R Chandru: ಅವನ ಕೈಲಾಗುತ್ತಾ? ಆರ್.ಚಂದ್ರು ಸಾಮರ್ಥ್ಯದ ಬಗ್ಗೆ ಆಪ್ತರಿಗೇ ಇತ್ತು ಅನುಮಾನ!
ಆರ್ ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಬಿಡುಗಡೆ ಆಗಿದೆ. ಕಬ್ಜದಂಥಹಾ ಬೃಹತ್ ಪ್ರಾಜೆಕ್ಟ್ ಅನ್ನು ಆರ್.ಚಂದ್ರು ನಿಭಾಯಿಸಬಲ್ಲರ ಎಂದು ಚಿತ್ರರಂಗದ ಹಲವರು ಅನುಮಾನ ಪಟ್ಟಿದ್ದರಂತೆ.
ನಿರ್ದೇಶಕ ಆರ್.ಚಂದ್ರು (R Chandru) ಫಿಲ್ಮೋಗ್ರಫಿ ನೋಡಿದ ಅನುಭವಿ ಪ್ರೇಕ್ಷಕನಿಗೆ ಇವರು ಆರಕ್ಕೇರಲು ಇಚ್ಛಿಸದ ಮೂರಕ್ಕಿಳಿಯದ ‘ಸೇಫ್ ಪ್ಲೇ’ ನಿರ್ದೇಶಕ ಎಂಬುದು ತಿಳಿದುಬಿಡುತ್ತದೆ. ತೆಳು ಪ್ರೇಮಕತೆಗಳು, ಮಿನಿಮಮ್ ಗ್ಯಾರೆಂಟಿ ಕೌಟುಂಬಿಕ ಕತೆಗಳನ್ನಷ್ಟೆ ಸಿನಿಮಾ ಮಾಡುತ್ತಿದ್ದ ಚಂದ್ರು, ತಮ್ಮ ಮಾರುಕಟ್ಟೆ ಮೌಲ್ಯ, ಸಾಮರ್ಥ್ಯ ಅರಿತು ಅದಕ್ಕೆ ತಕ್ಕಂತೆ ಸಿನಿಮಾ ಕಟ್ಟುತ್ತಾ ಸಾಗುತ್ತಿದ್ದರು. ಆದರೆ ಈ ನಿರ್ದೇಶಕ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಾರೆ. ದೊಡ್ಡ ಬಜೆಟ್, ದೊಡ್ಡ ಸೆಟ್, ದೊಡ್ಡ ದೊಡ್ಡ ಕಲಾವಿದರನ್ನು ಹ್ಯಾಂಡಲ್ ಮಾಡುತ್ತಾರೆ ಎಂಬ ನಂಬಿಕೆ ಅವರ ಆಪ್ತರಿಗೇ ಇರಲಿಲ್ಲ.
ಆರ್ ಚಂದ್ರು, ಕಬ್ಜ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಮಾಡಲು ಮುಂದಾದಾಗ ಚಿತ್ರರಂಗದ ಹಲವರು ಅವರ ಸಾಮರ್ಥ್ಯದ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಕೆಜಿಎಫ್ ನೋಡಿ ಉತ್ಸಾಹಿತನಾಗಿ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದಾನೆ ಎಂದು ಜರಿದವರೇ ಹೆಚ್ಚು. ಇದನ್ನು ಸ್ವತಃ ಆರ್.ಚಂದ್ರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಮಾತ್ರವಲ್ಲ ಆರ್.ಚಂದ್ರುಗೆ ಆಪ್ತರಾಗಿರುವ, ಬೆನ್ನೆಲುಬಿನಂತಿರುವ ನಿರ್ಮಾಪಕ ಕೆಪಿ ಶ್ರೀಕಾಂತ್ ಸಹ ಈ ಮಾತನ್ನು ಅನುಮೋದಿಸಿದ್ದಾರೆ.
ಇಂದು ‘ಕಬ್ಜ’ ಸಿನಿಮಾ ಬಿಡುಗಡೆ ಆದ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ನಿರ್ಮಾಪಕ ಕೆಪಿ ಶ್ರೀಕಾಂತ್, ”ಆರ್.ಚಂದ್ರು ಸಾಮರ್ಥ್ಯದ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಸ್ವತಃ ನನಗೇ ಇದು ಚಂದ್ರು ಇಂದು ಸಾಧ್ಯವಾ ಎನಿಸಿತ್ತು. ನಿನ್ನ ಕೈಲಿ ಮಾಡೋಕೆ ಆಗುತ್ತಾ? ಸರಿಯಾಗಿ ಯೋಚಿಸು ಎಂದು ನಾನೇ ಚಂದ್ರು ಬಳಿ ಹೇಳಿದ್ದೆ. ಏಕೆಂದರೆ ಅವರ ಸಿನಿಮಾ ಸ್ಟೈಲ್ ಬೇರೆ, ಫ್ಯಾಮಿಲಿ ಓರಿಯೆಂಟೆಡ್ ಲೈಟ್ ಹಾರ್ಟೆಡ್ ಸಿನಿಮಾಗಳನ್ನು ಮಾಡುವುದು ಹೆಚ್ಚು. ಅವನದ್ದು ತುಸು ಹೆಣ್ಣು ಮನಸ್ಸು, ಹಾಗಾಗಿ ನಾನು ಅನುಮಾನ ವ್ಯಕ್ತಪಡಿಸಿದ್ದೆ” ಎಂದಿದ್ದಾರೆ.
”ಆದರೆ ಚಂದ್ರು ಬಹಳ ಆತ್ಮವಿಶ್ವಾಸದಿಂದ ಇದ್ದ. ಇಲ್ಲ ಸರ್ ನಾನು ತಯಾರಾಗಿದ್ದೇನೆ. ಇದನ್ನು ಮಾಡಿಯೇ ತೀರುತ್ತೇನೆ ಎಂದ. ಈ ಸಿನಿಮಾಕ್ಕೆ ಸ್ಪೂರ್ತಿ ಕನ್ನಡದ್ದೇ ಆದ ಕೆಜಿಎಫ್ ಸಿನಿಮಾ. ಕೆಜಿಎಫ್ ಪಾರ್ಟ್ 1 ನೋಡಿದ ಬಳಿಕ ಚಂದ್ರು ಕಬ್ಜ ಸಿನಿಮಾದ ಯೋಚನೆ ತಂದರು. ಅದರ ಮೇಲೆ ಕೆಲಸ ಮಾಡಿದರು. ತಮ್ಮ ಬೆವರು ರಕ್ತವನ್ನು ಸುರಿಸಿ ಬಹಳ ಶ್ರಮಪಟ್ಟು ಈ ಸಿನಿಮಾ ಮಾಡಿದ್ದಾರೆ” ಎಂದಿದ್ದಾರೆ ಶ್ರೀಕಾಂತ್.
ಉಪೆಂದ್ರ ಅವರಿಗೆ ಕತೆ ಒಪ್ಪಿಸುವುದು ಬಹಳ ಕಷ್ಟ. ಅಂಥಹದ್ದರಲ್ಲಿ ಈ ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಅವರನ್ನು ಒಪ್ಪಿಸಿದ್ದಾರೆ. ಸುದೀಪ್ ಅವರಂತೂ ಬಹಳ ಚ್ಯೂಸಿ ಅವರನ್ನೂ ಒಪ್ಪಿಸಿದ್ದಾರೆ. ಮಾತ್ರವಲ್ಲದೆ ಕತೆಯ ಮೇಲೂ ಬಹಳಷ್ಟು ಕೆಲಸ ಮಾಡಿದ್ದಾರೆ. ಸಿನಿಮಾವನ್ನು ಹೇಗೆ ಎಂಡ್ ಮಾಡಬೇಕು, ಎರಡನೇ ಪಾರ್ಟ್ಗೆ ಲೀಡ್ ಹೇಗೆ ಕೊಡಬೇಕು ಎಂಬ ಬಗ್ಗೆಯೇ ಮೂರು ತಿಂಗಳು ಚರ್ಚೆ ನಡೆದಿತ್ತು. ಕೊನೆಗೆ ಶಿವಣ್ಣ ಅವರನ್ನು ಸಂಪರ್ಕಿಸಿ ಕತೆಯ ವಿಷಯ ಹೇಳಿದಾಗ ಒಳ್ಳೆಯ ಕಾರ್ಯಕ್ಕೆ ಜೊತೆಯಾಗಿರುತ್ತೇನೆ ಎಂದು ಜೊತೆಗೆ ಬಂದರು” ಎಂದಿದ್ದಾರೆ ಕೆಪಿ ಶ್ರೀಕಾಂತ್.
ಉಪೇಂದ್ರ ನಟನೆಯ “ಕಬ್ಜ’ ಸಿನಿಮಾ ಇಂದು (ಮಾರ್ಚ್ 17) ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಉಪೇಂದ್ರ ಜೊತೆಗೆ ಶ್ರೀಯಾ ಶರಣ್ ನಾಯಕಿಯಾಗಿ ನಟಿಸಿದ್ದಾರೆ. ಸುದೀಪ್ ಹಾಗೂ ಶಿವರಾಜ್ ಕುಮಾರ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸಿನಿಮಾ ಬಿಡುಗಡೆ ಆಗಿದ್ದು ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:13 pm, Fri, 17 March 23