
ಹಿರಿಯ ನಟ ದೇವರಾಜ್ (Devaraj) ಅವರ ಕಿರಿಯ ಪುತ್ರ ಪ್ರಣಂ ದೇವರಾಜ್ (Pranam Devaraj) ಅವರು ಕೂಡ ಸಿನಿಮಾ ರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ನಟಿಸಿರುವ ‘S/o ಮುತ್ತಣ್ಣ’ ಸಿನಿಮಾ ಬಿಡುಗಡೆ ಸಿದ್ಧವಾಗಿದೆ. ಟೀಸರ್ ಮೂಲಕ ಈಗಾಗಲೇ ಈ ಚಿತ್ರ ಗಮನ ಸೆಳೆದಿದೆ. ಕೆಲವು ತಿಂಗಳ ಹಿಂದೆ ಬಿಡುಗಡೆ ಆಗಿದ್ದ ಟೀಸರ್ 1 ಮಿಲಿಯನ್ಗಿಂತಲೂ ಹೆಚ್ಚು ಬಾರಿ ವೀಕ್ಷಣೆ ಕಂಡಿದೆ. ಶ್ರೀಕಾಂತ್ ಹುಣಸೂರು ಅವರು ‘S/o ಮುತ್ತಣ್ಣ’ (Son of Muthanna) ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಚಿತ್ರತಂಡದವರು ಬಿಡುಗಡೆ ದಿನಾಂಕ ಪ್ರಕಟಿಸಿದರು.
‘S/o ಮುತ್ತಣ್ಣ’ ಸಿನಿಮಾವನ್ನು ‘ಪುರಾತನ ಫಿಲ್ಮ್ಸ್’ ಮೂಲಕ ನಿರ್ಮಾಣ ಮಾಡಲಾಗಿದೆ. ಶೀರ್ಷಿಕೆಯ ಕಾರಣದಿಂದಲೇ ಈ ಸಿನಿಮಾ ಪ್ರಾರಂಭದಿಂದಲೂ ಒಂದಷ್ಟು ಸದ್ದು ಮಾಡುತ್ತಿದೆ. ಸಚಿನ್ ಬಸ್ರೂರು ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ‘ಕಮಂಗಿ ನನ್ನ ಮಗನೆ..’ ಸಾಂಗ್ ಈಗಾಗಲೇ ಜನಮನ ಗೆದ್ದಿದೆ. ‘S/o ಮುತ್ತಣ್ಣ’ ಯಾವಾಗ ಬಿಡುಗಡೆ ಆಗಲಿದೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಆಗಸ್ಟ್ 22ರಂದು ‘S/o ಮುತ್ತಣ್ಣ’ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ‘ಬೆಂಗಳೂರು ಕುಮಾರ್ ಫಿಲ್ಮ್ಸ್’ ಸಂಸ್ಥೆಯ ಮೂಲಕ ಕರ್ನಾಟಕದಾದ್ಯಂತ ಈ ಚಿತ್ರವನ್ನು ವಿತರಣೆ ಮಾಡಲಾಗುತ್ತಿದೆ. ಆಗಸ್ಟ್ ಮೊದಲ ವಾರದಲ್ಲಿ ಸಿನಿಮಾವನ್ನು ಅಮೆರಿಕ ಮತ್ತು ದುಬೈನಲ್ಲಿ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ.
ಅಂದಹಾಗೆ, ಈ ಸಿನಿಮಾದಲ್ಲಿ ತಂದೆ-ಮಗನ ನಡುವಿನ ಬಾಂಧವ್ಯದ ಕಥಾಹಂದರ ಇದೆ. ಟೀಸರ್ನಲ್ಲಿ ಈಗಾಗಲೇ ಆ ವಿಚಾರ ಬಹಿರಂಗ ಆಗಿದೆ. ತಂದೆಯ ಪಾತ್ರದಲ್ಲಿ ಪ್ರತಿಭಾವಂತ ಕಲಾವಿದ ರಂಗಾಯಣ ರಘು ಅವರು ನಟಿಸಿದ್ದಾರೆ. ಮಗನಾಗಿ ಪ್ರಣಂ ದೇವರಾಜ್ ಅವರು ನಟಿಸಿದ್ದಾರೆ. ಇಬ್ಬರ ಕಾಂಬಿನೇಷನ್ ಬಗ್ಗೆ ನಿರೀಕ್ಷೆ ಮೂಡಿದೆ.
ಇದನ್ನೂ ಓದಿ: ಕುರಿ ಪ್ರತಾಪ್ ಕಾಮಿಡಿಗೆ ಬಿದ್ದು ಬಿದ್ದು ನಕ್ಕ ದೇವರಾಜ್
ಈ ಚಿತ್ರದ ನಿರ್ಮಾಣದಲ್ಲಿ ‘ಪುರಾತನ ಫಿಲ್ಮ್ಸ್’ ಜೊತೆಗೆ ‘ಎಸ್.ಆರ್.ಕೆ. ಫಿಲ್ಮ್ಸ್’ ಸಂಸ್ಥೆ ಕೂಡ ಸಾಥ್ ನೀಡಿದೆ. ಫ್ಯಾಮಿಲಿ ಸೆಂಟಿಮೆಂಟ್ ಇರುವ ಸಿನಿಮಾಗಳನ್ನು ಇಷ್ಟಪಡುವವರಿಗೆ ‘S/o ಮುತ್ತಣ್ಣ’ ಚಿತ್ರದ ಮೇಲೆ ಕುತೂಹಲ ಸೃಷ್ಟಿ ಆಗಿದೆ. ಸ್ಕೇಟಿಂಗ್ ಕೃಷ್ಣ ಅವರು ಛಾಯಾಗ್ರಹಣ ಮಾಡಿದ್ದಾರೆ. ಹರೀಶ್ ಕೊಮ್ಮೆ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಚಿತ್ರದ ಹಾಡುಗಳಿಗೆ ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಹಾಗೂ ಪ್ರಮೋದ್ ಮರವಂತೆ ಅವರ ಸಾಹಿತ್ಯವಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.