Appu Movie: ‘ಅಪ್ಪು’ ಚಿತ್ರಕ್ಕೆ 22 ವರ್ಷ: ಪುನೀತ್ ಚಿತ್ರಕ್ಕೆ ಈ ಟೈಟಲ್ ಸಿಕ್ಕಿದ್ದು ಹೇಗೆ ಗೊತ್ತಾ?
22 Years For Appu: ಪುನೀತ್ ರಾಜ್ಕುಮಾರ್ ಹೀರೋ ಆಗಿ ನಟಿಸಿದ ಮೊದಲ ಸಿನಿಮಾ ‘ಅಪ್ಪು’. ಈ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ ಗೆಲ್ಲುವಲ್ಲಿ ಸಿನಿಮಾದ ಮ್ಯೂಸಿಕ್ ಪಾತ್ರವೂ ದೊಡ್ಡದಿತ್ತು. ಸಿನಿಮಾಗೆ ‘ಅಪ್ಪು’ ಟೈಟಲ್ ಸಿಕ್ಕಿದ್ದು ಹೇಗೆ ಎನ್ನುವ ಬಗ್ಗೆ ಗುರುಕಿರಣ್ ಮಾಹಿತಿ ನೀಡಿದ್ದಾರೆ.
ಪುನೀತ್ ರಾಜ್ಕುಮಾರ್ ನಟನೆಯ ‘ಅಪ್ಪು’ ಸಿನಿಮಾ (Appu Movie) ರಿಲೀಸ್ ಆಗಿ ಇಂದಿಗೆ (ಏಪ್ರಿಲ್ 26) 22 ವರ್ಷ. 2002ರ ಏಪ್ರಿಲ್ 22ರಂದು ಈ ಸಿನಿಮಾ ರಿಲೀಸ್ ಆಯಿತು. ಈ ಚಿತ್ರ ಅಂದಿನಕಾಲಕ್ಕೆ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಈ ಚಿತ್ರದ ಮೂಲಕ ಪುನೀತ್ ರಾಜ್ಕುಮಾರ್ ಅವರಿಗೆ ಹೀರೋ ಆಗಿ ಒಳ್ಳೆಯ ಓಪನಿಂಗ್ ಸಿಕ್ಕಿತ್ತು. ಈ ಚಿತ್ರಕ್ಕೆ ‘ಅಪ್ಪು’ ಟೈಟಲ್ ಬಂದಿದ್ದು ಹೇಗೆ? ಈ ಟೈಟಲ್ ಫೈನಲ್ ಮಾಡಿದ್ದು ಯಾರು? ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
2001ರಲ್ಲಿ ‘ಯುವರಾಜ’ ಸಿನಿಮಾ ರಿಲೀಸ್ ಆಗಿ ಹಿಟ್ ಆಯಿತು. ಶಿವಣ್ಣ ನಟನೆಯ ಈ ಚಿತ್ರವನ್ನು ಪುರಿ ಜಗನ್ನಾಥ್ ನಿರ್ದೇಶನ ಮಾಡಿದ್ದರು. ಇದೇ ವೇಳೆ ರಾಜ್ಕುಮಾರ್ ಕುಟುಂಬದವರು ಪುನೀತ್ನ ಪರಿಚಯಿಸಲು ಮುಂದಾಗಿದ್ದರು. ಆಗ ಮತ್ತೆ ಪುರಿ ಜಗನ್ನಾಥ್ ಅವರಿಗೆ ಆಫರ್ ನೀಡಲಾಯಿತು. ಇದನ್ನು ನಿರ್ದೇಶಕರು ಖುಷಿಯಿಂದ ಒಪ್ಪಿದರು. ಪುನೀತ್ ಅವರಿಗೆ ಹೊಂದಿಕೆ ಆಗುವಂಥ ಕಥೆಯನ್ನು ಬರೆದರು. ಛಾಯಾಗ್ರಾಹಕ ಬಿಸಿ ಗೌರಿಶಂಕರ್ ಮಗಳು ರಕ್ಷಿತಾ ಅವರು ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಅವರಿಗೆ ಈ ಚಿತ್ರದಿಂದ ದೊಡ್ಡ ಗೆಲುವು ಸಿಕ್ಕಿತು.
ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ಗುರುಕಿರಣ್. ಅವರು, ಸಿನಿಮಾಗೆ ಈ ಟೈಟಲ್ ಸಿಕ್ಕಿದ್ದು ಹೇಗೆ ಎನ್ನುವ ಬಗ್ಗೆ ಮಾತನಾಡಿದ್ದಾರೆ. ‘ಅಪ್ಪು ಟೈಟಲ್ ಫೈನಲ್ ಮಾಡಿದ್ದು ಪಾರ್ವತಮ್ಮ ಅವರು. ಮನೆಯಲ್ಲಿ ಪುನೀತ್ ಅವರನ್ನು ಅಪ್ಪು ಎಂದೇ ಕರೆಯುತ್ತಿದ್ದರು. ಇದು ಅವರ ಪೆಟ್ ನೇಮ್. ಈ ಕಾರಣಕ್ಕೆ ಈ ಚಿತ್ರಕ್ಕೆ ಅಪ್ಪು ಎಂದು ಟೈಟಲ್ ಇಡಲಾಯಿತು’ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹಠಾತ್ ಹೃದಯಾಘಾತ ತಪ್ಪಿಸಲು ಮುಂದಾದ ಸರ್ಕಾರ; ಪುನೀತ್ ಸ್ಮರಣಾರ್ಥ ಹೊಸ ಯೋಜನೆ ಜಾರಿಗೆ
ವಿಶೇಷ ಎಂದರೆ ಈ ಸಿನಿಮಾ ತೆಲುಗು ಹಾಗೂ ತಮಿಳು ಭಾಷೆಗೆ ರಿಮೇಕ್ ಆಗಿದೆ. ತೆಲುಗಿನಲ್ಲಿ ‘ಈಡಿಯಟ್’ ಹೆಸರಿನಲ್ಲಿ ರಿಮೇಕ್ ಆಯಿತು. ಪುರಿ ಜಗನ್ನಾಥ್ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ರವಿತೇಜ ಹಾಗೂ ರಕ್ಷಿತಾ ಈ ಚಿತ್ರದಲ್ಲಿ ನಟಿಸಿದ್ದರು. ತಮಿಳಿಗೆ ಈ ಸಿನಿಮಾ ‘ದಮ್’ ಹೆಸರಲ್ಲಿ ರಿಮೇಕ್ ಆಯಿತು. ಈ ಚಿತ್ರಕ್ಕೂ ರಕ್ಷಿತಾ ನಾಯಕಿ. ಸಿಂಬು ಹೀರೋ ಆಗಿ ನಟಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:28 am, Fri, 26 April 24