1985ರಲ್ಲಿ ಪುನೀತ್ ಹೆಸರು ಬದಲಾಯಿಸಿದ್ದಾಗ ನೀಡಿದ್ದ ಜಾಹೀರಾತು ವೈರಲ್
ಲೋಹಿತ್ ಆಗಿದ್ದ ಅವರು ನಂತರ ಪುನೀತ್ ರಾಜ್ಕುಮಾರ್ ಎಂಬ ಹೆಸರಿನಿಂದ ದೇಶಾದ್ಯಂತ ಖ್ಯಾತಿ ಗಳಿಸಿದರು. ಹೆಸರನ್ನು ಬದಲಾವಣೆ ಮಾಡಿದ ಸಂದರ್ಭದಲ್ಲಿ ನೀಡಿದ ಜಾಹೀರಾತಿನ ಪ್ರತಿ ವೈರಲ್ ಆಗುತ್ತಿದೆ.
ಪುನೀತ್ ರಾಜ್ಕುಮಾರ್ ಅವರ ಮೊದಲ ಹೆಸರು ಲೋಹಿತ್ ಎಂದಾಗಿತ್ತು. ನಂತರ ಇದನ್ನು ಪುನೀತ್ ರಾಜ್ಕುಮಾರ್ ಎಂದು ಬದಲಾಯಿಸಲಾಗಿತ್ತು. ಹೆಸರು ಬದಲಾವಣೆ ಮಾಡಿದ ನಂತರ ಪತ್ರಿಕೆಗಳಲ್ಲಿ ಜಾಹೀರಾತು ನೀಡಬೇಕು. ಅದೇ ರೀತಿ ಲೋಹಿತ್ ಎಂದು ಇದ್ದ ಹೆಸರನ್ನು ಪುನೀತ್ ಎಂದು ಬದಲಾವಣೆ ಮಾಡಿದ್ದರ ಬಗ್ಗೆ ಜಾಹೀರಾತು ನೀಡಲಾಗಿತ್ತು. ಇದಕ್ಕೆ ಸಂಬಂಧಿಸಿ ಡಾ. ರಾಜ್ಕುಮಾರ್ ಅವರು ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದರು. ಅದು ಈಗ ವೈರಲ್ ಆಗಿದೆ.
ಪುನೀತ್ ರಾಜ್ಕುಮಾರ್ ಬಾಲನಟ ಆಗಿದ್ದಾಗಿನಿಂದಲೂ ಪ್ರೇಕ್ಷಕರ ಮನ ಗೆದ್ದಿದ್ದರು. ಆ ದಿನಗಳಲ್ಲಿ ಅವರನ್ನು ಲೋಹಿತ್ ಎಂದು ಕರೆಯಲಾಗುತ್ತಿತ್ತು. ಮನೆಯಲ್ಲಿ ಪ್ರೀತಿಯಿಂದ ಅಪ್ಪು ಎಂದು ಕರೆಯುತ್ತಿದ್ದರು. ಬಳಿಕ ಪುನೀತ್ ರಾಜ್ಕುಮಾರ್ ಎಂಬ ಹೆಸರಿನಿಂದ ದೇಶಾದ್ಯಂತ ಖ್ಯಾತಿ ಗಳಿಸಿದರು. ಹೆಸರನ್ನು ಬದಲಾವಣೆ ಮಾಡಿದ ಸಂದರ್ಭದಲ್ಲಿ ನೀಡಿದ ಜಾಹೀರಾತಿನ ಪ್ರತಿ ವೈರಲ್ ಆಗುತ್ತಿದೆ.
‘ಡಾ. ರಾಜ್ಕುಮಾರ್ ಉರುಫ್ ಎಸ್.ಪಿ. ಮುತ್ತುರಾಜ್ ಆದ ನಾನು ನನ್ನ ಮಗ ಮಾಸ್ಟರ್ ಲೋಹಿತ್ ಹೆಸರನ್ನು ಇಂದಿನಿಂದ ಅಂದರೆ ದಿನಾಂಕ 16-3-1985ರಂದು ಮಾಸ್ಟರ್ ಪುನೀತ್ ಎಂಬುದಾಗಿ ಬದಲಾಯಿಸುತ್ತೇನೆ. ಈ ಹೆಸರು ಬದಲಾವಣೆ ಬಗ್ಗೆ ನೋಟರಿ ಎಸ್.ಬಿ. ಚಂದ್ರಶೇಖರ್ ಅವರ ಸಮಕ್ಷಮದಲ್ಲಿ ಪ್ರಮಾಣ ಪತ್ರ ಮಾಡಿಸಿರುತ್ತೇನೆ’ ಎಂದು ಜಾಹೀರಾತು ನೀಡಲಾಗಿತ್ತು.
ಮೊದಲ ಬಾರಿಗೆ ಪುನೀತ್ ರಾಜ್ಕುಮಾರ್ ಅವರನ್ನು ಅಪ್ಪು ಎಂದು ಕರೆದಿದ್ದು ಅವರ ಅಜ್ಜಿ. ರಾಜ್ಕುಮಾರ್ ಅವರ ತಾಯಿ ಲಕ್ಷ್ಮಮ್ಮ ಅವರಿಗೆ ಪುನೀತ್ ಎಂದರೆ ಎಲ್ಲಿಲ್ಲದ ಪ್ರೀತಿ. ಹಾಗಾಗಿ ಅವರು ಮೊಮ್ಮಗನನ್ನು ಅಪ್ಪು ಅಂತ ಕರೆಯುತ್ತಿದ್ದರು. ಮನೆಮಂದಿಗೆಲ್ಲ ಆ ಪ್ರೀತಿಯ ಹೆಸರು ಅಚ್ಚುಮೆಚ್ಚಾಗಿತ್ತು. ಪುನೀತ್ ಎಷ್ಟೇ ಎತ್ತರಕ್ಕೆ ಬೆಳೆದುನಿಂತರೂ ಆ ಪೆಟ್ ನೇಮ್ ಹೋಗಲೇ ಇಲ್ಲ. ಅವರು ಹೀರೋ ಆಗಿ ನಟಿಸಿದ ಮೊದಲ ಸಿನಿಮಾ ಹೆಸರು ಕೂಡ ‘ಅಪ್ಪು’. ಆದರೆ ಇಂದು ಆ ಹೆಸರಿನಿಂದ ಕರೆಸಿಕೊಳ್ಳಲು ಅವರೇ ನಮ್ಮೊಂದಿಗಿಲ್ಲ.
ಇದನ್ನೂ ಓದಿ: ‘ಪುನೀತ್ ಆಸ್ಪತ್ರೆಗೆ ಬಂದಾಗ ಸಹಜವಾಗಿಯೇ ಇದ್ದರು’; ಹಾಗಿದ್ದರೆ ತಪ್ಪು ನಡೆದಿದ್ದೆಲ್ಲಿ? ವೈದ್ಯರು ವಿವರಿಸಿದ್ದು ಹೀಗೆ
ಪುನೀತ್ ಸ್ಮರಣಾರ್ಥ ಸೋಮವಾರ ‘ರಾಜಕುಮಾರ’ ಸಿನಿಮಾ ಪ್ರದರ್ಶನ; ಅಭಿಮಾನಿಗಳಿಗೆ ಉಚಿತ ಪ್ರವೇಶ
Published On - 7:49 pm, Sun, 31 October 21