
ಕಿರುತೆರೆ ಕಲಾವಿದ ಮಡೆನೂರು ಮನು (Madenur Manu) ವಿರುದ್ಧ ಅತ್ಯಾಚಾರ ಆರೋಪ ಎದುರಾಗಿದೆ. ಮಹಿಳೆಯೊಬ್ಬರು ನೀಡಿದ ದೂರಿನ ಮೇಲೆ ಮನು ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಸನ ತಾಲೂಕಿನ ಶಾಂತಿಗ್ರಾಮದ ಬಳಿಯ ಮಡೆನೂರಿನಲ್ಲಿ ಮನು ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರಿಂದ (Bengaluru Police) ವಶಕ್ಕೆ ಪಡೆಯಲಾಗಿದೆ. ಮನು ಅವರನ್ನು ಹಾಸನದಿಂದ ಬೆಂಗಳೂರಿಗೆ ಕರೆತರಲಾಗುತ್ತಿದೆ. ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸಿದ ಬಳಿಕ ಕಾನೂನು ಪ್ರಕ್ರಿಯೆ ಮುಂದುವರಿಸಲಾಗುವುದು. ಬಳಿಕ ಇಂದು (ಮೇ 22) ರಾತ್ರಿ ಬಂಧಿಸಿ ಜಡ್ಜ್ ಎದುರು ಹಾಜರುಪಡಿಸುವ ಸಾಧ್ಯತೆ ಇದೆ.
ಮಡೆನೂರು ಮನು ಮತ್ತು ಯುವತಿ ಮಧ್ಯೆ 2018ರಲ್ಲಿ ಪರಿಚಯ ಬೆಳೆದಿತ್ತು. ಮನು ಅವರೇ ಯುವತಿಗೆ ಬಾಡಿಗೆ ಮನೆ ಹುಡುಕಿಕೊಟ್ಟಿದ್ದ. ‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಅವರು ಒಟ್ಟಾಗಿ ಕಾಣಿಸಿಕೊಂಡಿದ್ದರು. ಯುವತಿ ಜೊತೆಗೆ ಆಪ್ತತೆ ಬೆಳೆಸಿಕೊಂಡಿದ್ದ ಮನುಗೆ ಈ ಮೊದಲೇ ಮದುವೆ ಆಗಿ ಒಂದು ಮಗು ಸಹ ಇತ್ತು! ಮನು ಜೊತೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದಾಗ ಅತ್ಯಾಚಾರ ನಡೆದಿದೆ ಎಂದು ಯುವತಿ ಆರೋಪ ಹೊರಿಸಿದ್ದಾರೆ.
‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾದಲ್ಲಿ ಮಡೆನೂರು ಮನು ಅವರು ಹೀರೋ ಆಗಿ ನಟಿಸಿದ್ದಾರೆ. ಆ ಸಿನಿಮಾ ಮೇ 23ರಂದು ಬಿಡುಗಡೆ ಆಗಲಿದೆ. ಬಿಡುಗಡೆಗೆ ಇನ್ನು ಒಂದು ದಿನ ಬಾಕಿ ಇದೆ ಎನ್ನುವಾಗ ಅವರಿಗೆ ವಿವಾದ ಎದುರಾಗಿದೆ. ಸಿನಿಮಾದ ರಿಲೀಸ್ ಸಂಭ್ರಮದಲ್ಲಿ ಭಾಗಿಯಾಗಬೇಕಿದ್ದ ಅವರು ಈಗ ಪೊಲೀಸರ ಅತಿಥಿ ಆಗುವಂತಾಗಿದೆ. ತಮ್ಮ ಮೇಲಿನ ಆರೋಪಗಳಿಗೆ ಮನು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ‘ಅತ್ಯಾಚಾರ ಆಗಿದೆ, ಎರಡು ಬಾರಿ ಪ್ರೆಗ್ನೆಂಟ್ ಆಗಿದ್ದೆ’; ‘ಕಾಮಿಡಿ ಕಿಲಾಡಿ’ ಕಲಾವಿದರ ಜಗಳ ಬೀದಿಗೆ
ಫೇಸ್ ಬುಕ್ ಲೈವ್ ಮೂಲಕ ಮಡೆನೂರು ಮನು ಸ್ಪಷ್ಟನೆ ನೀಡಿದ್ದಾರೆ. ‘ಹರಿದಾಡ್ತಿರೋ ವಿಚಾರದ ಬಗ್ಗೆ ಸಾಕ್ಷಿ ಸಮೇತ ಕ್ಲಾರಿಟಿ ಕೊಡುತ್ತೇನೆ. ಇದರ ಹಿಂದೆ ಯಾರೆಲ್ಲ ಇದಾರೆ ಎಂಬುದನ್ನು ಹೇಳುತ್ತೇನೆ. ಸಿನಿಮಾ ನಿಲ್ಲಿಸ್ಬೇಕು ಅಂತ ಒದ್ದಾಡ್ತಿದಾರೆ. ಈ ಸಿನಿಮಾ ಪ್ರಮೋಷನ್ ನೋಡಿ ಯಾರೆಲ್ಲ ನನಗೆ ಬೆದರಿಕೆ ಹಾಕ್ತಿದಾರೆ ಎಂಬುದನ್ನು ಸಾಕ್ಷಿ ಸಮೇತ ತೋರಿಸುತ್ತೇನೆ. ಕಷ್ಟಪಟ್ಟು ಸಿನಿಮಾ ಮಾಡಿದೀವಿ. ಸಿನಿಮಾಗೆ ಯಾವುದೇ ತೊಂದರೆ ಆಗಬಾರದು’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:37 pm, Thu, 22 May 25