‘ರಾಧೆ ಶ್ಯಾಮ್’ ಸಿನಿಮಾ (Radhe Shyam Movie) ಬಗ್ಗೆ ಪ್ರಭಾಸ್ಗೆ (Prabhas) ದೊಡ್ಡ ಮಟ್ಟದ ನಿರೀಕ್ಷೆ ಇತ್ತು. ಈ ಚಿತ್ರ ನಿರ್ಮಾಣಕ್ಕೆ 300 ಕೋಟಿಗೂ ಹೆಚ್ಚಿನ ಮೊತ್ತವನ್ನು ನಿರ್ಮಾಪಕರು ಖರ್ಚು ಮಾಡಿದ್ದಾರೆ. ಆದರೆ, ಅಷ್ಟು ದೊಡ್ಡ ಮೊತ್ತದ ಹಣವನ್ನು ಬಾಕ್ಸ್ ಆಫೀಸ್ ಮೂಲಕ ಹಿಂಪಡೆಯೋಕೆ ಚಿತ್ರತಂಡಕ್ಕೆ ಸಾಧ್ಯವಾಗುತ್ತಿಲ್ಲ. ನೆಗೆಟಿವ್ ವಿಮರ್ಶೆ ಸಿಕ್ಕಿದ್ದು ಸಿನಿಮಾಗೆ ದೊಡ್ಡ ಹೊಡೆತ ನೀಡಿದೆ. ಕರ್ನಾಟಕದಲ್ಲಿ ‘ರಾಧೆ ಶ್ಯಾಮ್’ ಸಿನಿಮಾದ ಆಟ ಈ ವಾರವೇ ಮುಗಿಯಲಿದೆ. ಸಿನಿಮಾ ಅಷ್ಟಾಗಿ ಬುಕ್ ಆಗುತ್ತಿಲ್ಲ. ಇದರ ಜತೆಗೆ ಪುನೀತ್ ನಟನೆಯ ‘ಜೇಮ್ಸ್’ ಸಿನಿಮಾ (James Movie) ಅಬ್ಬರ ಶುರುವಾಗಲಿದೆ. ಪುನೀತ್ ಹೀರೋ ಆಗಿ ನಟಿಸಿರುವ ಕೊನೆಯ ಸಿನಿಮಾ ಇದಾಗಿರುವುದರಿಂದ ಅಭಿಮಾನಿಗಳು ಈ ಚಿತ್ರದ ರಿಲೀಸ್ಗಾಗಿ ಕಾದು ಕೂತಿದ್ದಾರೆ. ಕರ್ನಾಟಕದ ಬಹುತೇಕ ಚಿತ್ರಮಂದಿರಗಳಲ್ಲಿ ಇದೇ ಸಿನಿಮಾ ರಾರಾಜಿಸಲಿದೆ.
‘ಜೇಮ್ಸ್’ ಸಿನಿಮಾ ಬಗ್ಗೆ ಅಭಿಮಾನಿಗಳು ಭಾವನಾತ್ಮಕವಾಗಿ ಕನೆಕ್ಟ್ ಆಗಿದ್ದಾರೆ. ಹೀಗಾಗಿ, ಚಿತ್ರ ಸಖತ್ ಹೈಪ್ ಸೃಷ್ಟಿ ಮಾಡಿದೆ. ಈ ಸಿನಿಮಾ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾದು ಕೂತಿದ್ದಾರೆ. ಬೆಂಗಳೂರಿನಲ್ಲಿ ಒಂದೇ ಗುರುವಾರ 750ಕ್ಕೂ ಅಧಿಕ ಶೋ ನೀಡಲಾಗಿದೆ. ಇದರ ಸಂಖ್ಯೆ ನಾಳೆ (ಮಾರ್ಚ್ 16) ಸಂಜೆ ವೇಳೆಗೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ, ಗುರುವಾರದಿಂದ (ಮಾರ್ಚ್ 17) ‘ಜೇಮ್ಸ್’ ಅಬ್ಬರ ಶುರುವಾಗಲಿದೆ.
ಕರ್ನಾಟಕದ ಶೇ. 80 ಚಿತ್ರಮಂದಿರಗಳಲ್ಲಿ ಪುನೀತ್ ನಟನೆಯ ‘ಜೇಮ್ಸ್’ ಪ್ರದರ್ಶನ ಕಾಣಲಿದೆ. ಸದ್ಯ, ಬೆಂಗಳೂರಿನ ಅನೇಕ ಚಿತ್ರಮಂದಿರಗಳಲ್ಲಿ ‘ರಾಧೆ ಶ್ಯಾಮ್’ ಪ್ರದರ್ಶನ ಕಾಣುತ್ತಿದೆ. ಆ ಚಿತ್ರಮಂದಿರಗಳಲ್ಲಿ ಜೇಮ್ಸ್ ಚಿತ್ರಕ್ಕಾಗಿ ಪ್ರಭಾಸ್ ಸಿನಿಮಾ ದಾರಿ ಬಿಟ್ಟುಕೊಡೋದು ಅನಿವಾರ್ಯ ಆಗಲಿದೆ. ಸಿನಿಮಾ ಉತ್ತಮವಾಗಿಲ್ಲ ಎನ್ನುವುದು ಒಂದು ಕಾರಣವಾದರೆ, ‘ಜೇಮ್ಸ್’ ಅಬ್ಬರ ಜೋರಿರುವ ಕಾರಣಕ್ಕೆ ಪ್ರಭಾಸ್ ಸಿನಿಮಾ ಈ ವಾರವೇ ಕರ್ನಾಟಕದಲ್ಲಿ ಬಹುತೇಕ ಆಟ ನಿಲ್ಲಿಸಲಿದೆ.
‘ರಾಧೆ ಶ್ಯಾಮ್’ ಸಿನಿಮಾದಲ್ಲಿ ಪ್ರಭಾಸ್ ಹೀರೋ ಆಗಿ ಕಾಣಿಸಿಕೊಂಡರೆ, ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಾಧಾ ಕೃಷ್ಣ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಒಂದೇ ಒಂದು ಫೈಟ್ ಇಲ್ಲ ಎನ್ನುವ ವಿಚಾರ ಚಿತ್ರತಂಡಕ್ಕೆ ಹಿನ್ನಡೆ ತಂದಿದೆ. ಮಾಸ್ ಅವತಾರ ಬಿಟ್ಟು ಪ್ರಭಾಸ್ ಭಿನ್ನ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದರು. ಇದನ್ನು ಪ್ರೇಕ್ಷಕರು ಇಷ್ಟಪಟ್ಟಿಲ್ಲ.
ಇದನ್ನೂ ಓದಿ: ‘ರಾಧೆ ಶ್ಯಾಮ್’ಗೆ ಪ್ರಬಲ ಪೈಪೋಟಿ ನೀಡುತ್ತಿರುವ ‘ದಿ ಕಾಶ್ಮೀರ್ ಫೈಲ್ಸ್’; ಮೊದಲ ದಿನದ ಕಲೆಕ್ಷನ್ ಎಷ್ಟು? ಇಲ್ಲಿದೆ ಲೆಕ್ಕಾಚಾರ
Radhe Shyam: ತೆಲುಗಿನಲ್ಲಿ ಗೆದ್ದು ಹಿಂದಿಯಲ್ಲಿ ಮುಗ್ಗರಿಸಿದ ‘ರಾಧೆ ಶ್ಯಾಮ್’; ಕಲೆಕ್ಷನ್ ವಿವರ ಇಲ್ಲಿದೆ
Published On - 6:17 pm, Tue, 15 March 22