ಬೆಂಗಳೂರಿನ ಹಲವು ರಸ್ತೆಗಳಿಗೆ ಚಿತ್ರರಂಗದವರ ಹೆಸರು; ಇಲ್ಲಿದೆ ವಿವರ
ಮಾರ್ಚ್ 27ರಂದು ರೇಸ್ಕೋರ್ಸ್ ರಸ್ತೆಗೆ ಅಂಬರೀಷ್ ಹೆಸರು ಇಡಲಾಯಿತು. ಅದೇ ರೀತಿ ಬೆಂಗಳೂರಿನ ಅನೇಕ ರಸ್ತೆಗಳಿಗೆ ಚಿತ್ರರಂಗದವರ ಹೆಸರನ್ನು ನಾಮಕರಣ ಮಾಡಲಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಚಿತ್ರರಂಗದ ನಟ-ನಟಿಯರನ್ನು ಆರಾಧಿಸುವವರು ಅನೇಕರಿದ್ದಾರೆ. ನೆಚ್ಚಿನ ಸೆಲೆಬ್ರಿಟಿಗಾಗಿ ಏನನ್ನು ಮಾಡಲೂ ಅಭಿಮಾನಿಗಳು ಸಿದ್ಧರಿರುತ್ತಾರೆ. ಒಂದೊಮ್ಮೆ ಅವರು ತೀರಿಕೊಂಡರೆ ಪಾರ್ಕ್, ರಸ್ತೆಗಳಿಗೆ ಅವರ ಹೆಸರು ಇಡುವ ಮೂಲಕ ನೆಚ್ಚಿನ ಸೆಲೆಬ್ರಿಟಿಯ ನೆನಪನ್ನು ಸದಾ ಜೀವಂತವಾಗಿರಿಸಲು ಪ್ರಯತ್ನಿಸುತ್ತಾರೆ. ಈಗ ರೇಸ್ಕೋರ್ಸ್ ರಸ್ತೆಗೆ ಅಂಬರೀಷ್ (Ambareesh) ಅವರ ಹೆಸರನ್ನು ಇಡಲಾಗಿದೆ. ಇದೇ ರೀತಿ ಬೆಂಗಳೂರಿನ ಅನೇಕ ರಸ್ತೆಗಳಿಗೆ ಚಿತ್ರರಂಗದವರ (Film Industry) ಹೆಸರನ್ನು ನಾಮಕರಣ ಮಾಡಲಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಅಂಬರೀಷ್ ರಸ್ತೆ
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೆ ‘ರೆಬೆಲ್ ಸ್ಟಾರ್ ಡಾ. ಎಂ.ಎಚ್. ಅಂಬರೀಷ್ ರಸ್ತೆ’ ಎಂದು ನಾಮಕರಣ ಮಾಡಲಾಗಿದೆ. ಈ ರಸ್ತೆಯ ಸಮೀಪ ಫಿಲ್ಮ್ ಚೇಂಬರ್ ಇದೆ. ಗಾಂಧಿ ನಗರ ಇದೆ. ರೇಸ್ಕೋರ್ಸ್ ಕೂಡ ಇದೆ. ಇದೆಲ್ಲವೂ ಅಂಬಿ ಅವರು ಕೆಲಸ ಮಾಡುತ್ತಿದ್ದ ಜಾಗ ಆಗಿತ್ತು. ಹೀಗಾಗಿ, ಈ ಹೆಸರನ್ನು ಇಡಲಾಗಿದೆ.
ಡಾ. ಪುನೀತ್ ರಾಜ್ಕುಮಾರ್ ರಸ್ತೆ
ನಾಯಂಡಹಳ್ಳಿ ಜಂಕ್ಷನ್ನಿಂದ ವೆಗಾಸಿಟಿ ಮಾಲ್ವರೆಗಿನ ರಸ್ತೆಗೆ ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ಇಡಲಾಗಿದೆ. ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡ ಬಳಿಕ ರಸ್ತೆಗೆ ಅವರ ಹೆಸರು ಇಡಬೇಕು ಎನ್ನುವ ಆಗ್ರಹ ಕೇಳಿಬಂತು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ರಸ್ತೆಗೆ ಅಪ್ಪು ಹೆಸರನ್ನು ಇಡಲಾಗಿದೆ.
ಡಾ. ರಾಜ್ಕುಮಾರ್ ರಸ್ತೆ
ರಾಜ್ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ತುಂಬಾನೇ ದೊಡ್ಡದು. ನೂರಾರು ಸಿನಿಮಾಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡರು. ಅವರ ನಟನೆಯ ಸಿನಿಮಾಗಳನ್ನು ಈಗಲೂ ಭಕ್ತಿಯಿಂದ ವೀಕ್ಷಿಸುವವರ ಸಂಖ್ಯೆ ದೊಡ್ಡದಿದೆ. ಅವರ ನೆನಪನ್ನು ಸದಾ ಜೀವಂತವಾಗಿಡಲು ಬೆಂಗಳೂರಿನ ಜಿಟಿ ವರ್ಡ್ ಮಾಲ್ನಿಂದ ಒರಾಯನ್ ಮಾಲ್ ವರೆಗಿನ ರಸ್ತೆಗೆ ಡಾ. ರಾಜ್ಕುಮಾರ್ ರಸ್ತೆ ಎಂದು ಹೆಸರು ಇಡಲಾಗಿದೆ.
ಪಾರ್ವತಮ್ಮ ರಸ್ತೆ
ದಕ್ಷಿಣ ಬೆಂಗಳೂರಿನಲ್ಲಿರುವ ಯೆಡಿಯೂರು ಮುಖ್ಯ ರಸ್ತೆಗೆ ಪಾರ್ವತಮ್ಮ ರಾಜ್ಕುಮಾರ್ ಹೆಸರು ಇಡಲಾಗಿದೆ. ಪಾರ್ವತಮ್ಮ ಅವರು ಖ್ಯಾತ ನಿರ್ಮಾಪಕಿ ಆಗಿ ಗುರುತಿಸಿಕೊಂಡಿದ್ದರು. ಕನ್ನಡದಲ್ಲಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ರಾಘವೇಂದ್ರ ರಾಜ್ಕುಮಾರ್ ಅವರು ಈ ರಸ್ತೆಯನ್ನು ಉದ್ಘಾಟನೆ ಮಾಡಿದ್ದರು.
ವಿಷ್ಣುವರ್ಧನ್ ರಸ್ತೆ
ಬನಶಂಕರಿ ದೇವಸ್ಥಾನದಿಂದ ಕೆಂಗೇರಿ ಮಧ್ಯೆ ಇರುವ ರಸ್ತೆಗೆ ವಿಷ್ಣುವರ್ಧನ್ ಹೆಸರು ಇಡಲಾಗಿದೆ. ಈ ರಸ್ತೆ 14 ಕಿ.ಮೀ. ಉದ್ದವಿದೆ. ವಿಷ್ಣುವರ್ಧನ್ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರನ್ನು ನೆನಪಿನಲ್ಲಿಟ್ಟುಕೊಳ್ಳಲು ಈ ರಸ್ತೆಗೆ ವಿಷ್ಣು ಹೆಸರು ಇಡಲಾಗಿದೆ.
ಶಂಕರ್ನಾಗ್ ರಸ್ತೆ
ಕನ್ನಡ ಚಿತ್ರರಂಗ ಕಂಡ ಖ್ಯಾತ ನಟ, ನಿರ್ದೇಶಕ ಶಂಕರ್ ನಾಗ್. ಸಣ್ಣ ವಯಸ್ಸಿನಲ್ಲೇ ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಅವರನ್ನು ಕಳೆದುಕೊಂಡಿದ್ದು ಚಿತ್ರರಂಗಕ್ಕೆ ದೊಡ್ಡ ನಷ್ಟ. ಬೊಮ್ಮನಹಳ್ಳಿ ರಸ್ತೆಗೆ ಶಂಕರ್ನಾಗ್ ಹೆಸರನ್ನು ಇಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:53 am, Tue, 28 March 23