ಇತ್ತೀಚೆಗಿನ ವರ್ಷದಲ್ಲಿ ದಕ್ಷಿಣ ಭಾರತದ ಕೆಲವು ನಿರ್ದೇಶಕರು ಬಾಲಿವುಡ್ಗೆ ಹೋಗಿ ಭರ್ಜರಿ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ತಮಿಳಿನ ಅಟ್ಲಿ, ಮುರುಗದಾಸ್ ಈಗಾಗಲೇ ಹಿಂದಿಯಲ್ಲಿ ಸಿನಿಮಾಗಳ ಮೇಲೆ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ತೆಲುಗಿನ ಒಂದಿಬ್ಬರು ನಿರ್ದೇಶಕರು ಸಹ ಬಾಲಿವುಡ್ಗೆ ಹಾರುತ್ತಿದ್ದಾರೆ. ಇದೀಗ ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ ಪ್ರೇಮ್ ಸಹ ಬಾಲಿವುಡ್ಗೆ ಹಾರುತ್ತಿದ್ದಾರೆ. ಈ ಸುದ್ದಿ ಕಳೆದ ವರ್ಷವೇ ಪ್ರಕಟವಾಗಿತ್ತು, ಆದರೆ ಈಗದು ಖಾತ್ರಿಯಾಗಿದೆ.
ತಮ್ಮ ನಿರ್ದೇಶನದ ‘ಕೆಡಿ’ ಸಿನಿಮಾದ ಪ್ರಚಾರ ಮತ್ತು ಬಿಡುಗಡೆಯಲ್ಲಿ ತೊಡಗಿಕೊಂಡಿರುವ ಜೋಗಿ ಪ್ರೇಮ್ ಶೀಘ್ರವೇ ಹಿಂದಿ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಈ ಬಗ್ಗೆ ಟೈಮ್ಸ್ ಎಂಟರ್ಟೈನ್ಮೆಂಟ್ಗೆ ನೀಡಿರುವ ಸಂದರ್ಶನದಲ್ಲಿ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ‘2024ರಲ್ಲೇ ನಾನು ಹಿಂದಿ ಸಿನಿಮಾ ನಿರ್ದೇಶನ ಮಾಡಬೇಕಿತ್ತು. ಆದರೆ ಅದು ರೀಮೇಕ್ ಸಿನಿಮಾ ಆಗಿತ್ತು, ಆದರೆ ನನಗೆ ರೀಮೇಕ್ ಸಿನಿಮಾ ನಿರ್ದೇಶಿಸುವುದು ಇಷ್ಟವಿಲ್ಲದ ಕಾರಣ ನಾನು ನಿರಾಕರಿಸಿದ್ದೆ’ ಎಂದಿದ್ದಾರೆ ಪ್ರೇಮ್.
‘ಆದರೆ ನಿರ್ಮಾಪಕರಿಗೆ ನಾನು ಮನವರಿಕೆ ಮಾಡಿಕೊಟ್ಟಿದ್ದು, ನಾನು ಸಿನಿಮಾ ಸ್ವಮೇಕ್ ಸಿನಿಮಾಗಳನ್ನು ಮಾತ್ರವೇ ನಿರ್ದೇಶನ ಮಾಡುವುದಾಗಿ ತಿಳಿಸಿದ್ದು, ಇದೀಗ ಸಿನಿಮಾದ ಮಾತುಕತೆ ಸಹ ಬಹುತೇಕ ಮುಗಿದಿದ್ದು, ಬಾಲಿವುಡ್ನ ದೊಡ್ಡ ನಟರೊಬ್ಬರೊಡನೆ ಕೆಲಸ ಮಾಡಲಿದ್ದೇನೆ’ ಎಂದು ಪ್ರೇಮ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:‘ಶಿವ ಶಿವ..’ ಹಾಡಿಗೆ ಮೈಸೂರು ಹುಡುಗರ ಮಸ್ತ್ ಸ್ಟೆಪ್; ಫಿದಾ ಆದ ಧ್ರುವ, ಪ್ರೇಮ್
‘ದಕ್ಷಿಣ ಭಾರತದ ನಿರ್ದೇಶಕರು ಸದಾ ತಮ್ಮ ಕತೆ ಹೇಳುವ ಶೈಲಿಯಿಂದ, ಎಮೋಷನ್ಸ್ಗಳಿಂದ ಪ್ರೇಕ್ಷಕರನ್ನು ಸೆಳೆದಿದ್ದಾರೆ. ಅದನ್ನು ಬಾಲಿವುಡ್ ಗುರುತಿಸಿದ್ದು, ಈಗಾಗಲೇ ಹಲವು ದಕ್ಷಿಣ ಭಾರತದ ನಿರ್ದೇಶಕರು ಬಾಲಿವುಡ್ನಲ್ಲಿ ಸಿನಿಮಾಗಳನ್ನು ನಿರ್ದೇಶಿಸಿ ಯಶಸ್ಸು ಗಳಿಸಿದ್ದಾರೆ. ನಾವೆಲ್ಲ ಒಟ್ಟಾಗಿ ಭಾರತೀಯ ಸಿನಿಮಾಕ್ಕೆ ಕೊಡುಗೆ ನೀಡುತ್ತಿರುವ ಬಗ್ಗೆ ಖುಷಿ ಇದೆ’ ಎಂದು ಪ್ರೇಮ್ ಹೇಳಿಕೊಂಡಿದ್ದಾರೆ.
ಪ್ರೇಮ್ ಪ್ರಸ್ತುತ ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ‘ಕೆಡಿ’ ಬಳಿಕ ದರ್ಶನ್ ನಟನೆಯ ಸಿನಿಮಾ ನಿರ್ದೇಶನ ಮಾಡಬೇಕಿದೆ ಪ್ರೇಮ್. ಆದರೆ ಈ ನಡುವೆ ಬಾಲಿವುಡ್ಗೂ ಹೋಗಿ ಬರಲಿದ್ದಾರೆ. ಪ್ರೇಮ್ ಶೈಲಿ ಹಿಂದಿ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಲಿದೆಯೇ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ