ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಅಭಿಮಾನಿ ಬಳಗ ಒಂದು ವಿಶೇಷ ದಿನಕ್ಕಾಗಿ ಕಾಯುತ್ತಿದೆ. ಡಿ.6 ಆ ವಿಶೇಷ ದಿನ. ಅಂದು ಅಪ್ಪು ಕನಸಿನ ಪ್ರಾಜೆಕ್ಟ್ ಆದಂತಹ ‘ಗಂಧದ ಗುಡಿ’ (Gandhada Gudi) ಟೈಟಲ್ ಟೀಸರ್ ಬಿಡುಗಡೆ ಆಗಲಿದೆ. ಪುನೀತ್ ರಾಜ್‌ಕುಮಾರ್ ಅವರಿಗೆ ನಟನೆ ಮಾತ್ರವಲ್ಲದೇ ಬೇರೆ ಬೇರೆ ಕ್ಷೇತ್ರಗಳ ಬಗ್ಗೆ ಆಸಕ್ತಿ ಇತ್ತು. ಕರ್ನಾಟಕದ ಅರಣ್ಯ ಮತ್ತು ವನ್ಯಜೀವಿಗಳ ಕುರಿತು ಅವರೊಂದು ಡಾಕ್ಯುಮೆಂಟರಿ ಸಿದ್ಧಪಡಿಸಿದ್ದಾರೆ. ಅದಕ್ಕೆ ‘ಗಂಧದ ಗುಡಿ’ ಎಂದು ಶೀರ್ಷಿಕೆ ಇಡಲಾಗಿದೆ. ಅದರ ಟೈಟಲ್ ಟೀಸರ್ ಬಿಡುಗಡೆಗೆ ಡಾ. ರಾಜ್‌ಕುಮಾರ್ ಕುಟುಂಬದವರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಪಿಆರ್ಕೆ ಆಡಿಯೋ ಮೂಲಕ ಅದು ರಿಲೀಸ್ ಆಗಲಿದೆ. ಟೀಸರ್ ಬಿಡುಗಡೆ ಮಾಡಲು ಶಿವರಾಜ್ಕುಮಾರ್ (Shivarajkumar) ಅವರು ವಿಶೇಷ ವ್ಯಕ್ತಿಯನ್ನು ಆಹ್ವಾನಿಸಿದ್ದಾರೆ. ಯಾರದು? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ! ಹೌದು, ಈ ಕುರಿತು ಈಗಾಗಲೇ ಸಿಎಂ (CM Basavaraj Bommai) ಅವರನ್ನು ಶಿವಣ್ಣ ಭೇಟಿ ಮಾಡಿದ್ದಾರೆ.
ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಸಿಎಂ ಸರ್ಕಾರಿ ನಿವಾಸದಲ್ಲಿ ಶಿವರಾಜ್ಕುಮಾರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಆಗಿದ್ದಾರೆ. ಈ ವೇಳೆ ‘ಗಂಧದ ಗುಡಿ’ ಟೈಟಲ್ ಟೀಸರ್ ಬಿಡುಗಡೆಗೆ ಆಹ್ವಾನ ನೀಡಿದ್ದಾರೆ. ಇದು ಪುನೀತ್ ರಾಜ್‌ಕುಮಾರ್ ಅವರ ಡ್ರೀಮ್ ಪ್ರಾಜೆಕ್ಟ್ ಆಗಿರುವುದರಿಂದ ಎಲ್ಲರಿಗೂ ಹೆಚ್ಚಿನ ನಿರೀಕ್ಷೆ ಇದೆ. ಡಿ.6ರಂದು ಟೀಸರ್ ಆಗಲಿದೆ.
‘ವೈಲ್ಡ್ ಕರ್ನಾಟಕ’ ಡಾಕ್ಯುಮೆಂಟರಿ ಮಾಡಿದ್ದ ಅಮೋಘ ವರ್ಷ ಜತೆ ಸೇರಿ ಪುನೀತ್ ಕರುನಾಡ ಬಗ್ಗೆ ಡಾಕ್ಯುಮೆಂಟರಿ ಒಂದನ್ನು ಸಿದ್ಧಪಡಿಸಿದ್ದರು. ರಾಜ್ಯದ ನಾನಾ ಕಡೆಗಳಿಗೆ ಭೇಟಿ ನೀಡಿ ಶೂಟ್ ಮಾಡಲಾಗಿತ್ತು. ಪುನೀತ್ ಕೂಡ ಇದರಲ್ಲಿ ಕಾಣಿಸಿಕೊಳ್ಳುತ್ತಾರೆ. ಇದರ ಟೀಸರ್ ನವೆಂಬರ್ 1ರಂದು ರಿಲೀಸ್ ಆಗಬೇಕಿತ್ತು. ನವೆಂಬರ್ 1 ಕನ್ನಡ ರಾಜ್ಯೋತ್ಸವ. ಈ ಕಾರಣಕ್ಕೆ ಅಂದೇ ಆ ಟೀಸರ್ ರಿಲೀಸ್ ಮಾಡಬೇಕು ಎಂದು ಪುನೀತ್ ಕನಸು ಕಂಡಿದ್ದರು. ಆದರೆ, ಕನಸು ನನಸಾಗುವ ಮೊದಲೇ ಅವರು ಮೃತಪಟ್ಟರು. ಈ ಕಾರಣಕ್ಕೆ ಆ ಟೀಸರ್ ರಿಲೀಸ್ ಆಗಿಲ್ಲ. ಈಗ ಅದನ್ನು ಡಿಸೆಂಬರ್ 6ಕ್ಕೆ ರಿಲೀಸ್ ಮಾಡಲಾಗುತ್ತಿದೆ. ‘ಅಪ್ಪು ಅವರ ಅಮೋಘವಾದ ಕನಸಿನ ಪಯಣ. ಹಿಂದೆಂದೂ ಕಾಣದ ರೋಮಾಂಚಕ ಅನುಭವ’ ಎಂದು ಅಶ್ವಿನಿ ಬರೆದುಕೊಂಡಿದ್ದಾರೆ.
ಟೀಸರ್ ರಿಲೀಸ್ ಕುರಿತು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಇತ್ತೀಚೆಗೆ ಟ್ವೀಟ್ ಮಾಡಿದ್ದರು. ‘ಅಪ್ಪು ಅವರ ಕನಸೊಂದು 01.11.2021 ರಂದು ಬೆಳಕು ಕಾಣಬೇಕಿತ್ತು. ಆದರೆ ಅ ಕನಸಿಗಿದು ಅಲ್ಪವಿರಾಮವಷ್ಟೇ. ಅದನ್ನು ಅವರಿಷ್ಟದಂತೆಯೇ ನಿಮ್ಮೆದುರು ನನಸಾಗಿಸುವ ಜವಾಬ್ದಾರಿ ನಮ್ಮದು. ಇಲ್ಲಿಯ ತನಕ ನೀವು ತೋರಿದ ಸಂಯಮ ಮತ್ತು ಸಹಕಾರಕ್ಕೆ ನಾವು ಆಭಾರಿ’ ಎಂದು ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ:
ಮೈಸೂರು ಅರಮನೆಯಿಂದ ಅಪ್ಪು ಸಮಾಧಿವರೆಗೆ ಸೈಕ್ಲಿಂಗ್; ಪುನೀತ್ ಅಭಿಮಾನಿಗಳಿಂದ ಹೀಗೊಂದು ಶ್ರದ್ಧಾಂಜಲಿ
ಸುದೀಪ್ಗಾಗಿ ದೇವಸ್ಥಾನ: ಕಿಚ್ಚನ 4 ಅಡಿ ಮೂರ್ತಿ ಎದುರು ಪುನೀತ್ ರಾಜ್‌ಕುಮಾರ್ ಭಾವಚಿತ್ರ