ನಿರೀಕ್ಷೆ ಮೂಡಿಸಿದ ‘ವಿಕಲ್ಪ’ ಟೀಸರ್; ಇದು ವಾಸ್ತವ ಮತ್ತು ಭ್ರಮೆಯ ನಡುವಿನ ಕಥೆ

ಪೃಥ್ವಿರಾಜ್‌ ಪಾಟೀಲ್‌ ಅವರು ‘ವಿಕಲ್ಪ’ ಸಿನಿಮಾಗೆ ನಿರ್ದೇಶನ ಮಾಡಿ, ಮುಖ್ಯ ಪಾತ್ರದಲ್ಲೂ ನಟಿಸಿದ್ದಾರೆ. ಇಂದಿರಾ ಶಿವಸ್ವಾಮಿ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಸಿನಿಮಾದ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ. ಬೆಂಗಳೂರು, ತೀರ್ಥಹಳ್ಳಿ, ಸಾಗರ, ಶಿರಸಿ, ಕುಂದಾಪುರ, ಯಲ್ಲಾಪುರ ಮುಂತಾದೆಡೆ ಈ ಚಿತ್ರಕ್ಕೆ ಶೂಟಿಂಗ್ ಮಾಡಲಾಗಿದೆ.

ನಿರೀಕ್ಷೆ ಮೂಡಿಸಿದ ‘ವಿಕಲ್ಪ’ ಟೀಸರ್; ಇದು ವಾಸ್ತವ ಮತ್ತು ಭ್ರಮೆಯ ನಡುವಿನ ಕಥೆ
Vikalpa Movie Teaser

Updated on: Jan 05, 2026 | 3:57 PM

ಸೈಕಲಾಜಿಕಲ್‌-ಥ್ರಿಲ್ಲರ್‌ ಕಥಾಹಂದರ ಹೊಂದಿರುವ ‘ವಿಕಲ್ಪ’ ಸಿನಿಮಾ (Vikalpa Movie) ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಬಹುತೇಕ ಪೂರ್ಣಗೊಂಡಿವೆ. ಈಗ ಈ ಸಿನಿಮಾವನ್ನು ಸೆನ್ಸಾರ್‌ ಮಂಡಳಿಗೆ ಕಳಿಸಲಾಗಿದೆ. ಜೊತೆಗೆ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಇತ್ತೀಚೆಗೆ ‘ವಿಕಲ್ಪ’ ಸಿನಿಮಾ ಟೀಸರ್‌ (Vikalpa Teaser) ಬಿಡುಗಡೆ ಮಾಡಲಾಯಿತು. ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅವರು ವರ್ಚ್ಯುವಲ್‌ ಆಗಿ ಟೀಸರ್‌ ಅನಾವರಣ ಮಾಡಿದರು. ಲೇಖಕ ಜೋಗಿ ಅವರು ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬಂದು ಚಿತ್ರತಂಡಕ್ಕೆ ಮೆಚ್ಚುಗೆ ಸೂಚಿಸಿದರು.

ಸುದ್ದಿಗೋಷ್ಠಿಯಲ್ಲಿ ಜೋಗಿ ಮಾತನಾಡಿ ‘ಈ ಸಿನಿಮಾದ ಕೆಲವು ತುಣುಕುಗಳನ್ನು ನೋಡಿದ್ದೇನೆ. ತುಡಿತ ಇರುವಂಥವರು ಸೇರಿಕೊಂಡು ಮಾಡಿದ ಸಿನಿಮಾ ಇದು. ಕನ್ನಡದಲ್ಲಿ ಇಂಥ ಹೊಸ ಪ್ರಯತ್ನದ ಸಿನಿಮಾಗಳು ಬರುವಂತಾಗಬೇಕು. ಈ ಸಿನಿಮಾದ ಕಥೆ, ಟೀಸರ್‌, ಹಾಡು ಭರವಸೆ ಮೂಡಿಸುವಂತಿದೆ. ಸಿನಿಮಾ ಬಿಡುಗಡೆ ಆದ ಮೇಲೆ ಮೂಡಿಸಿರುವ ನಿರೀಕ್ಷೆಯನ್ನು ನಿಜ ಮಾಡಲಿ. ಹೊಸಬರ ಈ ಸಿನಿಮಾಕ್ಕೆ ಶುಭವಾಗಲಿ’ ಎಂದರು.

ಮನುಷ್ಯನ ಮನಸ್ಸಿನ ಸುಪ್ತ ಭಾವನೆಗಳು ಹಾಗೂ ತಲ್ಲಣಗಳನ್ನು ಈ ಸಿನಿಮಾ ಮೂಲಕ ತೆರೆಮೇಲೆ ತರಲಾಗುತ್ತಿದೆ. ಹಲವು ವರ್ಷಗಳಿಂದ ಹವ್ಯಾಸಿ ರಂಗಭೂಮಿಯ ಅನುಭವ ಹೊಂದಿರುವ ಪೃಥ್ವಿರಾಜ್‌ ಪಾಟೀಲ್‌ ಅವರ ಪರಿಕಲ್ಪನೆಯಲ್ಲಿ ಈ ಸಿನಿಮಾ ಸಿದ್ಧವಾಗಿದೆ. ‘ಸುರೂಸ್‌ ಟಾಕೀಸ್‌’ ಮೂಲಕ ಇಂದಿರಾ ಶಿವಸ್ವಾಮಿ ಅವರು ನಿರ್ಮಾಣ ಮಾಡಿದ್ದಾರೆ. ಇದು ಅವರ ಮೊದಲ ಸಿನಿಮಾ.

Vikalpa Movie Team

ಪೃಥ್ವಿರಾಜ್‌ ಪಾಟೀಲ್‌ ಅವರು ನಿರ್ದೇಶನ ಮಾಡುವುದರ ಜೊತೆಗೆ ತೆರೆಮೇಲೆ ಮುಖ್ಯಪಾತ್ರವನ್ನೂ ಮಾಡಿದ್ದಾರೆ. ನಾಗಶ್ರೀ ಹೆಬ್ಬಾರ್‌, ಹರಿಣಿ ಶ್ರೀಕಾಂತ್‌, ಗಣಪತಿ ವಡ್ಡಿನಗದ್ದೆ, ಸ್ವರೂಪ್‌ ಬಚ್ಚ್‌, ಸಂಧ್ಯಾ ವಿನಾಯಕ್‌, ಪೂಜಾ ಬಚ್ಚ್‌, ಜಯಂತ್‌ ಡೇವಿಡ್‌, ಡಾ. ಪ್ರಕೃತಿ, ಗಿರೀಶ್‌ ಹೆಗಡೆ, ಮಾಸ್ಟರ್‌ ಆಯುಷ್ ಸಂತೋಷ್‌, ಪ್ರಜ್ಞಾ ಗಣಪತಿ, ಗಣಪತಿ ಹಿತ್ತಲಕೈ, ಮಾಧವ ಶರ್ಮಾ, ಗೋಡೆ ನಾರಾಯಣ ಹೆಗಡೆ, ಗಣಪತಿ ಎ.ಆರ್. ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

‘ವಿಕಲ್ಪ’ ಸಿನಿಮಾ ಟೀಸರ್:

‘ವಿಕಲ್ಪ ಎಂದರೆ ವಾಸ್ತವ ಮತ್ತು ಕಲ್ಪನೆಗಳ ನಡುವಿನ ಒಂದು ಸ್ಥಿತಿ. ಇದೊಂದು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಕಥೆ. ಆದರೂ ಸಂಪೂರ್ಣ ಥ್ರಿಲ್ಲರ್‌ ಸಿನಿಮಾ ಎಂಬುದು ವಿಶೇಷ. ಜೊತೆಗೆ ಹಾಸ್ಯ ಮತ್ತು ಮನರಂಜನೆಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಕಥೆಯೇ ಈ ಸಿನಿಮಾದ ಹೀರೋ’ ಎಂದು ನಿರ್ದೇಶಕ, ನಟ ಪೃಥ್ವಿರಾಜ್‌ ಪಾಟೀಲ್‌ ಅವರು ಮಾಹಿತಿ ನೀಡಿದ್ದಾರೆ. ಈ ಸಿನಿಮಾದಲ್ಲಿ ಹರಿಣಿ ಶ್ರೀಕಾಂತ್‌ ಅವರು ಸೈಕಿಯಾಟ್ರಿಸ್ಟ್‌ ಪಾತ್ರ ಮಾಡಿದ್ದಾರೆ.

ಇದನ್ನೂ ಓದಿ: ಕುದುರೆಯಾ? ಹೆಗ್ಗಣವಾ? ಹೊಸ ಸಿನಿಮಾ ಘೋಷಿಸಿದ ಡಾಲಿ ಧನಂಜಯ್

ಮನೋವೈದ್ಯರ ಸಲಹೆಯ ಮೇರೆಗೆ ಹಲವು ದೃಶ್ಯಗಳ ಚಿತ್ರೀಕರಣ ನಡೆದಿದೆ ಎಂದು ಚಿತ್ರತಂಡ ಹೇಳಿದೆ. ಬೆಂಗಳೂರು, ಸಾಗರ, ತೀರ್ಥಹಳ್ಳಿ, ಶಿರಸಿ, ಯಲ್ಲಾಪುರ, ಕುಂದಾಪುರ, ಸಿಂಗಾಪುರ, ನೆದರ್ಲ್ಯಾಂಡ್‌ ಮುಂತಾದೆಡೆ ಶೂಟಿಂಗ್ ಮಾಡಲಾಗಿದೆ. ಅಭಿರಾಮ್‌ ಗೌಡ ಅವರು ಛಾಯಾಗ್ರಹಣ ಮಾಡಿದ್ದಾರೆ. ಸುರೇಶ್‌ ಆರುಮುಗಮ್‌ ಅವರ ಸಂಕಲನ ಈ ಚಿತ್ರಕ್ಕಿದೆ. ಸಂವತ್ಸರ ಅವರು ಸಂಗೀತ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:48 pm, Mon, 5 January 26