ರಘು ದೀಕ್ಷಿತ್ 2ನೇ ಮದುವೆ: ಗಾಯಕಿ ವಾರಿಜಶ್ರೀ ಜೊತೆ ವಿವಾಹಕ್ಕೆ ಸಜ್ಜು
2005ರಲ್ಲಿ ಮಯೂರಿ ಉಪಾಧ್ಯ ಜೊತೆ ರಘು ದೀಕ್ಷಿತ್ ವಿವಾಹ ನೆರವೇರಿತ್ತು. 2019ರಲ್ಲಿ ಅವರು ವಿಚ್ಛೇನದ ಪಡೆದಿದ್ದರು. ಈಗ ರಘು ದೀಕ್ಷಿತ್ ಅವರು ಗಾಯಕಿ, ಕೊಳಲುವಾದಕಿ ವಾರಿಜಶ್ರೀ ವೇಣುಗೋಪಾಲ್ ಜೊತೆ ಮದುವೆ ಆಗಲು ಸಜ್ಜಾಗಿದ್ದಾರೆ. ಶೀಘ್ರದಲ್ಲೇ ರಘು ದೀಕ್ಷಿತ್ ಹಾಗೂ ವಾರಿಜಶ್ರೀ ಮದುವೆ ನಡೆಯಲಿದ್ದು, ಸ್ಥಳ ಮತ್ತು ದಿನಾಂಕದ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.

ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ ಹಾಗೂ ಸಿಂಗರ್ ವಾರಿಜಶ್ರೀ ವೇಣುಗೋಪಾಲ್ (Varijashree Venugopal) ಅವರು ಶೀಘ್ರದಲ್ಲೇ ವಿವಾಹ ಆಗಲಿದ್ದಾರೆ. ಸಿನಿಮಾ ಸಂಗೀತ ಲೋಕದಲ್ಲಿ ರಘು ದೀಕ್ಷಿತ್ (Raghu Dixit) ಅವರಿಗೆ ಸಖತ್ ಬೇಡಿಕೆ ಇದೆ. ಈಗಾಗಲೇ ಮೊದಲ ಮದುವೆಯಿಂದ ವಿಚ್ಛೇದನ ಪಡೆದಿರುವ ಅವರು 2ನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ. ಗ್ರ್ಯಾಮಿ ನಾಮನಿರ್ದೇಶಿತ ಗಾಯಕಿ, ಕೊಳಲು ವಾದಕಿ ವಾರಿಜಶ್ರಿ ಅವರ ಜೊತೆ ರಘು ದೀಕ್ಷಿತ್ ಸಪ್ತಪದಿ ತುಳಿಯಲಿದ್ದಾರೆ. ಈ ಬಗ್ಗೆ ‘ಟೈಮ್ಸ್ ಆಫ್ ಇಂಡಿಯಾ’ಗೆ ಅವರು ಮಾಹಿತಿ ನೀಡಿದ್ದಾರೆ.
ರಘು ದೀಕ್ಷಿತ್ ಅವರಿಗೆ ಈಗ 50 ವರ್ಷ ವಯಸ್ಸು. 2ನೇ ಮದುವೆ ಬಗ್ಗೆ ಅವರು ಈ ಮೊದಲು ಯೋಚಿಸಿರಲಿಲ್ಲ. ಆದರೆ ವಾರಿಜಶ್ರೀ ಜೊತೆ ಒಡನಾಟ ಬೆಳೆದ ಬಳಿಕ ಅವರ ನಿರ್ಧಾರ ಬದಲಾಯಿತು. ಅವರ ಈ ನಿರ್ಧಾರಕ್ಕೆ ಎರಡೂ ಕುಟುಂಬದವರ ಬೆಂಬಲ ಸಿಕ್ಕಿದೆ. ಹಾಗಾಗಿ ರಘು ದೀಕ್ಷಿತ್ ಮತ್ತು ವಾರಿಜಶ್ರಿ ಅವರು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ರೀತಿ ಆಗಲಿದೆ ಅಂತ ನಾನು ಊಹಿಸಿರಲಿಲ್ಲ. ನನ್ನ ಜೀವನದುದ್ದಕ್ಕೂ ಒಂಟಿಯಾಗಿರಲು ನಾನು ಸಿದ್ಧನಾಗಿದ್ದೆ. ಆದರೆ ಜೀವನದ ಪ್ಲ್ಯಾನ್ ಬೇರೆ ಆಗಿತ್ತು. ಬಲವಾದ ಸ್ನೇಹದಿಂದ ಪ್ರಾರಂಭವಾದದ್ದು ಸ್ವಾಭಾವಿಕವಾಗಿ ಪ್ರೀತಿ ಮತ್ತು ಒಡನಾಟವಾಗಿ ಬೆಳೆಯಿತು. ನಾವು ಒಂದೇ ರೀತಿಯ ಆಸಕ್ತಿಗಳನ್ನು ಹೊಂದಿದ್ದೇವೆ. ವಾರಿಜಶ್ರೀ ಅವರ ಪೋಷಕರ ಆಶೀರ್ವಾದದೊಂದಿಗೆ, ನಮ್ಮ ಜೀವನದ ಈ ಹೊಸ ಅಧ್ಯಾಯವನ್ನು ಒಟ್ಟಿಗೆ ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ’ ಎಂದು ರಘು ದೀಕ್ಷಿತ್ ಅವರು ಹೇಳಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ವಾರಿಜಶ್ರೀ ಅವರಿಗೆ ಈಗ 34 ವರ್ಷ ವಯಸ್ಸು. ರಘು ದೀಕ್ಷಿತ್ ಹಾಗೂ ವಾರಿಜಶ್ರೀ ನಡುವೆ ವಯಸ್ಸಿನ ದೊಡ್ಡ ಅಂತರ ಇದೆ. ಆ ಕಾರಣಕ್ಕಾಗಿ ಅಭಿಮಾನಿಗಳಿಗೆ ಈ ಮದುವೆಯ ನಿರ್ಧಾರವು ಅಚ್ಚರಿಯನ್ನುಂಟು ಮಾಡಿದೆ. ವಾರಿಜಶ್ರೀ ಅವರದ್ದು ಸಂಗೀತಗಾರರ ಕುಟುಂಬ. ವಾರಿಜಶ್ರೀ ತಂದೆ ವೇಣುಗೋಪಾಲ್ ಅವರು ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಇದನ್ನೂ ಓದಿ: ಮೊದಲು ಆಚೆ ಹೋಗಿ ಎಂದು ತಳ್ಳಿದ್ದೆ; ಹಳೆ ಘಟನೆ ನೆನೆದ ರಘು ದೀಕ್ಷಿತ್
ರಘು ದೀಕ್ಷಿತ್ ಮತ್ತು ವಾರಿಜಶ್ರೀ ವೇಣುಗೋಪಾಲ್ ಅವರು ಸಾಕಷ್ಟು ವಿಡಿಯೊ ಸಾಂಗ್ ಆಲ್ಬಂಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ. ಇಬ್ಬರ ನಡುವೆ ಸ್ನೇಹ-ಪ್ರೀತಿ ಮೂಡಿದೆ. ಇಬ್ಬರ ಮದುವೆಯ ಸ್ಥಳ ಮತ್ತು ದಿನಾಂಕದ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ. 2005ರಲ್ಲಿ ಡ್ಯಾನ್ಸರ್ ಮಯೂರಿ ಉಪಾಧ್ಯ ಜೊತೆ ರಘು ದೀಕ್ಷಿತ್ ವಿವಾಹ ನೆರವೇರಿತ್ತು. 2019ರಲ್ಲಿ ಅವರಿಬ್ಬರು ವಿಚ್ಛೇನದ ಪಡೆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




