ಈಗ ಎಲ್ಲೆಲ್ಲೂ ಚುನಾವಣೆಯ ಕಾವು ಜೋರಾಗಿದೆ. ಜನರ ಪೂರ್ತಿ ಗಮನ ಲೋಕಸಭಾ ಚುನಾವಣೆ ಮೇಲಿದೆ. ಹಾಗಾಗಿ ಸಿನಿಮಾ ಚಟುವಟಿಕೆಗಳು ಸ್ವಲ್ಪ ಮಂಕಾಗಿವೆ. ಕನ್ನಡದಲ್ಲಿ ದೊಡ್ಡ ಸಿನಿಮಾಗಳು ಯಾವುದೂ ರಿಲೀಸ್ ಆಗುತ್ತಿಲ್ಲ. ಈ ಸಂದರ್ಭದಲ್ಲಿ ಹಳೇ ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡುವ ಟ್ರೆಂಡ್ ಬಂದಿದೆ. ‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ (Puneeth Rajkumar) ಅಭಿಮಾನಿಗಳಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ಮೇ 10ರಂದು ‘ಅಂಜನಿಪುತ್ರ’ (Anjani Putra) ಸಿನಿಮಾವನ್ನು ಮರುಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಈ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಅವರಿಗೆ ರಶ್ಮಿಕಾ ಮಂದಣ್ಣ (Rashmika Mandanna) ನಾಯಕಿ.
‘ಎಂ.ಎನ್.ಕೆ ಮೂವೀಸ್’ ಮೂಲಕ ಎಂ.ಎನ್. ಕುಮಾರ್ ಅವರು ‘ಅಂಜನಿಪುತ್ರ’ ಸಿನಿಮಾವನ್ನು ನಿರ್ಮಿಸಿದ್ದಾರೆ. ಎ. ಹರ್ಷ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. ಪುನೀತ್ ರಾಜ್ಕುಮಾರ್ ಹಾಗೂ ರಶ್ಮಿಕಾ ಮಂದಣ್ಣ ಅವರು ಜೋಡಿಯಾಗಿ ನಟಿಸಿದ್ದ ಈ ಸಿನಿಮಾ 2017ರ ಡಿಸೆಂಬರ್ 21ರಂದು ಬಿಡುಗಡೆ ಆಗಿತ್ತು. ಈಗ ಮರು ಬಿಡುಗಡೆ ಆಗುತ್ತಿರುವುದು ಅಪ್ಪು ಫ್ಯಾನ್ಸ್ಗೆ ಖುಷಿ ನೀಡಿದೆ.
‘ಅಂಜನಿಪುತ್ರ’ ಸಿನಿಮಾವನ್ನು ಮೇ 10ರಂದು ರಾಜ್ಯಾದ್ಯಂತ ಅಧಿಕ ಸಂಖ್ಯೆಯ ಥಿಯೇಟರ್ಗಳಲ್ಲಿ ಅದ್ದೂರಿಯಾಗಿ ಮರು ಬಿಡುಗಡೆ ಮಾಡಲಾಗುವುದು ಎಂದು ನಿರ್ಮಾಪಕ ಎಂ.ಎನ್. ಕುಮಾರ್ ಅವರು ತಿಳಿಸಿದ್ದಾರೆ. ಪುನೀತ್ ರಾಜ್ಕುಮಾರ್ ಅವರನ್ನು ಮತ್ತೊಮ್ಮೆ ದೊಡ್ಡ ಪರದೆ ಮೇಲೆ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗುತ್ತಿದೆ.
ಇದನ್ನೂ ಓದಿ: ‘ಆ ನಟನಿಗೆ ಎಲ್ಲವೂ ಗೊತ್ತು, ಆದ್ರೂ ಮಾತಾಡ್ತಿಲ್ಲ’: ಪುನೀತ್ ಫ್ಯಾನ್ಸ್ ಆರೋಪ
ರಶ್ಮಿಕಾ ಮಂದಣ್ಣ ಅವರು ನಟಿಸಿದ ಕೆಲವೇ ಕನ್ನಡ ಸಿನಿಮಾಗಳಲ್ಲಿ ‘ಅಂಜನಿಪುತ್ರ’ ಕೂಡ ಒಂದು. ‘ಕಿರಿಕ್ ಪಾರ್ಟಿ’ ಸಿನಿಮಾದ ಯಶಸ್ವಿನ ಬಳಿಕ ಅವರಿಗೆ ಈ ಆಫರ್ ಸಿಕ್ಕಿತ್ತು. ಈ ಚಿತ್ರಕ್ಕೆ ರವಿ ಬಸ್ರೂರ್ ಅವರ ಸಂಗೀತ ನಿರ್ದೇಶನವಿದೆ. ಆ ಸಿನಿಮಾದ ‘ಬಾರಿ ಖುಷಿ ಮಾರ್ರೆ ನಂಗೆ..’ ಹಾಡು ಸೂಪರ್ ಹಿಟ್ ಆಗಿತ್ತು. ಪುನೀತ್ ರಾಜ್ಕುಮಾರ್ ಅವರನ್ನು ಅಭಿಮಾನಿಗಳು ಪ್ರತಿ ದಿನವೂ ಮಿಸ್ ಮಾಡಿಕೊಳ್ಳುತ್ತಾರೆ. ಇಂದು ಅವರು ಭೌತಿಕವಾಗಿ ಇಲ್ಲದೇ ಇರಬಹುದು. ಆದರೆ ಸಿನಿಮಾಗಳ ಮೂಲಕ ಅವರು ಜೀವಂತವಾಗಿದ್ದಾರೆ. ಈ ವರ್ಷ ಅವರ ಜನ್ಮದಿನದ ಪ್ರಯುಕ್ತ ‘ಜಾಕಿ’ ಸಿನಿಮಾ ಮರುಬಿಡುಗಡೆಯಾಗಿ ಯಶಸ್ಸು ಕಂಡಿತ್ತು. ಈಗ ‘ಅಂಜನಿಪುತ್ರ’ ಸಿನಿಮಾ ಮತ್ತೆ ಚಿತ್ರಮಂದಿರಕ್ಕೆ ಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.