
ಒಂದಷ್ಟು ಕಾರಣಗಳಿಂದ ನಿರೀಕ್ಷೆ ಹುಟ್ಟುಹಾಕಿರುವ ‘ಕರಾವಳಿ’ ಸಿನಿಮಾ (Karavali Movie) ಈಗ ವಿವಾದದ ಮೂಲಕ ಸುದ್ದಿ ಆಗುತ್ತಿದೆ. ಈ ಸಿನಿಮಾದ ಟ್ರೇಲರ್ ಪ್ರೀಮಿಯರ್ ವೇಳೆ ನಟ ಪ್ರಜ್ವಲ್ ದೇವರಾಜ್ (Prajwal Devaraj) ಅವರ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ನಟ ರಾಜ್ ಬಿ. ಶೆಟ್ಟಿ ಅವರು ಈ ಸಿನಿಮಾದ ಪಾತ್ರವರ್ಗಕ್ಕೆ ಸೇರ್ಪಡೆ ಆದ ಬಳಿಕ ಪ್ರಜ್ವಲ್ ಅವರಿಗೆ ಅಸಮಾಧಾನ ಉಂಟಾಗಿರಬಹುದಾ ಎಂಬ ಪ್ರಶ್ನೆ ಇದೆ. ಅದಕ್ಕೆ ಸ್ವತಃ ರಾಜ್ ಶೆಟ್ಟಿ (Raj B Shetty) ಅವರು ಉತ್ತರ ನೀಡಿದ್ದಾರೆ. ಇಂಥ ವಿಷಯಗಳನ್ನು ಚರ್ಚೆ ಮಾಡುತ್ತಿರುವುದರಿಂದಲೇ ಕನ್ನಡ ಚಿತ್ರರಂಗ ಉದ್ಧಾರ ಆಗಿಲ್ಲ ಅವರು ಖಡಕ್ ಆಗಿ ಹೇಳಿದ್ದಾರೆ.
‘ಈ ಸಿನಿಮಾದಲ್ಲಿ ನಾನು ಒಂದು ಅತಿಥಿ ಪಾತ್ರ ಮಾಡುತ್ತಿದ್ದೇನೆ. ಈ ಸಿನಿಮಾದ ಟೈಟಲ್, ಪೋಸ್ಟರ್ ಎಲ್ಲವೂ ಪ್ರಜ್ವಲ್ ದೇವರಾಜ್ ಅವರ ಹೆಸರಲ್ಲೇ ಇದೆ. ಅದು ನನಗೆ ಗೊತ್ತಿತ್ತು ಕೂಡ. ನಾನು ಬಂದಮೇಲೆ ಇರಿಸುಮುರಿಸು ಆಯ್ತಾ ಎಂಬ ಪ್ರಶ್ನೆ ಕೇಳಿದ್ದೀರಿ. ನಾನು ಈ ಚಿತ್ರಕ್ಕೆ ಮೊದಲ ಆಯ್ಕೆ ಆಗಿರಲಿಲ್ಲ. ನನಗಿಂತ ದೊಡ್ಡ ನಟ ಇವರ ಆಯ್ಕೆಯಾಗಿತ್ತು. ಆದರೆ ಕಾರಣಾಂತರಗಳಿಂದ ಅವರು ಆಗಲಿಲ್ಲ ಎಂದಿದ್ದಕ್ಕೆ ಕೊನೆಯಲ್ಲಿ ನಾನು ಬಂದಿದ್ದು. ಆ ಪಾತ್ರ ಮೊದಲೇ ಇತ್ತು’ ಎಂದು ರಾಜ್ ಬಿ. ಶೆಟ್ಟಿ ಅವರು ಸ್ಪಷ್ಟನೆ ನೀಡಿದ್ದಾರೆ.
‘ನಾನು ಇಲ್ಲಿ ಯಾರ ಜೊತೆಗೂ ಪೈಪೋಟಿ ಮಾಡೋಕೆ ಬಂದಿಲ್ಲ. ನಾವು ಇಲ್ಲಿ ಸಿನಿಮಾ ಮಾಡುತ್ತಿದ್ದೇವೆ. ಎಲ್ಲಕ್ಕಿಂತ ಮೊದಲು ನಾನೊಬ್ಬ ತಂತ್ರಜ್ಞ. ಸಿನಿಮಾ ಮಾಡೋದಕ್ಕೆ ಎಷ್ಟು ಶ್ರಮ ಇರುತ್ತದೆ ಎಂಬುದು ನನಗೆ ಗೊತ್ತು. ನನ್ನೊಬ್ಬನ ಜೀವನ, ನನ್ನೊಬ್ಬನ ಹೆಸರು, ನನ್ನೊಬ್ಬನ ಪೈಪೋಟಿ ಎಂಬುದರಲ್ಲಿ ನನಗೆ ಸಮ್ಮತಿ ಇಲ್ಲ. ಸಿನಿಮಾ ಎಂಬುದು ನನಗಿಂತ ದೊಡ್ಡದು. ಒಂದು ವೇಳೆ ಮುಂದಿನ ಸಿನಿಮಾದಲ್ಲಿ ನನ್ನ ಹೆಸರು ಹಾಕದೇ ಇದ್ದರೂ ಕೂಡ ಯಾರೂ ಬರಲ್ಲ’ ಎಂದು ರಾಜ್ ಬಿ. ಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ: ‘ಕರಾವಳಿ’ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಡಬ್ ಮಾಡಲ್ವ? ನಿರ್ದೇಶಕರ ಸ್ಪಷ್ಟನೆ ಇದು
‘ಇಂಥ ವಿಷಯ ಮಾತನಾಡಬೇಕಾಗಿ ಬಂದಿರುವುದು ದುರದೃಷ್ಟಕರ. ಕುಂದಾಪುರದ ಒಬ್ಬ ಹುಡುಗ, 9ನೇ ತರಗತಿಗೆ ಮನೆಬಿಟ್ಟು ಓಡಿಬಂದು, ಇವತ್ತು ಇಷ್ಟು ದೊಡ್ಡ ಸಿನಿಮಾ ಮಾಡಿದ್ದಾರೆ. ಇಡೀ ಭಾರತ ನೋಡುವಂತಹ ಗುಣಮಟ್ಟದಲ್ಲಿ ಸಿನಿಮಾ ಮಾಡಿದ್ದಾರೆ. ಆದರೆ ನಾವು ಬೇರೆ ವಿಷಯದ ಬಗ್ಗೆ ಮಾತನಾಡುತ್ತಿದ್ದೇವೆ. ಇದು ತುಂಬ ಬೇಸರದ ವಿಷಯ. ಮನುಷ್ಯತ್ವ ಬಹಳ ಮುಖ್ಯ’ ಎಂದಿದ್ದಾರೆ ರಾಜ್ ಬಿ. ಶೆಟ್ಟಿ.
‘ಇಲ್ಲಿ ಯಾವ ಪೈಪೋಟಿ ಇದೆ? ಇದು ಕೇವಲ ನನ್ನ ಸಿನಿಮಾನಾ? ಮಿತ್ರ, ಶ್ರೀಧರ್ ಮುಂತಾದವರು ಈ ಸಿನಿಮಾದಲ್ಲಿ ಮಾಡಿಲ್ವಾ? ನಾನು ಅವರಿಗಿಂತ ದೊಡ್ಡ ಕಲಾವಿದನಾ? ಅವರ ಹೆಸರು ಪೋಸ್ಟರ್ನಲ್ಲಿ ಇದೆಯಾ? ಇಂಥ ವಿಷಯ ನಾವು ಮಾತನಾಡಬೇಕಾಗಿ ಬಂದಿರುವುದು ತುಂಬ ದುರದೃಷ್ಟಕರ ವಿಷಯ. ಯಾಕೆ ನಮ್ಮ ಇಂಡಸ್ಟ್ರಿ ಉದ್ಧಾರ ಆಗಲ್ಲ ಅಂತ ಕೇಳುತ್ತಾರಲ್ಲ.. ಅದಕ್ಕೆ ಉತ್ತರ ಇದು’ ಎಂದು ರಾಜ್ ಶೆಟ್ಟಿ ಹೇಳಿದ್ದಾರೆ.
‘ಯಾಕೆಂದರೆ, ನಾವು ಒಟ್ಟಿಗೆ ಕೆಲಸ ಮಾಡುತ್ತಿಲ್ಲ. ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಅವರಿಗೆ ದೊಡ್ಡ ಹೆಸರು ಬಂದರೆ ನನಗೆ ಬಹಳ ಖುಷಿ. ಕನ್ನಡದ ಒಬ್ಬ ನಟ ಇನ್ನೂ ದೊಡ್ಡ ಸ್ಟಾರ್ ಆಗಿ ಬೆಳೆದ ಎನ್ನುತ್ತೇನೆ. ಮಿತ್ರ ಅವರಿಗೆ ಹೆಸರು ಬಂದರೆ ನನಗೆ ಹೆಮ್ಮೆ ಆಗುತ್ತದೆ. ಅದಕ್ಕೆ ಅವರು ಅರ್ಹರು. ಅವರ ಬಳಿ ಕಿತ್ತುಕೊಂಡು ನಾನೇನು ಮಾಡಲಿ? ಈ ಹಿಂದಿನ ಸಿನಿಮಾಗಳಲ್ಲಿ ನಾನು ಖಳನಾಯಕನಾಗಿ ಕೂಡ ಮಾಡಿದ್ದೇನೆ. ಅಲ್ಲಿ ನನ್ನ ಕಟೌಟ್ ಹಾಕಿ ಅಂತ ನಾನು ಹೇಳಿಲ್ಲ. ‘ಸು ಫ್ರಂ ಸೋ’ ಚಿತ್ರದಲ್ಲಿ ನಾನು ಕಾಮಿಡಿ ಪಾತ್ರ ಮಾಡಿದ್ದೆ. ಆ ಚಿತ್ರದ ಪೋಸ್ಟರ್ನಲ್ಲಿ ನನ್ನ ಹೆಸರು ಹಾಕಿ ಅಂತ ನಾನು ಕೇಳಿಲ್ಲ. ನನ್ನ ಜೀವನದಲ್ಲಿ ನಾನು ಅದನ್ನು ಮಾಡಲ್ಲ. ಒಂದು ವೇಳೆ ಮಾಡಿದರೆ ಆವತ್ತು ನಾನು ಚಿತ್ರರಂಗ ಬಿಡಬೇಕು ಅಂತ ಭಾವಿಸುತ್ತೇನೆ’ ಎಂದು ರಾಜ್ ಬಿ. ಶೆಟ್ಟಿ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.