ಟ್ರೋಲ್ ಮಾಡಿಸುತ್ತಿರುವುದೇ ದರ್ಶನ್: ಓಪನ್ ಆಗಿ ಹೇಳಿದ ನಟ ಪ್ರಥಮ್

ಮಾಫಿಯಾ ನಡೆಸಬೇಡಿ ಎಂದು ನಟ ಪ್ರಥಮ್ ಅವರು ದರ್ಶನ್ ವಿರುದ್ಧ ಗುಡುಗಿದ್ದಾರೆ. ನಟಿ ರಮ್ಯಾಗೆ ದರ್ಶನ್ ಅಭಿಮಾನಿಗಳು ಅಶ್ಲೀಲ ಸಂದೇಶ ಕಳಿಸಿದ್ದನ್ನು ಪ್ರಥಮ್ ಖಂಡಿಸಿದ್ದಾರೆ. ತಮ್ಮ ವಿರುದ್ಧ ಟ್ರೋಲ್ ಮಾಡಿಸುತ್ತಿರುವುದೇ ದರ್ಶನ್ ಎಂದು ಪ್ರಥಮ್ ನೇರವಾಗಿ ಆರೋಪ ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಟ್ರೋಲ್ ಮಾಡಿಸುತ್ತಿರುವುದೇ ದರ್ಶನ್: ಓಪನ್ ಆಗಿ ಹೇಳಿದ ನಟ ಪ್ರಥಮ್
Darshan, Pratham

Updated on: Jul 29, 2025 | 8:16 PM

ನಟ ಪ್ರಥಮ್ ಅವರು ದರ್ಶನ್ (Darshan) ಅಭಿಮಾನಿಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ತಮ್ಮ ತಂಟೆಗೆ ಬಂದವರಿಗೆ ಕಾನೂನಿನ ಮೂಲಕ ಉತ್ತರ ನೀಡಲು ಅವರು ಮುಂದಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಪ್ರಥಮ್ ಮತ್ತು ದರ್ಶನ್ ಫ್ಯಾನ್ಸ್ ನಡುವೆ ತಿಕ್ಕಾಟ ನಡೆಯುತ್ತಲೇ ಇದೆ. ಪ್ರಥಮ್ ಮೇಲೆ ದರ್ಶನ್ ಫ್ಯಾನ್ಸ್ (Darshan Fans) ಹಲ್ಲೆಗೆ ಪ್ರಯತ್ನಿಸಿದ್ದಾರೆ. ಹಾಗಾಗಿ ಪ್ರಥಮ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಮೊದಲಿನಿಂದಲೂ ಪ್ರಥಮ್ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಈ ರೀತಿಯ ಟ್ರೋಲ್​​ಗೆ ದರ್ಶನ್ ಕಾರಣ ಎಂದು ಪ್ರಥಮ್ (Pratham) ಅವರು ಹೇಳಿದ್ದಾರೆ.

‘ದೂರು ಕೊಡಬೇಡಿ ಅಂತ ಆ ನಟ ಹೇಳಿಲ್ಲ. ನಿನ್ನೆ ಸಂಜೆಯಿಂದ ಟ್ರೋಲ್ ಮಾಡಿಸುತ್ತಿರುವುದು ದರ್ಶನ್ ಸರ್. ಅದು ತಪ್ಪು. ನನ್ನ ಬಗ್ಗೆ ನೆಗೆಟಿವ್ ಆಗಿ ಪ್ರಚಾರ ಮಾಡುವಂತಿಲ್ಲ ಎಂದು ನಾನು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದೇನೆ. ಅದಕ್ಕೂ ಇವರು ಮರ್ಯಾದೆ ಕೊಡುತ್ತಿಲ್ಲ. ಇವರು ಕಾನೂನು ಉಲ್ಲಂಘನೆ ಮಾಡಿದಂತೆ ಆಗಿದೆ’ ಎಂದು ನಟ ಪ್ರಥಮ್ ಅವರು ದರ್ಶನ್ ಹಾಗೂ ದರ್ಶನ್ ಫ್ಯಾನ್ಸ್ ವಿರುದ್ಧ ಕಿಡಿಕಾರಿದ್ದಾರೆ.

‘ನನಗೆ ಚುಚ್ಚೋಕೆ ಬಂದಿದ್ದರಿಂದಲೇ ನಾನು ಇಷ್ಟು ಅಗ್ರೆಸಿವ್ ಆಗಿ ಮಾತನಾಡುತ್ತಿದ್ದೇನೆ. ನಿಮ್ಮ ಸೆಲ್​ನಲ್ಲಿ ಇದ್ದವನೇ ಚುಚ್ಚೋಕೆ ಬಂದಿದ್ದು. ಅದನ್ನು ತಲೆಯಲ್ಲಿ ಇಟ್ಟುಕೊಳ್ಳಿ. ಯಾವ ಸ್ಟಾರ್​ಗೆ ನಾನು ಯಾಕೆ ಹೆದರಿಕೊಳ್ಳಬೇಕು? ನೀವು ಇಲ್ಲಿ ಬಂದು ಹೇಳಿಕೆ ನೀಡಬೇಕು. ನಾನು ಸಿನಿಮಾ ಬಿಟ್ಟು ಊರಿಗೆ ಹೋಗುತ್ತಿದ್ದೇನೆ. ಚಿತ್ರರಂಗದಲ್ಲಿ ಬೇರೆಯವರಿಗಾದರೂ ಉಪಯೋಗ ಆಗಲಿ. ಈ ದೌರ್ಜನ್ಯಗಳು ನಿಲ್ಲಲಿ’ ಎಂದಿದ್ದಾರೆ ಪ್ರಥಮ್.

ಇದನ್ನೂ ಓದಿ
ದರ್ಶನ್​ಗೆ ದೇವರ ಮೇಲೆ ಎಷ್ಟು ಭಕ್ತಿ ನೋಡಿ; ಇಲ್ಲಿದೆ ವಿಡಿಯೋ ಸಾಕ್ಷಿ
ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್
ಫಾರ್ಮ್​ಹೌಸ್​ನಲ್ಲಿ ಎತ್ತಿನಗಾಡಿ ಓಡಿಸಿದ ನಟ ದರ್ಶನ್; ದಾಸನ ಜಾಲಿ ಮೂಡ್
ಕರ್ನಾಟಕದ ಮುಖ್ಯ ಮಂತ್ರಿಯಾದ ನಟ ದರ್ಶನ್, ಪಕ್ಷ ಯಾವುದು ಗೊತ್ತೆ?

‘ಟ್ರೋಲ್ ಮಾಡುವ ಎಲ್ಲ ಪೇಜ್​​ಗಳು ಡಿಲೀಟ್ ಆಗಬೇಕು. ಅದು ತುಂಬಾ ಮುಖ್ಯ. ಎಲ್ಲವನ್ನು ನೋಡಿ ನೀವು ಮಜಾ ತೆಗೆದುಕೊಳ್ಳುತ್ತಾ ಇದ್ದೀರಿ. ನಿಮ್ಮ ಪುಡಾಂಗ್​​ಗಳಿಗೆ, ತಗಡುಗಳಿಗೆ ಬಿಸಿ ಮುಟ್ಟಿಸಬೇಕು. ಯಾವ ಹೀರೋಗಳ ಸಹವಾಸಕ್ಕೆ ಹೋಗಬೇಡಿ ಅಂತ ನೀವು ವಿಡಿಯೋ ಮಾಡಿ ಹೇಳಬೇಕು. ಅಶ್ವಿನಿ ಪುನೀತ್ ರಾಜ್​ಕುಮಾರ್, ಸುದೀಪ್, ಗಣೇಶ್, ಯಶ್, ಶಿವಣ್ಣ, ಧ್ರುವ, ಧನಂಜಯ, ರಮ್ಯಾ ಮುಂತಾದ ಕಲಾವಿದರ ವಿಚಾರಕ್ಕೆ ಹೋಗಬಾರದು ಅಂತ ನೀವು ಅಭಿಮಾನಿಗಳಿಗೆ ಹೇಳಿ’ ಎಂದು ದರ್ಶನ್​ಗೆ ಪ್ರಥಮ್ ಹೇಳಿದ್ದಾರೆ.

ಇದನ್ನೂ ಓದಿ: ದರ್ಶನ್ ಬಂದು ಹೇಳಿಕೆ ನೀಡುವ ತನಕ ಉಪವಾಸ ಸತ್ಯಾಗ್ರಹ ಮಾಡ್ತೀನಿ: ಪ್ರಥಮ್

‘ರಮ್ಯಾ ಅವರು ಸಿನಿಮಾ ಮಾಡೋದು ನಿಲ್ಲಿಸಿ ಹಲವು ವರ್ಷ ಆಗಿದೆ. ಇಂದಿಗೂ ಅವರನ್ನು ಸ್ಯಾಂಡಲ್​ವುಡ್ ಕ್ವೀನ್ ಅಂತಾರೆ. ಅವರು ಹಾಕಿದ ಚಪ್ಪಲಿಯನ್ನು ಹರಾಜಿಗೆ ಹಾಕಿದರೂ 2ರಿಂದ 5 ಲಕ್ಷ ರೂಪಾಯಿ ಆಗುತ್ತದೆ. ಅದು ರಮ್ಯಾ ಅವರ ಕ್ರೇಜ್. ನಿಮ್ಮ ಪಾಡಿಗೆ ನೀವು ಇರಿ. ಮಾಫಿಯಾ ನಡೆಸಬೇಡಿ’ ಎಂದು ಪ್ರಥಮ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.