ಸಿನಿಮಾಗೆ ಗಡಿ ಇಲ್ಲ. ಅಕ್ಕಪಕ್ಕದ ರಾಜ್ಯಗಳ ಮಂದಿ ಕೂಡ ಸ್ಯಾಂಡಲ್ವುಡ್ನಲ್ಲಿ ಸಕ್ರಿಯರಾಗಿದ್ದಾರೆ. ಅದಕ್ಕೆ ಡಾ. ಎಸ್. ಮಹೇಶ್ ಬಾಬು ಅವರು ಕೂಡ ಉದಾಹರಣೆ. ಊಟಿ ಮೂಲದವರಾದ ಅವರಿಗೆ ಬಾಲ್ಯದಿಂದಲೂ ಸಿನಿಮಾದ ಕುರಿತು ಆಸಕ್ತಿ ಇತ್ತು. ಉನ್ನತ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಅವರು ಬೆಂಗಳೂರಿನಲ್ಲಿ ರೆರ್ಕಾಡಿಂಗ್ ಸ್ಟುಡಿಯೋ ಆರಂಭಿಸಿದರು. ಈ ಮೊದಲು ಬಡಗ ಸಮುದಾಯದ ಬಗ್ಗೆ ಅವರು ಸಿನಿಮಾ ಮಾಡಿದ್ದರು. ಈಗ ‘ಪ್ರಾಪ್ತಿ’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಸಂಗೀತ ಮತ್ತು ಸಂಕಲನದ ಜವಾಬ್ದಾರಿ ಕೂಡ ಅವರದ್ದೇ.
‘ಸಿಸಿ ಕ್ರಿಯೇಶನ್ಸ್’ ಮೂಲಕ ಡಾ. ಎಸ್. ಮಹೇಶ್ ಬಾಬು ಅವರೇ ‘ಪ್ರಾಪ್ತಿ ಸಿನಿಮಾವನ್ನು ನಿರ್ಮಿಸಿದ್ದಾರೆ. ‘ವಿಧಿ ನಿಗದಿಯಾಗಿದೆ’ ಎಂಬ ಟ್ಯಾಗ್ಲೈನ್ ಈ ಸಿನಿಮಾಗೆ ಇದೆ. ಸಿನಿಮಾ ಬಗ್ಗೆ ಮಹೇಶ್ ಅವರು ಮಾಹಿತಿ ನೀಡಿದರು. ‘ಈಗಿನ ಕಾಲಘಟ್ಟದಲ್ಲಿ ನಡೆಯುವ 3 ಅಂಶಗಳನ್ನು ಇಟ್ಟುಕೊಂಡು ಪ್ರೇಕ್ಷಕರಿಗೆ ಸಂದೇಶ ನೀಡುವಂತಹ ಸಿನಿಮಾ ಮಾಡಿದ್ದೇವೆ. ವಿವಾಹೇತರ ಸಂಬಂಧ. ಅದರಿಂದ ಪತಿ-ಪತ್ನಿ ನಡುವೆ ಬಿರುಕು ಮೂಡುತ್ತಿದೆ. ಅದು ವಿಚ್ಚೇದನಕ್ಕೆ ಕಾರಣ ಆಗುತ್ತದೆ. ಯುವಜನರಲ್ಲಿ ಆಕರ್ಷಣೆ ಹೆಚ್ಚಿದೆ. ಇಂಥ ಸಂಗತಿಗಳಿಂದ ಅವರು ಮಾನಸಿಕವಾಗಿ ಕುಗ್ಗುತ್ತಾರೆ. ಈ ಅಂಶಗಳ ಜೊತೆಗೆ ಸ್ಟೆಸ್ಪೆನ್ಸ್-ಥ್ರಿಲ್ಲರ್ ಕಹಾನಿ ಇದೆ. ಈಗಿನ ತಲೆಮಾರಿನವರನ್ನು ಬದಲಾಯಿಸುವ ಸಂದೇಶ ಇದೆ’ ಎಂದಿದ್ದಾರೆ.
ಈ ಸಿನಿಮಾದಲ್ಲಿ ಜಯಸೂರ್ಯ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಖ್ಯಾತ ಸಿಂಗರ್ ಮಂಜುಳಾ ಗುರುರಾಜ್ ಅವರ ಸೊಸೆ ಗೌರಿ ಸಾಗರ್ ವೃತ್ತಿಯಲ್ಲಿ ಡ್ಯಾನ್ಸರ್ ಆಗಿದ್ದು, ಈ ಚಿತ್ರದಲ್ಲೂ ಅದೇ ಪಾತ್ರವನ್ನು ಮಾಡಿದ್ದಾರೆ. ನಿಖಿತಾ ರಾಮ್, ಮೋನಿಷಾ ಥಾಮಸ್, ಕಳಸ ಮಂಜುನಾಥ್, ಅಜಿತ್ ಜೈನ್, ಕಮಲ್ ಜಿಮಿರಾಯ್, ಮಂಜುಳಾ ರೆಡ್ಡಿ, ರಾಮಮೂರ್ತಿ, ಪ್ರಕೃತಿ, ಮೇಘರಾಜ ಕುಮಾರ್, ನಿಹಾರಿಕಾ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕುಮಾರ್ ಗೌಡ ಛಾಯಾಗ್ರಹಣ ಮಾಡಿದ್ದಾರೆ. ಗೌರಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಇದನ್ನೂ ಓದಿ: ಸ್ಯಾಂಡಲ್ವುಡ್ನಲ್ಲಿ ಹೊಸಬರ ‘ವೈಭೋಗ’; ಇದು ‘ಯು ಟರ್ನ್ 2’ ನಿರ್ದೇಶಕನ ಹೊಸ ಸಿನಿಮಾ
ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಹಿರಿಯ ನಿರ್ದೇಶಕ ಸಾಯಿ ಪ್ರಕಾಶ್ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ‘ತುಣುಕುಗಳು ಕುತೂಹಲ ಮೂಡಿಸುತ್ತಿದೆ. ನಿರ್ಮಾಪಕರು ತಮಿಳಿನವರಾದರೂ ಕನ್ನಡದ ಮೇಲಿನ ಅಭಿಮಾನದಿಂದ ಸಿನಿಮಾ ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕರು ಎಲ್ಲಿಂದ ಬಂದರು ಎಂಬುದು ಮುಖ್ಯವಲ್ಲ. ಯಾವ ಭಾಷೆಯ ಸಿನಿಮಾವನ್ನು ಮಾಡಿದ್ದಾರೆ ಎಂಬುದನ್ನು ನೋಡಬೇಕು. ಇಂಥವರ ಅವಶ್ಯಕತೆ ಚಿತ್ರೋದ್ಯಮಕ್ಕೆ ಇದೆ’ ಎಂದರು. ಆಡುಗೋಡಿ ಶ್ರೀನಿವಾಸ್, ವಿಕ್ಟರಿ ವಾಸು ಕೂಡ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.