ಹೇಗೆ ನಡೆಯುತ್ತಿದೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾ ಕೆಲಸ?

ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆ ಸುತ್ತಮುತ್ತ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ಇದೇ ವರ್ಷಾಂತ್ಯದಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ರಾಗಿಣಿ ದ್ವಿವೇದಿ, ದೊಡ್ಡಣ್ಣ, ಕುಮಾರ್ ಬಂಗಾರಪ್ಪ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ. ಚಿತ್ರದ ಬಗ್ಗೆ ಇಲ್ಲಿದೆ ಮಾಹಿತಿ..

ಹೇಗೆ ನಡೆಯುತ್ತಿದೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾ ಕೆಲಸ?
Sarkari Nyaya Bele Angadi Movie Team

Updated on: Aug 12, 2025 | 9:21 PM

ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಈ ಸಿನಿಮಾ ಸೆಟ್ಟೇರಿತ್ತು. ಈಗ ಸಿನಿಮಾದ ಶೂಟಿಂಗ್ ಬಗ್ಗೆ ಚಿತ್ರತಂಡ ಅಪ್​ಡೇಟ್ ನೀಡಿದೆ. ಈಗಾಗಲೇ ಮುಕ್ಕಾಲು ಭಾಗ ಶೂಟಿಂಗ್ ಮುಗಿಸಲಾಗಿದೆ. ಅಂತಿಮ ಹಂತದ ಚಿತ್ರೀಕರಣ ಮಾತ್ರ ಬಾಕಿ ಇದೆ. ಆ ಕುರಿತು ಮಾಹಿತಿ ನೀಡಲು ಇತ್ತೀಚೆಗೆ ಸುದ್ದಿಗೋಷ್ಠಿ ಮಾಡಲಾಯಿತು. ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ (Sarkari Nyaya Bele Angadi) ಸಿನಿಮಾದ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಲಾಗಿದೆ. ರಾಗಿಣಿ ಜೊತೆ ಕುಮಾರ್ ಬಂಗಾರಪ್ಪ, ದೊಡ್ಡಣ್ಣ ಮುಂತಾದವರು ನಟಿಸುತ್ತಿದ್ದಾರೆ.

ಶೀರ್ಷಿಕೆಯ ಕಾರಣದಿಂದಲೇ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾ ಗಮನ ಸೆಳೆಯುತ್ತಿದೆ. ಸಾರ್ವಜನಿಕ ಪಡಿತರ ವ್ಯವಸ್ಥೆಯ ಸುತ್ತ ನಡೆಯುವ ಕಥೆಯನ್ನು ಈ ಸಿನಿಮಾ ಹೊಂದಿದೆ. ಗ್ರಾಮೀಣ ಪ್ರದೇಶದಲ್ಲಿ ಪಡಿತರ ವಿತರಣೆಯಲ್ಲಿ ನಡೆಯುವ ಆಗು-ಹೋಗುಗಳ ಬಗ್ಗೆ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಇಷ್ಟು ವರ್ಷಗಳಲ್ಲಿ ಗ್ಲಾಮರಸ್ ಪಾತ್ರಗಳ ಮೂಲಕ ಮಿಂಚಿದ್ದ ರಾಗಿಣಿ ದ್ವಿವೇದಿ ಅವರು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾದಲ್ಲಿ ಹಳ್ಳಿ ಹುಡುಗಿಯ ಪಾತ್ರ ಮಾಡುತ್ತಿದ್ದಾರೆ.

ಸಿನಿಮಾದ ಶೂಟಿಂಗ್ ಬಗ್ಗೆ ರಾಗಿಣಿ ದ್ವಿವೇದಿ ಮಾತನಾಡಿದರು. ‘ಇದು ಅಪ್ಪಟ ಗ್ರಾಮೀಣ ಸೊಗಡಿನ ಸಿನಿಮಾ. ನಾನು ಮೊದಲ ಬಾರಿಗೆ ಈ ಚಿತ್ರದಲ್ಲಿ ಗ್ರಾಮೀಣ ಭಾಗದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಹಳ್ಳಿ ಹುಡುಗಿಯೊಬ್ಬಳು ಊರಿನ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ನಡೆಯುವ ಭ್ರಷ್ಟ ವ್ಯವಸ್ಥೆಯ ವಿರುದ್ದ ಹೇಗೆ ಹೋರಾಡುತ್ತಾಳೆ ಎಂಬುದೇ ಸಿನಿಮಾದ ಕಥೆ. ಮಂಡ್ಯದ ಹಳ್ಳಿಯ ಪರಿಸರದಲ್ಲಿ ಸಿನಿಮಾ ಮೂಡಿಬರುತ್ತಿದೆ. ಗ್ರಾಮೀಣ ಜನರಿಗೆ ಖಂಡಿತ ಈ ಸಿನಿಮಾ ಇಷ್ಟವಾಗುತ್ತದೆ’ ಎಂದು ರಾಗಿಣಿ ದ್ವಿವೇದಿ ಹೇಳಿದ್ದಾರೆ.

ನಟ ಕುಮಾರ್ ಬಂಗಾರಪ್ಪ ಅವರು ಮಾತನಾಡಿ, ‘ಹಳ್ಳಿಯ ಜನರಿಗೆ ಇಷ್ಟವಾಗುವ ಕಥೆ ಈ ಚಿತ್ರದಲ್ಲಿದೆ. ಪಡಿತರ ವ್ಯವಸ್ಥೆಯ ಲೋಪಗಳನ್ನು ಬಹುತೇಕ ಜನರು ಅನುಭವಿಸಿರುತ್ತಾರೆ. ಅಂತಹ ಎಲ್ಲರಿಗೂ ಈ ಸಿನಿಮಾ ಮನ ಮುಟ್ಟುತ್ತದೆ. ಬಹಳ ಸಮಯದ ಬಳಿಕ ನಾನು ಈ ಸಿನಿಮಾದಲ್ಲಿ ಹಳ್ಳಿಯ ಜನಸಾಮಾನ್ಯ ವ್ಯಕ್ತಿಯ ಪಾತ್ರ ಮಾಡಿದ್ದೇನೆ. ಸಿನಿಮಾ ಬಹಳ ಚೆನ್ನಾಗಿ ತೆರೆಮೇಲೆ ಬರುತ್ತಿದೆ. ಆಹಾರ ಭದ್ರತೆಯ ಮೇಲೆ ಮಾಡಿರುವ ಈ ಸಿನಿಮಾದಲ್ಲಿ ಉತ್ತಮ ಸಂದೇಶವಿದೆ’ ಎಂದರು.

ಇದನ್ನೂ ಓದಿ: ರಾಗಿಣಿ ನಿಜ ಜೀವನಕ್ಕೆ ಹತ್ತಿರವಾಗಿದೆ ‘ಜಾವ’ ಸಿನಿಮಾ ಕಥೆ

‘ತಾಯವ್ವ’ ಸಿನಿಮಾ ಖ್ಯಾತಿಯ ನಿರ್ದೇಶಕ ಸಾತ್ವಿಕ ಪವನ ಕುಮಾರ್ ಅವರು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಛಾಯಾಗ್ರಹಣವನ್ನೂ ಅವರೇ ಹೇಳಿದ್ದಾರೆ. ‘ಜಯಶಂಕರ ಟಾಕೀಸ್’ ಸಂಸ್ಥೆಯ ಮೂಲಕ ತೇಜು ಮೂರ್ತಿ ಮತ್ತು ಎಸ್. ಪದ್ಮಾವತಿ ಅವರು ಬಂಡವಾಳ ಹೂಡಿದ್ದಾರೆ. ಬಿ. ರಾಮಮೂರ್ತಿ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಈ ಸಿನಿಮಾದ ಹಾಡುಗಳಿಗೆ ಅನಂತ ಆರ್ಯನ್ ಸಂಗೀತ ನೀಡಿದಾರೆ. ಹಿರಿಯ ರಾಜಕಾರಣಿ ಶಿವರಾಮೇಗೌಡ ಸಹ ಈ ಚಿತ್ರ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.