‘ಯುಗ ಸೃಷ್ಟಿಯ ಸಮಯದಿಂದ ನಮ್ಮ ದೇಶದ ಹೆಸರು ಭಾರತ’: ‘ಇಂಡಿಯಾ’ ಚರ್ಚೆ ಬಗ್ಗೆ ಜಗ್ಗೇಶ್ ಅಭಿಪ್ರಾಯ
ದೇಶದ ಹೆಸರು ಬದಲಾವಣೆ ಬಗ್ಗೆ ಚರ್ಚೆ ಜೋರಾಗಿದೆ. ‘ಇಂಡಿಯಾ’ ಬದಲು ‘ಭಾರತ್’ ಎಂದು ಕರೆಯಬೇಕು ಎಂಬ ವಾದಕ್ಕೆ ಅನೇಕ ಸೆಲೆಬ್ರಿಟಿಗಳು ಸಹಮತ ಸೂಚಿಸುತ್ತಿದ್ದಾರೆ. ‘ನವರಸ ನಾಯಕ’ ಜಗ್ಗೇಶ್ ಕೂಡ ಈ ಚರ್ಚೆಯಲ್ಲಿ ತಮ್ಮ ಅನಿಸಿಕೆ ಏನು ಎಂಬುದನ್ನು ತಿಳಿಸಿದ್ದಾರೆ. ಇನ್ನೂ ಹಲವು ಸೆಲೆಬ್ರಿಟಿಗಳು ಈ ಕುರಿತು ಪೋಸ್ಟ್ ಮಾಡಿದ್ದಾರೆ.
ಸ್ಯಾಂಡಲ್ವುಡ್ ನಟ ಜಗ್ಗೇಶ್ (Jaggesh) ಅವರು ರಾಜಕಾರಣಿಯಾಗಿಯೂ ಸಕ್ರಿಯರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಈಗ ಅವರು ರಾಷ್ಟ್ರದ ಹೆಸರಿನ ಬಗ್ಗೆ ತಮ್ಮ ಅನಿಸಿಕೆ ಏನು ಎಂಬುದನ್ನು ತಿಳಿಸಿದ್ದಾರೆ. ಇಂಡಿಯಾ (India) ಎಂಬ ಹೆಸರನ್ನು ಭಾರತ್ (Bharat) ಎಂದು ಬದಲಾಯಿಸಲಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ. ಆ ಸಂದರ್ಭದಲ್ಲಿ ನಟ ಜಗ್ಗೇಶ್ ಕೂಡ ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ. ‘ಯುಗ ಸೃಷ್ಟಿಯ ಸಮಯದಿಂದ ನಮ್ಮ ದೇಶದ ಹೆಸರು ಭಾರತ’ ಎಂದು ಜಗ್ಗೇಶ್ ಅವರು ಪೋಸ್ಟ್ ಮಾಡಿದ್ದಾರೆ. ಜಗ್ಗೇಶ್ ಮಾತ್ರವಲ್ಲದೇ ಕಂಗನಾ ರಣಾವತ್, ಅಮಿತಾಭ್ ಬಚ್ಚನ್ ಮುಂತಾದ ಕಲಾವಿದರು ಕೂಡ ಈ ಕುರಿತು ಅಸಿನಿಕೆ ಹಂಚಿಕೊಂಡಿದ್ದಾರೆ. ಆ ಮೂಲಕ ಚರ್ಚೆ ಜೋರಾಗಿದೆ.
‘ಸಹಸ್ರಾರು ಏಕೆ, ಯುಗ ಸೃಷ್ಟಿಯ ಸಮಯದಿಂದ ನಮ್ಮ ದೇಶದ ಹೆಸರು ಭಾರತ. ಬೆಳಗಲಿ ಭಾರತ ಭವ್ಯವಾಗಿ. ಭಗವದ್ಗೀತೆಯ ಭೋದನೆಯಂತೆ. ಉಳಿಯಲಿ ಸನಾತನ ಧರ್ಮ ಭಾರತವಾಸಿಯ ರಕ್ತದ ಕಣಕಣದಲ್ಲಿ. ಬಿಡಿಸಿಕೊಳ್ಳಲಿ ಸಹಸ್ರ ಸಂವತ್ಸರ ದಾಸ್ಯಗುಣದಿಂದ. ಶಾಶ್ವತ ವಿಶ್ವ ಗುರುವಾಗಲಿ ಭಾರತ. ಸಂಭವಾಮಿ ಯುಗೆ ಯುಗೆ. ಜೈ ಶ್ರೀರಾಮ’ ಎಂದು ಜಗ್ಗೇಶ್ ಅವರು ಟ್ವೀಟ್ ಮಾಡಿದ್ದಾರೆ. ‘ಜಯ ಭಾರತ ಜನನಿಯ ತನುಜಾತೆ. ಜಯ ಹೇ ಕರ್ನಾಟಕ ಮಾತೆ. ಭಾರತ್ ಮಾತಾ ಕೀ ಜೈ’ ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದ್ದು ಅದನ್ನು ಜಗ್ಗೇಶ್ ರೀಟ್ವೀಟ್ ಮಾಡಿದ್ದಾರೆ.
ಜಗ್ಗೇಶ್ ಟ್ವೀಟ್:
#ಭಾರತ ಸಹಸ್ರಾರು ಏಕೆ ಯುಗ ಸೃಷ್ಠಿಯ ಸಮಯದಿಂದ ನಮ್ಮ ದೇಶದ ಹೆಸರು #ಭಾರತ. ಬೆಳಗಲಿ #ಭಾರತ ಭವ್ಯವಾಗಿ #ಭಗದ್ಗೀತ ಭೋಧನೆಯಂತೆ. ಉಳಿಯಲಿ #ಸನಾತನಧರ್ಮ ಭಾರತವಾಸಿಯ ರಕ್ತದ ಕಣಕಣದಲ್ಲಿ. “ಬಿಡಿಸಿಕೊಳ್ಳಲಿ ಸಹಸ್ರ ಸಂವತ್ಸರ ದಾಸ್ಯಗುಣದಿಂದ” ಶಾಶ್ವತ ವಿಶ್ವ ಗುರುವಾಗಲಿ #ಭಾರತ “ಸಂಭವಾಮಿ ಯುಗೆ ಯುಗೆ” ಜೈ ಶ್ರೀರಾಮ🙏 pic.twitter.com/u0DYtR3mPy
— ನವರಸನಾಯಕ ಜಗ್ಗೇಶ್ (@Jaggesh2) September 6, 2023
‘ಇಂಡಿಯಾ’ ಎಂಬ ಹೆಸರಿನ ಬಗ್ಗೆ ಕಂಗನಾ ರಣಾವತ್ ಕೂಡ ಟ್ವೀಟ್ ಮಾಡಿದ್ದಾರೆ. ‘ಈ ಹೆಸರಿನಲ್ಲಿ ಅಂಥ ಪ್ರೀತಿ ಏನಿದೆ’ ಎಂದು ಅವರು ಪ್ರಶ್ನಿಸಿದ್ದಾರೆ. ಇದು ಬ್ರಿಟಿಷರು ಇಟ್ಟ ಹೆಸರು ಎಂದು ಕಂಗನಾ ಹೇಳಿದ್ದಾರೆ. ‘ಮಹಾಭಾರತ ಕಾಲದಿಂದ ಕುರುಕ್ಷೇತ್ರ ಯುದ್ಧದಲ್ಲಿ ಭಾಗಿಯಾದ ಎಲ್ಲ ರಾಜ್ಯಗಳು ಭಾರತ ಖಂಡದಲ್ಲಿ ಬರುತ್ತವೆ. ಆದರೆ ಬ್ರಿಟಿಷರು ಯಾಕೆ ಇಂಧು, ಸಿಂಧು ಅಂತ ಕರೆದರು’ ಎಂದು ಕಂಗನಾ ಪ್ರಶ್ನಿಸಿದ್ದಾರೆ. ಬ್ರಿಟಿಷರಿಗೆ ಉಚ್ಛಾರ ಮಾಡಲು ಬಾರದ ಕಾರಣ ಈ ರೀತಿ ಆಯಿತು ಎಂದು ಅವರು ಹೇಳಿದ್ದಾರೆ.
‘ಇಂಡಿಯಾ’ ಹೆಸರು ಬದಲಾವಣೆ ಚರ್ಚೆ ಬೆನ್ನಲ್ಲೇ ‘ಭಾರತ್ ಮಾತಾ ಕಿ ಜೈ’ ಎಂದ ಅಮಿತಾಭ್ ಬಚ್ಚನ್
ದೇಶದ ಹೆಸರು ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಸಮಯದಲ್ಲಿ ನಟ ಅಮಿತಾಭ್ ಬಚ್ಚನ್ ಅವರು ‘ಭಾರತ್ ಮಾತಾ ಕೀ ಜೈ’ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ‘INDIA’ ಎಂಬ ಮೈತ್ರಿಕೂಟ ಮಾಡಿಕೊಂಡಿವೆ. ಆ ಕಾರಣದಿಂದಲೇ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಹೆಸರನ್ನು ಭಾರತ್ ಎಂದು ಬದಲಾಯಿಸುತ್ತಿದೆ ಎಂದು ಕೆಲವರು ಟೀಕಿಸಿದ್ದಾರೆ. ಅಮಿತಾಭ್ ಬಚ್ಚನ್ ಅವರಿಗೂ ‘INDIA’ ಮೈತ್ರಿಕೂಟದ ಬಗ್ಗೆ ಅಸಮಾಧಾನ ಇರಬಹುದೇ ಎಂದು ಅನೇಕರು ಗುಮಾನಿ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.