16ನೇ ವಯಸ್ಸಲ್ಲಿ ಅಪ್ಪುಗೆ ಅಮ್ಮ ಕೊಡಿಸಿದ್ರು ಕಾರು: ಆದ್ರೆ ಜನರಿಂದ ಕೇಳಿಬಂದಿತ್ತು ಚುಚ್ಚುಮಾತು; ನಂತರ ಏನಾಯ್ತು?
Puneeth Rajkumar Unknown Facts: ಆ ಚುಚ್ಚು ಮಾತನ್ನೇ ಪುನೀತ್ ರಾಜ್ಕುಮಾರ್ ಅವರು ಸವಾಲಾಗಿ ಸ್ವೀಕರಿಸಿದರು. ಏನಾದರೂ ಮಾಡಲೇಬೇಕು ಎಂದು ನಿರ್ಧರಿಸಿದರು. ಹಲವಾರು ಬಿಸ್ನೆಸ್ನಲ್ಲಿ ಅವರು ತೊಡಗಿಕೊಂಡರು.
ಸೆಲೆಬ್ರಿಟಿಗಳ ಮಕ್ಕಳಾಗಿರುವುದು ಸುಲಭದ ಮಾತಲ್ಲ. ಸ್ಟಾರ್ ಕಿಡ್ ಎಂಬ ಪಟ್ಟ ಯಾವಾಗಲೂ ಜೊತೆಗಿರುತ್ತದೆ. ಅದನ್ನು ಮೀರಿ ತಮ್ಮದೇ ಸ್ವಂತ ಐಡೆಂಟಿಟಿಯನ್ನು ಕಟ್ಟಿಕೊಳ್ಳುವುದು ಸವಾಲಿನ ಕೆಲಸ. ಪುನೀತ್ ರಾಜ್ಕುಮಾರ್ (Puneeth Rajkumar) ಅವರಿಗೂ ಈ ವಿಚಾರ ಪರಿಣಾಮ ಬೀರಿತ್ತು. ಇಂದು ಭೌತಿಕವಾಗಿ ಅಪ್ಪು ನಮ್ಮೊಂದಿಗೆ ಇಲ್ಲ. ಕೆಲವೇ ದಿನಗಳು ಕಳೆದರೆ ಅವರು ಇಹಲೋಕ ತ್ಯಜಿಸಿ ಒಂದು ವರ್ಷ (Puneeth Rajkumar Death Anniversary) ಪೂರೈಸಲಿದೆ. ಈ ಸಂದರ್ಭದಲ್ಲಿ ‘ಪವರ್ ಸ್ಟಾರ್’ ಜೀವನದ ಕೆಲವು ಅಪರೂಪದ ಮಾಹಿತಿಯನ್ನು ಮೆಲುಕು ಹಾಕಲಾಗುತ್ತಿದೆ. ಡಾ. ರಾಜ್ಕುಮಾರ್ (Dr Rajkumar) ಪುತ್ರನಾದ ಪುನೀತ್ ರಾಜ್ಕುಮಾರ್ ಅವರು ಬಡತನ ಕಂಡವರಲ್ಲ. ಮುದ್ದಿನ ಮಗನಾಗಿದ್ದ ಅವರಿಗೆ ಕೇಳಿದ್ದೆಲ್ಲವನ್ನೂ ಕೊಡಿಸಲಾಗುತ್ತಿತ್ತು. ಆ ಬಗ್ಗೆ ಅನೇಕ ಬಾರಿ ಪುನೀತ್ ರಾಜ್ಕುಮಾರ್ ಹೇಳಿಕೊಂಡಿದ್ದುಂಟು.
ಬಾಲನಟನಾಗಿ ಅನೇಕ ಸಿನಿಮಾಗಳಲ್ಲಿ ನಟಿಸಿದ ಬಳಿಕ ಪುನೀತ್ ರಾಜ್ಕುಮಾರ್ ಅವರು ಒಂದು ಬ್ರೇಕ್ ಪಡೆದುಕೊಂಡರು. ಮತ್ತೆ ಚಿತ್ರರಂಗಕ್ಕೆ ಬರಬೇಕು ಎಂಬ ಉದ್ದೇಶ ಅವರಿಗೆ ಇರಲಿಲ್ಲ. ಆದರೂ ಕೂಡ ಅವರಿಗೆ ತಮ್ಮದೇ ಸ್ವಂತ ಐಡೆಂಟಿಟಿ ಹೊಂದಬೇಕು ಎಂಬ ಹಂಬಲ ಇತ್ತು. ಅದಕ್ಕೆ ಕಾರಣ ಆಗಿದ್ದು ಒಂದು ಘಟನೆ. ಈ ಕುರಿತು ಸಂದರ್ಶನವೊಂದರಲ್ಲಿ ಪುನೀತ್ ಮಾತನಾಡಿದ್ದರು.
‘ನನ್ನ 16ನೇ ವರ್ಷದ ಹುಟ್ಟುಹಬ್ಬಕ್ಕೆ ಅಮ್ಮ ಒಂದು ಕಾರನ್ನು ಉಡುಗೊರೆಯಾಗಿ ನೀಡಿದರು. ಅದನ್ನು ನಾನು ಓಡಿಸಿಕೊಂಡು ಹೋಗುವಾಗ ಮೂಲೆಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು, ‘ನೋಡು.. ಅಪ್ಪನ ದುಡ್ಡು ಹೇಗೆ ಉಡೀಸ್ ಮಾಡ್ತಾ ಇದ್ದಾನೆ’ ಎಂತ ಹೇಳಿದ್ದು ನನಗೆ ಕೇಳಿಸಿತು. ಆ ಮಾತು ನನ್ನ ಮನಸ್ಸಿನಲ್ಲಿ ಉಳಿದು ಬಿಡ್ತು’ ಎಂದು ಪುನೀತ್ ರಾಜ್ಕುಮಾರ್ ಆ ಸಂದರ್ಶನದಲ್ಲಿ ಹೇಳಿದ್ದರು.
ಆ ಮಾತನ್ನೇ ಅವರು ಸವಾಲಾಗಿ ಸ್ವೀಕರಿಸಿದರು. ಏನಾದರೂ ಮಾಡಲೇಬೇಕು ಎಂದು ನಿರ್ಧರಿಸಿದರು. ಹಲವಾರು ಬಿಸ್ನೆಸ್ನಲ್ಲಿ ಅವರು ತೊಡಗಿಕೊಂಡರು. ಆದರೆ ಯಾವುದೂ ಕೂಡ ಅಂದುಕೊಂಡ ಮಟ್ಟಕ್ಕೆ ಫಲ ನೀಡಲಿಲ್ಲ. ಕೊನೆಗೂ ಅವರಿಗೆ ಮತ್ತೆ ಕೈ ಹಿಡಿದಿದ್ದು ನಟನೆ. ಹೌದು, ‘ಅಪ್ಪು’ ಸಿನಿಮಾ ಮೂಲಕ ಹೀರೋ ಆಗಿ ಅವರು ಚಿತ್ರರಂಗಕ್ಕೆ ಎಂಟ್ರಿ ಪಡೆದರು.
ಮನಸೆಳೆಯುವಂತಹ ಅಭಿನಯ, ಅತ್ಯುತ್ತಮ ಡ್ಯಾನ್ಸ್, ಭರ್ಜರಿ ಫೈಟಿಂಗ್.. ಹೀಗೆ ಎಲ್ಲದರಲ್ಲೂ ಪುನೀತ್ ರಾಜ್ಕುಮಾರ್ ಅವರು ಜನಮನ ಗೆದ್ದರು. ಹೀರೋ ಆಗಿ ಅವರನ್ನು ಜನರು ಪ್ರೀತಿಯಿಂದ ಸ್ವೀಕರಿಸಿದರು. ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತ ‘ಪವರ್ ಸ್ಟಾರ್’ ಆಗಿ ಪುನೀತ್ ಬೆಳೆದರು. ಸ್ಟಾರ್ ಕಿಡ್ ಆಗಿದ್ದರೂ ಕೂಡ ತಮ್ಮದೇ ಸ್ವಂತ ಐಡೆಂಟಿಟಿ ಕಟ್ಟಿಕೊಳ್ಳುವಲ್ಲಿ ಪುನೀತ್ ಯಶಸ್ವಿಯಾದರು. ಹೀಗೆ ಸ್ವಂತವಾಗಿ ದುಡಿದ ಹಣದಲ್ಲಿ ಐಷಾರಾಮಿ ಕಾರುಗಳನ್ನು ಖರೀದಿಸಿದರು.
ಇಂದು ಕೋಟ್ಯಂತರ ಅಭಿಮಾನಿಗಳ ಎದೆಯಲ್ಲಿ ಪುನೀತ್ ರಾಜ್ಕುಮಾರ್ ಹೆಸರು ಶಾಶ್ವತವಾಗಿ ಉಳಿದುಕೊಂಡಿದೆ. ಮಾಡಿದ ಸಾಮಾಜಿಕ ಕಾರ್ಯ ಮತ್ತು ಸಿನಿಮಾಗಳ ಮೂಲಕ ಅವರನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಲಾಗುತ್ತಿದೆ. ಅನೇಕ ವೃತ್ತ, ಪಾರ್ಕ್, ರಸ್ತೆಗಳಿಗೆ ಪುನೀತ್ ಹೆಸರನ್ನು ಇಡಲಾಗಿದೆ. ಹಲವಾರು ಕಡೆಗಳಲ್ಲಿ ಅಪ್ಪು ಪ್ರತಿಮೆ, ಪುತ್ತಳಿ ರಾರಾಜಿಸುತ್ತಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.