಸರ್ಕಾರ ಕಾವೇರಿ ವಿವಾದವನ್ನು ನಿಭಾಯಿಸುತ್ತಿರುವ ರೀತಿ, ಸಿನಿಮಾ ನಟರ ಸಂಕಷ್ಟಗಳು ಇನ್ನೂ ಹಲವಾರು ವಿಷಯಗಳ ಕುರಿತಾಗಿ ಮಾತನಾಡಿದ್ದಾರೆ.
ವಿಶೇಷವಾಗಿ ಸಿನಿಮಾ ನಟರನ್ನು ಕಾವೇರಿ ವಿವಾದದ ಕುರಿತ ಹೋರಾಟದಲ್ಲಿ ನೇತೃತ್ವ ವಹಿಸುವಂತೆ ಒತ್ತಾಯಿಸುವ ಕುರಿತಾಗಿ ಹಾಗೂ ಹೋರಾಟಕ್ಕೆ ಬಾರದ ನಟರ ಮೇಲೆ ದೂಷಣೆ ಮಾಡುತ್ತಿರುವವರ ಕುರಿತು ಜಗ್ಗೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ”ಯಾವ ಸಿನಿಮಾ ನಟರು ಬಂದಿಲ್ಲವೋ ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಲಾಗುತ್ತಿದೆ, ಅಂಥಹವರಿಗೆ ನಟರ ಕಷ್ಟಗಳೇನು ಎಂಬುದು ಗೊತ್ತಿಲ್ಲ. ಕನ್ನಡ ಸಿನಿಮಾಗಳಿಗೆ ಬೆಂಬಲಿಸೊಲ್ಲ, ಒಂದು ಕನ್ನಡ ಪತ್ರಿಕೆ ಓದಲ್ಲ, ಕನ್ನಡ ಸಾಹಿತ್ಯ ಅಂದ್ರೆ ಗೊತ್ತಿಲ್ಲ. ಆದರೆ ಇಂಥಹಾ ವಿಷಯಗಳು ಬಂದಾಗ ಮಾತ್ರ ಇತರರನ್ನು ಕನ್ನಡ ವಿರೋಧಿಗಳಂತೆ ಬಿಂಬಿಸಲಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು ಜಗ್ಗೇಶ್.
’’ಬಹಳಷ್ಟು ಜನ ಕನ್ನಡ ಪ್ರೇಮದ ಕುರಿತು ಬರೀ ನಟನೆ ಮಾಡುತ್ತಿದ್ದಾರೆ. ಹಾಗೆಲ್ಲ ಮಾಡಬೇಡಿ. ಎಷ್ಟು ಜನ ಬೆಂಗಳೂರಿಗರು ಕಾವೇರಿ ನೀರು ಕುಡಿಯುತ್ತಿದ್ದಾರೆ ಎಲ್ಲರೂ ಯಾಕೆ ಎದ್ದು ಹೋರಾಟಕ್ಕೆ ಬರಲಿಲ್ಲ. ಈ ಪ್ರಶ್ನೆ ನಾವು ಕೇಳಬಹುದಲ್ಲವೆ? ಎಲ್ಲ ಬಿಟ್ಟು ಕಲಾವಿದರನ್ನು ಮಾತ್ರವೇ ಪ್ರಶ್ನೆ ಮಾಡಲಾಗುತ್ತಿದೆ. ನಟರು ತಮ್ಮದೇ ಆದ ಕಷ್ಟಗಳಲ್ಲಿ ನರಳುತ್ತಿದ್ದಾರೆ. ಎಷ್ಟೋ ಜನ ಕಲಾವಿದರು ಕಷ್ಟದಲ್ಲಿದ್ದಾರೆ. ಬೇರೆ ಭಾಷೆಯ ನಟರು ಇಲ್ಲಿ ಕೋಟಿಗಟ್ಟಲೆ ಕಲೆಕ್ಷನ್ ತೆಗೆದುಕೊಂಡು ಮೆರೆಯುತ್ತಿದ್ದಾರೆ. ಪರಭಾಷೆ ಸಿನಿಮಾಗಳನ್ನು ನೋಡುವವರ ಮುಖಕ್ಕೆ ಉಗಿಯಬೇಕು” ಎಂದು ಜಗ್ಗೇಶ್ ತೀವ್ರ ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ:‘ಯುಗ ಸೃಷ್ಟಿಯ ಸಮಯದಿಂದ ನಮ್ಮ ದೇಶದ ಹೆಸರು ಭಾರತ’: ‘ಇಂಡಿಯಾ’ ಚರ್ಚೆ ಬಗ್ಗೆ ಜಗ್ಗೇಶ್ ಅಭಿಪ್ರಾಯ
”ಇಲ್ಲಿನವರೇ ಪರಭಾಷೆಗಳಿಗೆ ಬೆಂಬಲ ನೀಡುತ್ತಿದ್ದಾರೆ. ಕೋಟಿಗಟ್ಟಲೆ ಬ್ಯುಸಿನೆಸ್ ಕೊಡ್ತೀರ ಬೇರೆ ಭಾಷೆಯವರಿಗೆ, ಈಗ ಎಂಥಹಾ ಸ್ವಾಭಿಮಾನ ಬಂದುಬಿಟ್ಟಿದೆ ನಿಮಗೆ. ಬೇರೆ ಭಾಷೆಯ ನಟರನ್ನು, ಸಿನಿಮಾಗಳನ್ನು ಬೆಂಬಲಿಸುತ್ತಿದ್ದಾರೆ. ಆದರೆ ಗೂಬೆ ಕೂರಿಸುವುದು ಮಾತ್ರ ಕನ್ನಡ ಸಿನಿಮಾ ನಟರುಗಳ ಮೇಲೆ. ನಾನು ಎಲ್ಲ ಕನ್ನಡಿಗರಿಗೂ ವಿನಂತಿ ಮಾಡುತ್ತೇನೆ, ಪಾದಮುಟ್ಟಿ ನಮಸ್ಕರಿಸಿ ಹೇಳುತ್ತೀನಿ. ಕಾವೇರಿ ವಿವಾದ ಕಾನೂನು ಪ್ರಕ್ರಿಯೆ, ಕಲಾವಿದರ ಪ್ರಕ್ರಿಯೆ ಅಲ್ಲ” ಎಂದರು ಜಗ್ಗೇಶ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ