ಉರಿಗೌಡ-ನಂಜೇಗೌಡ ಟೈಟಲ್ ನೊಂದಾಯಿಸಿದ ಮುನಿರತ್ನ: ಚಿತ್ರಕತೆ ಸಿಟಿ ರವಿಯದ್ದಾ? ಎಂದ ಎಚ್​ಡಿಕೆ

|

Updated on: Mar 17, 2023 | 7:48 PM

ಬಿಜೆಪಿ-ಜೆಡಿಎಸ್-ಕಾಂಗ್ರೆಸ್ ಮೂರು ಪಕ್ಷಗಳ ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿರುವ ಉರಿಗೌಡ-ನಂಜೇಗೌಡ ಪಾತ್ರಗಳನ್ನು ಆಧರಿಸಿ ಸಿನಿಮಾ ನಿರ್ಮಾಣಕ್ಕೆ ಸಚಿವರೂ ಆಗಿರುವ ನಿರ್ಮಾಪಕ ಮುನಿರತ್ನ ಮುಂದಾಗಿದ್ದು, ಟೈಟಲ್ ರಿಜಿಸ್ಟರ್​ಗೆ ಅರ್ಜಿ ಹಾಕಿದ್ದಾರೆ.

ಉರಿಗೌಡ-ನಂಜೇಗೌಡ ಟೈಟಲ್ ನೊಂದಾಯಿಸಿದ ಮುನಿರತ್ನ: ಚಿತ್ರಕತೆ ಸಿಟಿ ರವಿಯದ್ದಾ? ಎಂದ ಎಚ್​ಡಿಕೆ
ಮುನಿರತ್ನ-ಕುಮಾರಸ್ವಾಮಿ-ಸಿಟಿ ರವಿ
Follow us on

ರಾಜ್ಯ ರಾಜಕೀಯದ ಪ್ರಮುಖ ಮೂರು ಪಕ್ಷಗಳ ನಡುವೆ ತೀವ್ರ ವಾಗ್ವಾದ, ಚರ್ಚೆಗೆ ಕಾರಣವಾಗಿರುವ ಉರಿಗೌಡ ನಂಜೆಗೌಡ (Urigowda Nanjegowda) ಪಾತ್ರಗಳನ್ನು ಆಧರಿಸಿದ ಸಿನಿಮಾ (Movie) ಒಂದು ತೆರೆಗೆ ಬರಲಿದೆ. ಸಚಿವರೂ ಆಗಿರುವ ನಿರ್ಮಾಪಕ ಮುನಿರತ್ನ (Munirathna), ಉರಿಗೌಡ-ನಂಜೇಗೌಡ ಹಾಗೂ ನಂಜೇಗೌಡ-ಉರಿಗೌಡ ಹೆಸರುಗಳನ್ನು ಚಲನಚಿತ್ರ ಅಕಾಡೆಮಿಯಲ್ಲಿ ನೊಂದಣಿ ಮಾಡಿಸಿದ್ದು, ಈ ಪಾತ್ರಗಳ ಬಗ್ಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಮುನಿರತ್ನ, ತಮ್ಮ ನಿರ್ಮಾಣ ಸಂಸ್ಥೆಯಾದ ವೃಷಭಾದ್ರಿ ಪ್ರೊಡಕ್ಷನ್ ಹೌಸ್ ಮೂಲಕ ಉರಿಗೌಡ-ನಂಜೇಗೌಡ ಹಾಗೂ ನಂಜೇಗೌಡ-ಉರಿಗೌಡ ಟೈಟಲ್​ಗಳನ್ನು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೊಂದಣಿ ಮಾಡಿಸಲು ಅರ್ಜಿ ಸಲ್ಲಿಸಿದ್ದಾರೆ. ಟೈಟಲ್ ರಿಜಿಸ್ಟರ್​ಗಾಗಿ ಸಲ್ಲಿಸಿರುವ ಅರ್ಜಿಯಲ್ಲಿ ಇದೊಂದು ಚಾರಿತ್ರಿಕ ಜಾನರ್​ನ ಸಿನಿಮಾ ಆಗಿರಲಿದ್ದು, ಸಿನಿಮಾದ ನಿರ್ದೇಶಕ ಹಾಗೂ ನಟರ ಹೆಸರನ್ನು ಮುಂದೆ ಸೂಚಿಸಲಾಗುವುದು ಎಂದು ಉಲ್ಲೇಖಿಸಿದ್ದಾರೆ.

ಟಿಪ್ಪುವನ್ನು ಕೊಂದಿದ್ದು ಉರಿಗೌಡ ಹಾಗೂ ನಂಜೇಗೌಡ ಎಂಬ ವಾದವನ್ನು ಬಿಜೆಪಿ ತೇಲಿ ಬಿಡುತ್ತಿದೆ. ಆದರೆ ಇದನ್ನು ತೀವ್ರವಾಗಿ ವಿರೋಧಿಸುತ್ತಿರುವ ಜೆಡಿಎಸ್ ಹಾಗೂ ಕಾಂಗ್ರೆಸ್, ಒಕ್ಕಲಿಗ ಸಮುದಾಯವನ್ನು ಒಡೆಯುವ ಹುನ್ನಾರದಿಂದ ಇತಿಹಾಸದಲ್ಲಿ ಇಲ್ಲದ ಈ ಕಾಲ್ಪನಿಕ ಪಾತ್ರಗಳನ್ನು ಸೃಷ್ಟಿಸಲಾಗಿದೆ ಎಂದಿವೆ. ಇದೀಗ ಈ ಕಾಲ್ಪನಿಕ ಪಾತ್ರಗಳನ್ನು ಶಕ್ತಿಯುತ ಮಾಧ್ಯಮ ಎನಿಸಿಕೊಂಡಿರುವ ಸಿನಿಮಾ ಮೂಲಕ ಜನರಿಗೆ ತಲುಪಿಸಲು ಹೊರಟಿರುವುದು ವಿವಾದಕ್ಕೆ ಇನ್ನಷ್ಟು ಇಂಬು ನೀಡುವ ಸಾಧ್ಯತೆ ಸ್ಪಷ್ಟ.

ಮುನಿರತ್ನ, ತಮ್ಮ ನಿರ್ಮಾಣ ಸಂಸ್ಥೆಯಿಂದ ಉರಿಗೌಡ-ನಂಜೇಗೌಡ ಟೈಟಲ್ ರಿಜಿಟರ್​ಗೆ ಹಾಕಿರುವ ಅರ್ಜಿಯ ಚಿತ್ರಗಳನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿರುವ ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ, ”ಸಚಿವರು, ವೃತ್ತಿಯಲ್ಲಿ ಚಿತ್ರ ನಿರ್ಮಾಪಕರಾದ ಶ್ರೀ ಮುನಿರತ್ನ ಅವರು ತಮ್ಮ ವೃಷಭಾದ್ರಿ ಪ್ರೊಡಕ್ಷನ್ಸ್‌ ಮೂಲಕ ‘ ಉರಿಗೌಡ ನಂಜೇಗೌಡ ‘ ಹೆಸರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿ ಸಿನಿಮಾ ಮಾಡಲು ಹೊರಟಿದ್ದಾರೆ. ಈ ಮೂಲಕ ಒಕ್ಕಲಿಗರ ಗೌರವವನ್ನು ಬೆಳ್ಳಿತೆರೆಯ ಮೇಲೆಯೂ ಮೂರಾಬಟ್ಟೆ ಮಾಡಲು ಸಂಚು ರೂಪಿಸಿದ್ದಾರೆ. ಕುದಿಯುತ್ತಿರುವ ಒಕ್ಕಲಿಗರ ನೋವಿನ ಮೇಲೆ ಮಾರಣಾಂತಿಕ ಬರೆ ಎಳೆಯುವಂತಿದೆ ಮುನಿರತ್ನರ ಈ ದುರಹಂಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೊಂದು ಟ್ವೀಟ್​ನಲ್ಲಿ, ”ಮುನಿರತ್ನ ಮಾಡುವ ಸಿನಿಮಾಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಸಿ.ಟಿ.ರವಿ ಕಥೆ ಬರೆಯುತ್ತಾರಾ? ಬಿಜೆಪಿ ಸೃಷ್ಟಿಸಿದ ಕಿರಾತಕ ಸುಳ್ಳನ್ನೇ ಸಿನಿಮಾ ಮಾಡಿ ಒಕ್ಕಲಿಗರನ್ನು ಇತಿಹಾಸದಲ್ಲಿ ಶಾಶ್ವತವಾಗಿ ಖಳನಾಯಕರನ್ನಾಗಿ ಚಿತ್ರಿಸುವುದೇ ಅವರ ದುರುದ್ದೇಶವಾಗಿದೆ. ಈ ದ್ರೋಹವನ್ನು ಒಕ್ಕಲಿಗರು ಸಹಿಸುವ ಪ್ರಶ್ನೆಯೇ ಇಲ್ಲ. ಉರಿಗೌಡ, ನಂಜೇಗೌಡ ಎಂಬ ಕಲ್ಪಿತ ಒಕ್ಕಲಿಗ ಹೆಸರುಗಳ ಸೃಷ್ಟಿ, ಸಿನಿಮಾ ಮಾಡುವ ದುರುಳ ಐಡಿಯಾ, ಒಕ್ಕಲಿಗರ ಮೇಲೆ ಬೀರುತ್ತಿರುವ ವಕ್ರದೃಷ್ಟಿ. ಇದೆಲ್ಲವೂ ಒಕ್ಕಲಿಗರನ್ನು ರಾಜಕೀಯವಾಗಿ ಮುಗಿಸಿಬಿಡುವ ಬಿಜೆಪಿ ರಕ್ಕಸ ಹಿಡೆನ್ ಅಜೆಂಡಾ ಅಲ್ಲದೆ ಮತ್ತೇನೂ ಅಲ್ಲ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ