ಸರ್ಕಾರಕ್ಕೆ ಉಗ್ರ ಹೋರಾಟದ ಎಚ್ಚರಿಕೆ ಕೊಟ್ಟ ಯಶ್ ತಾಯಿ ಪುಷ್ಪಾ; ಅಂಥದ್ದೇನಾಯ್ತು?
ಪುಷ್ಪಾ ಅರುಣ್ ಕುಮಾರ್ ನಿರ್ಮಾಣದ ‘ಕೊತ್ತಲವಾಡಿ’ ಚಿತ್ರ ಆಗಸ್ಟ್ 1ರಂದು ಬಿಡುಗಡೆಯಾಯಿತು. ಸಿನಿಮಾವನ್ನು ನೋಡದೆ ನೆಗೆಟಿವ್ ವಿಮರ್ಶೆಗಳನ್ನು ಹಂಚಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಕೋರಿದ್ದಾರೆ. ಅವರು ಸಾಮಾಜಿಕ ಜಾಲತಾಣಗಳಲ್ಲಿನ ಈ ರೀತಿಯ ನಕಾರಾತ್ಮಕ ಪ್ರಚಾರದಿಂದ ಕನ್ನಡ ಚಿತ್ರರಂಗಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಪುಷ್ಪಾ ಅರುಣ್ ಕುಮಾರ್ ನಿರ್ಮಾಣದ ‘ಕೊತ್ತಲವಾಡಿ’ (Kothalavadi) ಸಿನಿಮಾ ಆಗಸ್ಟ್ 1ರಂದು ರಿಲೀಸ್ ಆಯಿತು. ಈ ಸಿನಿಮಾಗೆ ಪೃಥ್ವಿ ಅಂಬರ್ ಹೀರೋ. ಗೋಪಾಲ್ ದೇಶಪಾಂಡೆ, ರಾಜೇಶ್ ನಟರಂಗ ಸೇರಿದಂತೆ ಅನೇಕರು ಈ ಚಿತ್ರದ ಭಾಗ ಆಗಿದ್ದಾರೆ. ಈ ಸಿನಿಮಾ ರಿಲೀಸ್ಗೂ ಮೊದಲೇ ಪುಷ್ಪಾ ಅವರು ಸಾಕಷ್ಟು ಸಂದರ್ಶನ ನೀಡಿದ್ದರು. ಸಿನಿಮಾ ರಿಲೀಸ್ ಬಳಿಕವೂ ಇದನ್ನು ಮುಂದುವರಿಸಿದ್ದಾರೆ. ಅನೇಕ ಕಡೆಗಳಲ್ಲಿ ಪುಷ್ಪಾ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು ಸರ್ಕಾರಕ್ಕೆ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.
ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ ಹಾಗೂ ವೈರತ್ವ ಇದ್ದೇ ಇದೆ. ಸಿನಿಮಾ ರಂಗ ಕೂಡ ಇದಕ್ಕೆ ಹೊರತಾಗಿಲ್ಲ. ಚಿತ್ರವನ್ನು ನೋಡದೇ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ವಿಮರ್ಶೆ ಹಂಚುವ ಕೆಲಸ ಮಾಡುತ್ತಿದ್ದಾರಂತೆ. ಈ ರೀತಿಯ ಆರೋಪವನ್ನು ಪುಷ್ಪಾ ಮಾಡಿದ್ದಾರೆ. ಜೊತೆಗೆ ಇಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಪುಷ್ಪಾ ಕೋರಿಕೆ.
‘ಟಾಕಿಂಗ್ ಪ್ಯಾರಟ್’ ಹೆಸರಿನ ಯೂಟ್ಯೂಬ್ ಚಾನೆಲ್ಗೆ ಪುಷ್ಪಾ ಸಂದರ್ಶನ ನೀಡಿದ್ದಾರೆ. ‘ನಮ್ಮ ಸಿನಿಮಾದ ಪ್ರಚಾರ ನೋಡಿ ಕೆಲವರು ನೆಗೆಟಿವ್ ಟಾಕ್ ಹಬ್ಬಿಸಿದ್ದರು. ಸಿನಿಮಾ ಮಾಡುವವರಿಗೆ ನಿಜಕ್ಕೂ ಕಷ್ಟ ಇದೆ. ಇಲ್ಲಿ ನೂರು ತೊಂದರೆ ಇದೆ. ಮುಖ್ಯಮಂತ್ರಿ ಎದುರು ಹೋಗ್ತೀನಿ. ಇದನ್ನು ತಡೆಯಿರಿ ಎಂದು ಕೇಳುತ್ತೇನೆ. ಇದು ಸರ್ಕಾರದ ಕೆಲಸ’ ಎಂದು ಪುಷ್ಪಾ ಹೇಳಿದ್ದಾರೆ.
‘ಸಿನಿಮಾ ನೋಡಿ ಬರೆದರೆ ತೊಂದರೆ ಇಲ್ಲ. ಆದರೆ, ಸುಮಾರು ಜನರು ಸಿನಿಮಾ ನೋಡದೇ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದಾರೆ. ಇದರಿಂದ ಅನೇಕರಿಗೆ ತೊಂದರೆ ಆಗುತ್ತಿದೆ. ನಾವು ದೂರು ತೆಗೆದುಕೊಂಡು ಬಂದಾಗ ಇದನ್ನು ಸ್ವೀಕರಿಸಬೇಕು. ಇಲ್ಲವಾದಲ್ಲಿ ರಾಕ್ಲೈನ್ ವೆಂಕಟೇಶ್ಗೆ ಹೇಳಿ ಉಗ್ರ ಹೋರಾಟ ಮಾಡುತ್ತೇವೆ’ ಎಂದು ಪುಷ್ಪಾ ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಬಂದ್ಮೇಲೆ ಹೋಗೋ ಜಾಯಮಾನ ಅಲ್ಲ’; ಮುಂದಿನ ಸಿನಿಮಾ ಬಗ್ಗೆ ಅಪ್ಡೇಟ್ ಕೊಟ್ಟ ಪುಷ್ಪಾ
‘ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳು ಏಕೆ ಓಡುತ್ತಿಲ್ಲ ಎಂಬುದಕ್ಕೆ ಈ ರೀತಿಯ ಕುತಂತ್ರಗಳೇ ಕಾರಣ. ನನ್ನ ದುಡ್ಡು ನಾನು ತಡೆದುಕೊಳ್ಳುತ್ತೇನೆ. ಆದರೆ, ಇನ್ನೊಬ್ಬರಿಗೆ ಕಷ್ಟ ಆಗಬಹುದು. ನಾವು ಒಂದು ನಿರ್ಧಾರಕ್ಕೆ ಬರಲೇಬೇಕು. ಮುಂದಿನ ದಿನಗಳಲ್ಲಿ ಅದನ್ನು ಮಾಡಿಯೇ ಮಾಡುತ್ತೇನೆ’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








