Kantara Hindi Trailer: ಹಿಂದಿಯಲ್ಲೂ ಬರಲಿದೆ ‘ಕಾಂತಾರ’; ಕನ್ನಡದ ಚಿತ್ರಕ್ಕೆ ಈಗ ಭರ್ಜರಿ ಡಿಮ್ಯಾಂಡ್
Rishab Shetty | Kantara Movie: ಪರಭಾಷೆ ಪ್ರೇಕ್ಷಕರಿಂದ ‘ಕಾಂತಾರ’ ಚಿತ್ರಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಹಿಂದಿಗೆ ಡಬ್ ಮಾಡಿ ರಿಲೀಸ್ ಮಾಡಲು ನಿರ್ಧರಿಸಲಾಗಿದೆ.
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ’ (Kantara) ಸಿನಿಮಾ ನಿರೀಕ್ಷೆಗೂ ಮೀರಿ ಸೂಪರ್ ಹಿಟ್ ಆಗಿದೆ. ಬಿಡುಗಡೆಯಾಗಿ ಒಂದು ವಾರ ಕಳೆದಿದ್ದರೂ ಸಹ ಅನೇಕ ಕಡೆಗಳಲ್ಲಿ ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಇದು ರಿಷಬ್ ಶೆಟ್ಟಿ (Rishab Shetty) ವೃತ್ತಿಜೀವನಕ್ಕೆ ದೊಡ್ಡ ಮೈಲೇಜ್ ನೀಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ ಈ ಸಿನಿಮಾ ಬಗ್ಗೆ ದೇಶಾದ್ಯಂತ ಟಾಕ್ ಸೃಷ್ಟಿ ಆಗಿದೆ. ಹಿಂದಿ ಪ್ರೇಕ್ಷಕರು ಕೂಡ ‘ಕಾಂತಾರ’ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಆ ಕಾರಣದಿಂದ ಹಿಂದಿಯಲ್ಲೂ ಟ್ರೇಲರ್ (Kantara movie Hindi trailer) ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಬಗ್ಗೆ ಸ್ವತಃ ರಿಷಬ್ ಶೆಟ್ಟಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯಡಿಯಲ್ಲಿ ‘ಕಾಂತಾರ’ ಚಿತ್ರ ತಯಾರಾಗಿದೆ. ಸಾಮಾನ್ಯವಾಗಿ ಈ ಬ್ಯಾನರ್ನ ಸಿನಿಮಾಗಳು ಹಲವು ಭಾಷೆಗಳಿಗೆ ಡಬ್ ಆಗಿ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತವೆ. ಆದರೆ ‘ಕಾಂತಾರ’ ಚಿತ್ರವನ್ನು ಕೇವಲ ಕನ್ನಡದಲ್ಲಿ ಮಾತ್ರ ರಿಲೀಸ್ ಮಾಡಲಾಗಿತ್ತು. ಈಗ ಪರಭಾಷೆ ಪ್ರೇಕ್ಷಕರಿಂದ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಹಿಂದಿಗೆ ಡಬ್ ಮಾಡಿ ರಿಲೀಸ್ ಮಾಡಲು ನಿರ್ಧರಿಸಲಾಗಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚಿತ್ರತಂಡ ಗುಡ್ ನ್ಯೂಸ್ ನೀಡಿದೆ.
ಅಕ್ಟೋಬರ್ 9ರಂದು ಬೆಳಗ್ಗೆ 9.10ಕ್ಕೆ ‘ಕಾಂತಾರ’ ಚಿತ್ರದ ಹಿಂದಿ ಟ್ರೇಲರ್ ಬಿಡುಗಡೆ ಆಗಲಿದೆ ಎಂದು ‘ಹೊಂಬಾಳೆ ಫಿಲ್ಸ್ಮ್’ ಟ್ವೀಟ್ ಮಾಡಿದೆ. ಈ ಸುದ್ದಿ ಕೇಳಿ ಉತ್ತರ ಭಾರತದ ಪ್ರೇಕ್ಷಕರು ಫಿದಾ ಆಗಿದ್ದಾರೆ. ಬುಕ್ ಮೈ ಶೋನಲ್ಲಿ ಈವರೆಗೆ (ಅ.7) 33 ಸಾವಿರಕ್ಕೂ ಅಧಿಕ ಜನರು ವೋಟ್ ಮಾಡಿದ್ದಾರೆ. ಶೇಕಡ 99ರಷ್ಟು ರೇಟಿಂಗ್ ಪಡೆಯುವಲ್ಲಿ ಈ ಚಿತ್ರ ಯಶಸ್ವಿ ಆಗಿದೆ. ಆ ಮೂಲಕ ಪರರಾಜ್ಯಗಳಲ್ಲಿ ಇರುವ ಪ್ರೇಕ್ಷಕರಿಗೂ ಈ ಸಿನಿಮಾ ಬಗ್ಗೆ ಕೌತುಕ ಮೂಡುವಂತಾಗಿದೆ.
Get ready to be enchanted by the divinity. Witness and feel the power of the divine. #Kantara Hindi Trailer to be launched on Oct 9th at 9:10 AM.@shetty_rishab @VKiragandur @hombalefilms @AAFilmsIndia @HombaleGroup @gowda_sapthami @AJANEESHB @actorkishore @KantaraFilm pic.twitter.com/XjbqePqNpn
— Rishab Shetty (@shetty_rishab) October 6, 2022
ಕರ್ನಾಟಕದಲ್ಲಿರುವ ಪರಭಾಷಿಗರು ಕನ್ನಡದಲ್ಲಿಯೇ ಈ ಚಿತ್ರವನ್ನು ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಹಿಂದಿಯಲ್ಲಿ ನೋಡುವ ಅವಕಾಶ ಸಿಗಲಿದೆ. ಅಪ್ಪಟ ಕರಾವಳಿಯ ಸೊಗಡಿನಲ್ಲಿ ಈ ಚಿತ್ರ ಮೂಡಿಬಂದಿದೆ. ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್, ಪ್ರಮೋದ್ ಶೆಟ್ಟಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾಗಳಿಗೆ ಇದು ಸುವರ್ಣ ಕಾಲ. ‘ಕೆಜಿಎಫ್: ಚಾಪ್ಟರ್ 2’, ‘777 ಚಾರ್ಲಿ’, ‘ವಿಕ್ರಾಂತ್ ರೋಣ’ ಮುಂತಾದ ಸಿನಿಮಾಗಳು ದೇಶಾದ್ಯಂತ ಗಮನ ಸೆಳೆದವು. ಈಗ ಅವುಗಳ ಸಾಲಿಗೆ ‘ಕಾಂತಾರ’ ಚಿತ್ರ ಕೂಡ ಸೇರ್ಪಡೆ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:31 am, Fri, 7 October 22